ಚಿಕ್ಕಮಗಳೂರು: ಧರ್ಮಸ್ಥಳ ವಿಚಾರದಲ್ಲಿ ಎಸ್ಐಟಿ ತನಿಖೆ ನಿಲ್ಲಿಸುವ ಹುನ್ನಾರ ಯಾವುದೆ ಕಾರಣಕ್ಕೂ ಆಗಬಾರದು, ಕಾಂಗ್ರೆಸ್ ಪಕ್ಷದಲ್ಲಿ ಇಚ್ಚಾಶಕ್ತಿ ಕೊರತೆ ಇರಬಹುದು. ಆದರೆ, ಈ ವಿಚಾರದಲ್ಲಿ ಎಸ್ಐಟಿ ತನಿಖೆ ಮಾಡಿದ್ದು ಒಳ್ಳೆ ವಿಚಾರ. ಎಷ್ಟೋ ದಶಕಗಳ ಕಾಲ ಅನ್ಯಾಯ ಆಗಿರಬಹುದು ಎಸ್ಐಟಿ ತನಿಖೆ ಆಗಲು ಬಿಡಿ ಎಂದು ಚಲನಚಿತ್ರ ನಟ ಹಾಗೂ ಹೋರಾಟಗಾರ ಚೇತನ್ ಅಹಿಂದ್ ಆಗ್ರಹಿಸಿದರು.
ಶನಿವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಅಧಿಕಾರದಲ್ಲಿರುವರು ಸತ್ಯದ ಪರವಾಗಿರಬೇಕು. ಧರ್ಮಸ್ಥಳ ವಿಚಾರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯನ್ನು ಖಂಡಿಸುತ್ತೇನೆ ಎಂದು ಹೇಳಿ ಧರ್ಮಸ್ಥಳ ವಿಚಾರದಲ್ಲಿ ಅಪಪ್ರಚಾರವಿರಬಾರದು, ಸತ್ಯ ಹೊರಬರಬೇಕು. ಎಷ್ಟೋ ದಶಕಗಳ ಕಾಲ ಭಯದ ವಾತಾವರಣವಿತ್ತು. ಗುರುತು ೬ ಮತ್ತು ೧೧ರಲ್ಲಿ ಅಸ್ತಿ ಪಂಜರ ಸಿಕ್ಕಿದೆ ಎನ್ನುವ ಮಾಹಿತಿ ಇದೆ. ಎಸ್ಐಟಿ ತಂಡದ ಮೇಲೆ ನಂಬಿಕೆ ಇದ್ದು, ದೂರುದಾರರು ಮುಂದೆ ಬರುತ್ತಿದ್ದಾರೆ ಎಂದರು.
ತನಿಖೆ ಮುಂದೂವರೆಯಬೇಕು. ಪವರ್ಫುಲ್ ಇರುವವರ ಪರವಾಗಿ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಶ್ನೆ ಬರಬಾರದು ಎಂದ ಅವರು, ಬಿಜೆಪಿ ಶಾಸಕರು ಸದನದಲ್ಲಿ ಧಮ್ಕಿ ಹಾಕುವ ರೀತಿ ಮಾತಾಡುತ್ತಿದ್ದಾರೆ. ಇವರಲ್ಲಿ ಕಾಳಜಿ ಕೊರತೆ ಹಾಗೂ ಪ್ರಜಾಪ್ರಭುತ್ವದ ಮೇಲೆ ಗೌರವ ಕೊರತೆ ಎದ್ದು ಕಾಣುತ್ತಿದೆ. ಸತ್ಯ ಹೊರಬರಬೇಕು ಎಂದು ಆಗ್ರಹಿಸಿದರು.
ಧರ್ಮಸ್ಥಳಕ್ಕೆ ಬಿಜೆಪಿ ಶಾಸಕರ ಕಾರು ರ್ಯಾಲಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವದಡಿಯಲ್ಲಿ ಯಾರು ಬೇಕಾ ದರೂ ಹೋರಾಟ ಮಾಡಲು ಹಕ್ಕಿದೆ. ಎಲ್ಲರಿಗೂ ಇರುವ ಹಕ್ಕು ಮಾದರಿ ಬಿಜೆಪಿಯವರಿಗೂ ಇರಬೇಕು. ಅಸಹಜ ಸಾವಿನ ಸತ್ಯ ಹೊರಬರಬೇಕು ಎನ್ನುವ ಅನೇಕ ಆರ್ಎಸ್ಎಸ್ ನಲ್ಲಿರುವವರು ನಮ್ಮ ಜತೆ ಇದ್ದಾರೆ. ಇದರಲ್ಲಿ ಎಡಪಂಥೀಯರು ಮಧ್ಯಪಂಥೀಯರು ಇದ್ದಾರೆ ಎಂದರು.
ನಾವು ಸಿದ್ದಾಂತ ಮೀರಿ ನಿಂತಿದ್ದೇವೆ. ಬಿಜೆಪಿಯವರು ಪವರ್ಫುಲ್ ಇರುವವರನ್ನು ಪ್ರೋಟೆಕ್ಟ್ ಮಾಡುವ ಕೆಲಸ ಮಾಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಪ್ರತಿಭಟನೆ ಯಾವ ರೀತಿ ಮಡುತ್ತಾರೋ ಅವರ ಇಷ್ಟ ಎಂದ ಅವರು, ಧಮ್ಕಿ ಹಾಕಿ ಎಲ್ಲರನ್ನು ಹೆದರಿಸಿ ಬೆದರಿಸಿ ಪ್ರತಿಭಟನೆ ಮಾಡುವುದು ಸಂವಿಧಾನ ವಿರೋಧಿ ಇಂತವ ರನ್ನು ಮುಂದಿನ ಚುನಾವಣೆಗಳಲ್ಲಿ ಜನರು ಗೆಲ್ಲಿಸಬಾರದು ಎಂದು ತಿಳಿಸಿದರು.
ನಟ ದರ್ಶನ್ ಜಾಮೀನು ರದ್ದು ವಿಚಾರ ಪ್ರತಿಕ್ರಿಯಿಸಿ, ಪ್ರಕರಣದಿಂದ ನ್ಯಾಯಾಲಯದ ಮೇಲೆ ಮತ್ತೆ ಹೆಚ್ಚು ನಂಬಿಕೆ ಬಂದಿದೆ. ಯಾರು ಎಷ್ಟು ಪ್ರಭಾವಿಯಾದರು ತಪ್ಪಿದ್ದರೇ ಕ್ರಮವಾಗುತ್ತದೆ ಎನ್ನುವುದಕ್ಕೆ ಉದಾಹರಣೆಯಾ ಗಿದೆ. ಪ್ರಜಾಪ್ರಭುತ್ವ ಮತ್ತು ಕಾನೂನಿನಡಿಯಲ್ಲಿ ನಾವೆಲ್ಲರೂ ಸಮಾನರು ಎಂದರು.
ದರ್ಶನ್ ಅಭಿಮಾನಿಗಳು ಎಂದೇಳಿಕೊಂಡು ಕೆಲವರು ನಿಂದನಾತ್ಮಕ ಮಾತುಗಳನ್ನು ಆಡುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ದರ್ಶನ್ ಎಲ್ಲಾ ಅಭಿಮಾನಿಗಳು ಈ ರೀತಿ ಮಾಡುತ್ತಿದ್ದಾರೆಂದು ಹೇಳಲು ಆಗಲ್ಲಾ, ಕೆಲವ ರಲ್ಲಿ ಬೇರೆ ಬೇರೆ ಮನಸ್ಥಿತಿ ಸಿದ್ದಾಂತಗಳು ಇರುತ್ತವೆ. ಟೀಕೆ ಟಿಪ್ಪಣಿಗಳು ಇರಬೇಕು. ಆದರೆ, ನಿಂದನಾತ್ಮಕ ಮಾತುಗಳಿಗೆ ಕಡಿವಾಣ ಹಾಕಬೇಕಿದೆ ಎಂದ ಅವರು, ನಟಿ ರಮ್ಯಾ ವಿಚಾರದಲ್ಲಿ ತಪ್ಪಿತ್ಥರನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ನಿಂದನಾತ್ಮಕ ಮಾತುಗಳನ್ನು ಆಡುವವರ ಮೇಲೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.
SIT investigation into Dharmasthala case should not be stopped
Leave a comment