ಬೆಂಗಳೂರು: ರಾಜ್ಯದ ಅರಣ್ಯ ಪ್ರದೇಶದಲ್ಲಿ ಹಲವು ದಶಕಗಳಿಂದ ಇರುವ ಜನವಸತಿ ಪ್ರದೇಶಗಳಿಗೆ ಪರಿಹಾರಾತ್ಮಕವಾಗಿ ಪರ್ಯಾಯ ಭೂಮಿ ಪಡೆದು, ಬಡ ಜನರ ಸಂಕಷ್ಟ ಪರಿಹರಿಸಲು ಕೇಂದ್ರ ಸರ್ಕಾರ ಮತ್ತು ಸುಪ್ರೀಂಕೋರ್ಟ್ ಮೊರೆ ಹೋಗಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಇಂಧನ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್, ಕಂದಾಯ ಸಚಿವ ಕೃಷ್ಣಬೈರೇಗೌಡ ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸೆಕ್ಷನ್ 4 ಮತ್ತು ಪರಿಭಾವಿತ ಅರಣ್ಯಕ್ಕೆ ಸಂಬಂಧಿಸಿದಂತೆ ರಾಜ್ಯದಾದ್ಯಂತ ಸಮಸ್ಯೆ ಇದ್ದು, ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರ ಕಂದಾಯ ಇಲಾಖೆ ಸಹಕಾರದೊಂದಿಗೆ ಮಾರ್ಗೋಪಾಯ ಹುಡುಕುತ್ತಿದೆ ಎಂದರು.
ಜನವಸತಿ ಪ್ರದೇಶ, ಸರ್ಕಾರಿ ಕಟ್ಟಡ, ಅಂಗನವಾಡಿ, ಖಾಸಗಿ ಪಟ್ಟಾ ಭೂಮಿಯನ್ನೂ ಡೀಮ್ಡ್ ಅರಣ್ಯದ ಪಟ್ಟಿಯಲ್ಲಿ ಸೇರಿಸಿ 2022ರಲ್ಲಿ ಎರಡನೇ ಬಾರಿ ಸುಪ್ರೀಂಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಸಲಾಗಿದೆ. ಈಗ ಕೊನೆಯ ಅವಕಾಶವನ್ನು ನ್ಯಾಯಾಲಯ ನೀಡಿದ್ದು, ಸಮರ್ಪಕವಾಗಿ ಜಂಟಿ ಸರ್ವೆ ನಡೆಸಿ ಪ್ರಮಾಣಪತ್ರ ಸಲ್ಲಿಸಿದರೆ ಸಮಸ್ಯೆಗೆ ಪರಿಹಾರ ದೊರಕುತ್ತದೆ. ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.
ಸೆಕ್ಷನ್ 4 ಅಧಿಸೂಚನೆ ಆಗಿದ್ದರೂ ಸೆಕ್ಷನ್ 17 ಆಗದೆ ಇರುವ ಪ್ರಕರಣಗಳು ದಶಕಗಳಿಂದ ಬಾಕಿ ಉಳಿದಿದ್ದು, ವ್ಯವಸ್ಥಾಪನಾಧಿಕಾರಿ (ಎಫ್.ಎಸ್.ಓ.)ಗಳು ತ್ವರಿತವಾಗಿ ಇದನ್ನು ಇತ್ಯರ್ಥ ಮಾಡಬೇಕು. ಜನವಸತಿ, ಕೃಷಿ ಜಮೀನು ಇಲ್ಲದ ವಿಭಾಗಗಳನ್ನು ಕೂಡಲೇ ಸೆಕ್ಷನ್ 17ಕ್ಕೆ ಪರಿವರ್ತಿಸಿ ಅರಣ್ಯ ಎಂದು ಘೋಷಿಸಬೇಕು ಎಂದು ಸಲಹೆ ನೀಡಿದರು.
ಅರಣ್ಯ ಮತ್ತು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲೆಯ ಶಾಸಕರು, ರೈತ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.
Solving the problem by providing compensatory land for forest land settlement
Leave a comment