ಬಾಳೆಹೊನ್ನೂರು: ಎಲ್ಲವನ್ನೂ ವಿರೋಧಿಸುತ್ತ ಹೋದರೆ ಹೇಗೆ? ಅನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಹದಿನೈದು ದಿನಗಳಲ್ಲಿ ಇ–ಸ್ವತ್ತು ದಾಖಲೆಯನ್ನು ಪಡೆಯಬಹುದಾಗಿದೆ. ಇದರಿಂದ ರೈತರಿಗೆ ಒಳಿತಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಕಳೆದ ವಾರ ಸುರಿದ ಗಾಳಿ ಮಳೆಗೆ ಮರದ ಕೊಂಬೆ ಬಿದ್ದು ಮೃತಪಟ್ಟ ಚಿಕ್ಕಮಗಳೂರು ತಾಲ್ಲೂಕು ಖಾಂಡ್ಯ ಹೋಬಳಿ ಬಿಳುಕೊಪ್ಪದ ಅನಿಲ್ ರೊಜಾರಿಯೊ ಕುಟುಂಬಕ್ಕೆ ₹ 5 ಲಕ್ಷದ ಪರಿಹಾರದ ಚೆಕ್ ಹಸ್ತಾಂತರಿಸಿ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ರೈತರು ಜಮೀನಿನಲ್ಲಿ ಕಟ್ಟುವ ಮನೆಗೆ ವಿದ್ಯುತ್ ಸಂಪರ್ಕ ಪಡೆಯಲು ಇ–ಸ್ವತ್ತು ಕಡ್ಡಾಯ. ಟ್ರಾನ್ಸ್‌ಫಾರ್ಮರ್ ಸಂಪರ್ಕ ಕಲ್ಪಿಸುವಂತೆ ಕೋರಿ 4.5 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. 3 ಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಟ್ರಾನ್ಸ್‌ಫಾರ್ಮರ್ ಅಳವಡಿಕೆಗೆ ಯಾರೂ ₹ 3 ಲಕ್ಷ ಅಥವಾ ₹ 4 ಲಕ್ಷ ಕಟ್ಟಬೇಕಿಲ್ಲ. ಯಾರಾದರೂ ಕಟ್ಟಿದ್ದಲ್ಲಿ ಸರ್ಕಾರದ ಗಮನಕ್ಕೆ ತರಬೇಕು ಎಂದು ಅವರು ಹೇಳಿದರು.
ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ಹಣ ಮಾತ್ರ ಕೊಟ್ಟರೆ ಸಾಲದು. ನೈತಿಕ ಬಲ ತುಂಬುವ ಕೆಲಸ ಆಗಬೇಕು. ಕೊಪ್ಪ ತಾಲ್ಲೂಕಿನ ಮೇಗೂರು ಹೊಸತೋಟ ಬಳಿ ಆಟೊ ಮೇಲೆ ಮರ ಬಿದ್ದು ಚಾಲಕ ರತ್ನಾಕರ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಕುಟುಂಬಕ್ಕೂ ₹ 5 ಲಕ್ಷ ಪರಿಹಾರ ನೀಡಲಾಗುವುದು ಎಂದು ಸಚಿವ ಅವರು ತಿಳಿಸಿದರು.
ಶಾಸಕ ಟಿ.ಡಿ.ರಾಜೇಗೌಡ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ, ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಬಿ.ಕೆ.ಸುದರ್ಶನ್, ತಹಸೀಲ್ದಾರ್ ರೇಷ್ಮಾ ಶೆಟ್ಟಿ, ಖಾಂಡ್ಯ ಹೋಬಳಿ ರಾಜಸ್ವ ನಿರೀಕ್ಷಕ ಎಸ್.ಆರ್.ವಿನಯ್, ಗ್ರಾಮ ಆಡಳಿತ ಅಧಿಕಾರಿ ಕೆ.ಆರ್.ಸೌಧ, ಮುಖಂಡರಾದ ಪ್ರಶಾಂತ್ ಎಲ್.ಶೆಟ್ಟಿ, ಬಿ.ಸಿ ಮಂಜುನಾಥ್, ಕಾಫಿ ಗಿರೀಶ್, ಮಹಮ್ಮದ್ ಹನೀಫ್, ಆಶಾ ನಾರಾಯಣಗೌಡ, ಬಿ.ಕೆ ಮಧುಸೂದನ್, ಕೆ.ಎಸ್ ಗಣೇಶ್, ಚಂದ್ರಶೇಖರ್ ರೈ ಪಾಲ್ಗೊಂಡಿದ್ದರು.
Apply online and get e-asset record within fifteen days
Leave a comment