ಚಿಕ್ಕಮಗಳೂರು: : ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತಿತರ ಸರ್ಕಾರಿ ಇಲಾಖೆಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಜೂನ್ ೨೧ ರಂದು ಬೆಳಿಗ್ಗೆ ೬ ಗಂಟೆಗೆ ನಗರದ ವಿಜಯಪುರದ ಒಕ್ಕಲಿಗರ ಸಮುದಾಯ ಭವನದಲ್ಲಿ ಯೋಗ ಸಂಗಮ ಕಾರ್ಯಕ್ರಮ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕರಡ್ಡಿ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುವ ಸಂಬಂಧ ನಿನ್ನೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಅಂದು ಜಿಲ್ಲೆಯ ವಿವಿಧ ಕಡೆಗಳಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಮೂಡಿಗೆರೆ ತಾಲ್ಲೂಕಿನ ದೇವವೃಂದ, ಕಡೂರು ತಾಲ್ಲೂಕಿನ ಎಮ್ಮೆದೊಡ್ಡಿ, ಬಿಳುವಾಲ, ಕೊಪ್ಪ ತಾಲ್ಲೂಕಿನ ನಾರ್ವೆ, ತರೀಕೆರೆ ತಾಲ್ಲೂಕಿನ ನಂದಿ ಸರ್ಕಾರಿ ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ಯೋಗ ಸಂಗಮವನ್ನು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರಚಾರ ಮಾಡಬೇಕೆಂದು ತಿಳಿಸಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಗೀತಾ ಸಭೆಗೆ ಮಾಹಿತಿ ನೀಡಿ, ಯೋಗ ಸಂಗಮಕ್ಕೆ ಪೂರ್ವಭಾವಿಯಾಗಿ ಜೂ.೫ ರಂದು ಹಸಿರು ಯೋಗ (ಯೋಗ ಹರಿತ್) ಕಾರ್ಯಕ್ರಮವನ್ನು ಆಯುಷ್ ಇಲಾಖೆ ಆವರಣದಲ್ಲಿ ಯಶಸ್ವಿಯಾಗಿ ನಡೆಸಲಾಗಿದ್ದು, ಇಂದು ಬೆಳಿಗ್ಗೆ ೯.೩೦ ರಿಂದ ೧೦.೩೦ರವರೆಗೆ ಜಿಲ್ಲಾ ಕಾರಾಗೃಹದಲ್ಲಿ ಖೈದಿಗಳಿಗೆ ಹಾಗೂ ಮಧ್ಯಾಹ್ನ ೩ ರಿಂದ ೪.೩೦ರವರೆಗೆ ಕೆ.ಎಸ್.ಆರ್.ಟಿ.ಸಿ.ಯ ತೇಗೂರು ತರಬೇತಿ ಕೇಂದ್ರದಲ್ಲಿ ಯೋಗ ತರಬೇತಿಯನ್ನು ನೀಡಲಾಯಿತು.
ಜೂನ್ ೧೬ ರಂದು ಬೆಳಿಗ್ಗೆ ೬.೩೦ ರಿಂದ ೭.೩೦ ರವರೆಗೆ ಆಯುಷ್ ಇಲಾಖೆಯಿಂದ ಮತ್ತು ವಿವಿಧ ಯೋಗ ಸಂಸ್ಥೆಗಳಿಂದ ತೇರಾಪಂಥ್ ಭವನದಲ್ಲಿ ಅನುವ್ರತ್ ಸಮಿತಿಯ ಮಹಿಳಾ ಸದಸ್ಯರಿಗೆ ಯೋಗ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಜೂನ್ ೧೭ ರಂದು ಬೆಳಿಗ್ಗೆ ೯.೩೦ ರಿಂದ ಸಂಜೆ ೪ ಗಂಟೆಯವರೆಗೆ ನಗರ ವ್ಯಾಪ್ತಿಯ ಬಾಲಕ, ಬಾಲಕಿಯರಿಗೆ ಯೋಗದ ಕುರಿತು ಅರಿವು ಮೂಡಿಸಿ ಉತ್ಸಾಹ ಹೆಚ್ಚಿಸುವ ಸಲುವಾಗಿ ಬಸವನಹಳ್ಳಿಯ ಬ್ರಹ್ಮಕುಮಾರಿ ಸಂಸ್ಥೆಯಲ್ಲಿ ೧ ರಿಂದ ೭ನೇ ತರಗತಿಯ ಮಕ್ಕಳಿಗೆ ಹಾಗೂ ೮ ರಿಂದ ೧೦ನೇ ತರಗತಿ ಮಕ್ಕಳಿಗೆ ಪ್ರತ್ಯೇಕವಾಗಿ ಇಚ್ಛಾನುಸಾರ ಐದು ಬಗೆಯ ಸುಲಭ ಯೋಗಾಸನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರೋತ್ಸಾಹಕವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ನೀಡಲಾಗುವುದು ಎಂದು ತಿಳಿಸಿದರು.
ಜೂನ್ ೧೮ ರಂದು ಬೆಳಿಗ್ಗೆ ೧೧ ಗಂಟೆಯಿಂದ ನಗರದ ತಾಲ್ಲೂಕು ಕಚೇರಿ (ಹನುಮಂತಪ್ಪ ವೃತ್ತ) ಯಿಂದ ಎಂ.ಜಿ.ರಸ್ತೆ ಮೂಲಕ ಸುಭಾಷ್ಚಂದ್ರ ಬೋಸ್ ಜಿಲ್ಲಾ ಕ್ರೀಡಾಂಗಣದವರೆಗೆ ಎನ್.ಎಸ್.ಎಸ್., ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆ, ಸೇವಾದಳ, ಮೇರಾ ಯುವ ಭಾರತ, ಆರೋಗ್ಯ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಆಯುಷ್ ಇಲಾಖೆ ಹಾಗೂ ವಿವಿಧ ಯೋಗ ಸಂಸ್ಥೆಗಳು ಮತ್ತು ಸಾರ್ವಜನಿಕರ ನೆರವಿನಲ್ಲಿ ಯೋಗ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಜೂನ್ ೧೯ ರಂದು ಕೆಂಪನಹಳ್ಳಿಯ ಅಂಧ ಮಕ್ಕಳ ಶಾಲೆಯಲ್ಲಿ ಯೋಗ ಧನುಷ್ ಕಾರ್ಯಕ್ರಮ ನಡೆಯಲಿದೆ ಎಂದು ಡಾ.ಗೀತಾ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥ್ಬಾಬು, ಬ್ರಹ್ಮಕುಮಾರಿ ಸಂಸ್ಥೆಯ ಭಾಗ್ಯಕ್ಕ, ಜಿ.ಪಂ.ನ ಡಿಆರ್ಡಿಎ ಕೋಶದ ಯೋಜನಾ ನಿರ್ದೇಶಕಿ ನಯನ, ಪತಂಜಲಿ ಯೋಗ ಶಿಕ್ಷಣ ಕೇಂದ್ರದ ಅಧ್ಯಕ್ಷರು, ವಿವಿಧ ಯೋಗ ಸಂಸ್ಥೆಗಳ ಮುಖ್ಯಸ್ಥರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
೧೩ಸಿಕೆಎಂ೩: ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುವ ಸಂಬಂಧ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಿನ್ನೆ ನಡೆದ ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕರಡ್ಡಿ ಮಾತನಾಡಿದರು.
Yoga Sangam on the occasion of International Yoga Day on June 21
Leave a comment