ಚಿಕ್ಕಮಗಳೂರು: ಸಿಮೆಂಟ್ ಬೆಂಚ್ ಹಾಗೂ ಕಂಪೌಂಡ್ ಸ್ಲ್ಯಾಬ್‌ಗಳನ್ನು ಸಾಗಿಸುತ್ತಿದ್ದ ಮಹೇಂದ್ರ ಜಿತೋ ವಾಹನದ ಹಿಂಬದಿಯ ಟೈರ್ ಸ್ಫೋಟಗೊಂಡು ಸಂಭವಿಸಿದ ಅಪಘಾತದಲ್ಲಿ ಓರ್ವ ಕಾರ್ಮಿಕ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.
ಬೀರೂರು ಸಮೀಪದ ಚಟ್ನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ೬೯ರಲ್ಲಿ ಘಟನೆ ನಡೆದಿದೆ. ಭದ್ರಾವತಿಯಿಂದ ಕಡೂರಿಗೆ ತೆರಳಿ ಸಿಮೆಂಟ್ ಸಾಮಗ್ರಿಗಳನ್ನು ಲೋಡ್ ಮಾಡಿಕೊಂಡು ವಾಪಸ್ ಬರುತ್ತಿದ್ದಾಗ ವಾಹನದ ಹಿಂಬದಿಯ ಟೈರ್ ಸ್ಫೋಟಗೊಂಡಿದೆ. ಪರಿಣಾಮ ಹಿಂಭಾಗದಲ್ಲಿ ಸಿಮೆಂಟ್ ಸಾಮಗ್ರಿಗಳ ಮೇಲೆ ಕುಳಿತಿದ್ದ ಕಾರ್ಮಿಕರು ಸಾಮಗ್ರಿಗಳ ಸಮೇತ ರಸ್ತೆಗೆ ಬಿದ್ದಿದ್ದಾರೆ.
ಅಪಘಾತದಲ್ಲಿ ಉತ್ತರ ಪ್ರದೇಶ ಮೂಲದ ವಸೀಮ್, ಗಿಡ್ಡು ಹಾಗೂ ನರೇನ್ ಮತ್ತು ವಾಹನ ಚಾಲಕ ಸೈಯದ್ ಶಾಹೀದ್ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತರೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ವಸೀಮ್ ಮೃತಪಟ್ಟಿದ್ದಾರೆ.
ಈ ಸಂಬಂಧ ವಾಹನ ಚಾಲಕ ಸೈಯದ್ ಶಾಹೀದ್ ವಿರುದ್ಧ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Vehicle Carrying Compound Slabs Overturns; Worker Dies
Leave a comment