ಚಿಕ್ಕಮಗಳೂರು: ನಗರಸಭೆಯಿಂದ ನಗರದಲ್ಲಿ ಉದ್ದಿಮೆ ಪರವಾನಗಿ ಪಡೆಯದೆ ಅನಧಿಕೃತವಾಗಿ ನಡೆಸುತ್ತಿದ್ದ ಅಂಗಡಿಗಳನ್ನು ಇಂದು ಭೇಟಿನೀಡಿ ಪರಿಶೀಲಿಸಿದ ಪೌರಾಯುಕ್ತರು ಹಾಗೂ ಸಿಬ್ಬಂದಿ ಬಂದ್ ಮಾಡಿಸಿ ಬೀಗ ಹಾಕಿದ ಘಟನೆ ನಡೆಯಿತು.
ನಂತರ ಮಾತನಾಡಿದ ಪೌರಾಯುಕ್ತ ಬಿ.ಸಿ ಬಸವರಾಜು, ನಗರಸಭೆಯಲ್ಲಿ ಉದ್ದಿಮೆ ಪರವಾನಗಿ ಪಡೆಯದೆ ಇರುವ ಬಗ್ಗೆ ಅನೇಕ ಬಾರಿ ಅಂಗಡಿ ಮಾಲಿಕರಿಗೆ ಸೂಚನೆ ನೀಡಿದ್ದರು ಮತ್ತು ಮೌಖಿಕವಾಗಿ ಹೇಳುವ ಮೂಲಕ ಎಚ್ಚರಿಕೆ ನೀಡಿದ್ದರೂ ಅಕ್ರಮವಾಗಿ ಉದ್ದಿಮೆ ನಡೆಸುತ್ತಿದ್ದರು ಎಂದು ತಿಳಿಸಿದರು.
ನಗರಸಭೆಯಿಂದ ಅಧಿಕೃತ ಉದ್ದಿಮೆ ಪರವಾನಗಿಯನ್ನು ಕಳೆದ ನಾಲ್ಕೈದು ವರ್ಷಗಳಿಂದ ಪಡೆಯದೆ ಮತ್ತು ನಗರಸಭೆ ಸೂಚನೆಗಳನ್ನು ಪಾಲಿಸದೇ ಇರುವ ಹಿನ್ನೆಲೆಯಲ್ಲಿ ಸಿಬ್ಬಂದಿ ಎಚ್ಚರಿಕೆ ನೀಡಿದರೂ ಸ್ಪಂದಿಸದೇ ಇರುವ ಕಾರಣ ಇಂದು ಅಂಗಡಿ ಬಂದ್ ಮಾಡಿಸಲಾಗಿದೆ ಎಂದರು.
ಅನಧಿಕೃತವಾಗಿ ನಡೆಸುತ್ತಿದ್ದ ನಗರದ ಅಂಬೇಡ್ಕರ್ ರಸ್ತೆಯಲ್ಲಿ ೨ ಹಾಗೂ ಎಂಜಿ ರಸ್ತೆಯಲ್ಲಿರುವ ಮಹಾವೀರ್ ಫ್ಯಾನ್ಸಿಸ್ಟೋರ್, ಮಾತೇಶ್ವರಿ ಟೆಕ್ಸ್ಟೈಲ್, ವಿನಾಯಕ ಬ್ಯಾಗ್ ಪ್ಯಾಲೇಸ್ ಈ ಅಂಗಡಿಗಳನ್ನು ಬಂದ್ ಮಾಡಿಸಿ ಬೀಗ ಹಾಕಿದ್ದೇವೆ ಎಂದು ಹೇಳಿದರು.
ಉದ್ದಿಮೆದಾರರು ನಗರಸಭೆಯಿಂದ ಅಧಿಕೃತ ಉದ್ದಿಮೆ ಪರವಾನಗಿ ಪಡೆದುಕೊಳ್ಳಬೇಕು, ಇಲ್ಲದಿದ್ದಲ್ಲಿ ನಗರಸಭೆಯಿಂದ ಅಧಿಕಾರಿಗಳನ್ನೊಳಗೊಂಡ ಐದು ತಂಡಗಳನ್ನು ರಚಿಸಿದ್ದು, ಪ್ರತಿದಿನ ಅಂಗಡಿಗಳಿಗೆ ಭೇಟಿನೀಡಿ ಪರಿಶೀಲಿಸಿ ಶಿಸ್ತುಕ್ರಮ ಕೈಗೊಳ್ಳಲಿದ್ದಾರೆಂದು ಎಚ್ಚರಿಸಿದರು.
ನಗರದಲ್ಲಿ ೮ ಸಾವಿರ ವಿವಿಧ ರೀತಿಯ ಅಂಗಡಿಗಳಿದ್ದು, ವಾರ್ಷಿಕ ೧.೫೦ ಕೋಟಿ ರೂ ಉದ್ದಿಮೆ ಪರವಾನಗಿ ಶುಲ್ಕ ನಗರಸಭೆಗೆ ಪಾವತಿಯಾಗಬೇಕು. ಕಳೆದ ನಾಲ್ಕೈದು ವರ್ಷಗಳಿಂದ ಉದ್ದಿಮೆ ಪರವಾನಗಿ ಪಡೆದುಕೊಂಡಿಲ್ಲದ ಕಾರಣದಿಂದ ೩.೫೦ ಕೋಟಿ ರೂ ಬಾಕಿ ಇದೆ ಎಂದು ಅಂದಾಜಿಸಲಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಕಂದಾಯ ಅಧಿಕಾರಿ ದೀಪಕ್, ಸಹಾಯಕ ಕಾರ್ಯ ಪಾಲಕ ಅಭಿಯಂತರರಾದ ಲೋಕೇಶ್, ಆರೋಗ್ಯ ನಿರೀಕ್ಷಕರಾದ ರಂಗಪ್ಪ, ನಾಗಪ್ಪ, ಪರಿಸರ ಅಭಿಯಂತರರಾದ ವೆಂಕಟೇಶ್ ಉಪಸ್ಥಿತರಿದ್ದರು.
Unlicensed shops in the city closed
Leave a comment