ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಈಗ ಅನ್ಯಕೋಮಿನ ಅಪ್ರಾಪ್ತ ಪ್ರೇಮಿಗಳ ಪ್ರಕರಣವೊಂದು ಭಾರೀ ಸದ್ದು ಮಾಡುತ್ತಿದೆ. ಇದು ಕೇವಲ ಪ್ರೇಮ ಪ್ರಕರಣವಾಗಿ ಉಳಿಯದೆ, ‘ಲವ್ ಜಿಹಾದ್’ ಆರೋಪ, ಹಲ್ಲೆ ಹಾಗೂ ಪೋಕ್ಸೋ ಕಾಯ್ದೆಯಡಿ ದೂರು-ಪ್ರತಿದೂರುಗಳ ಸಮರವಾಗಿ ಮಾರ್ಪಟ್ಟಿದೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಿಳಗೊಳ ಗ್ರಾಮದಲ್ಲಿ ಅಪ್ರಾಪ್ತ ಯುವಕ-ಯುವತಿಯ ನಡುವಿನ ಪ್ರೀತಿಯ ವಿಚಾರವು ಉದ್ವಿಗ್ನತೆಗೆ ಕಾರಣವಾಗಿ, ಎರಡು ವಿಭಿನ್ನ ಪ್ರಕರಣಗಳು ದಾಖಲಾಗಿರುವ ಘಟನೆ ಬೆಳಕಿಗೆ ಬಂದಿದೆ. ಮೂಡಿಗೆರೆ ತಾಲೂಕಿನ ಬಿಳಗೊಳ ಗ್ರಾಮದ ನಿವಾಸಿಗಳಾದ ಇಬ್ಬರು ಅಪ್ರಾಪ್ತರಾಗಿದ್ದಾರೆ.
ಹಲ್ಲೆಗೆ ಒಳಗಾದ ಅಪ್ರಾಪ್ತ ಯುವಕ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅದರ ಆಧಾರದಲ್ಲಿ ಮೂವರು ಹಿಂದೂ ಸಂಘಟನೆ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರೆಸಿದ್ದಾರೆ.
ಇನ್ನೊಂದೆಡೆ, ಹುಡುಗಿಯ ತಂದೆಯೂ ಕೂಡ ಅಪ್ರಾಪ್ತ ಮುಸ್ಲಿಂ ಯುವಕನ ವಿರುದ್ಧ ದೂರು ನೀಡಿದ್ದು, ಅದರ ಆಧಾರದಲ್ಲಿ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿರುವುದಾಗಿ ತಿಳಿದುಬಂದಿದೆ. ಅಪ್ರಾಪ್ತರ ನಡುವಿನ ಸಂಬಂಧವಾಗಿರುವುದರಿಂದ ಪ್ರಕರಣ ಇನ್ನಷ್ಟು ಗಂಭೀರತೆಯನ್ನು ಪಡೆದಿದೆ.ಈ ಘಟನೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಾವಲು ಹೆಚ್ಚಿಸಿದ್ದಾರೆ.
Leave a comment