ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು, ಅಪರಾಧ ಪ್ರಕರಣಗಳ ನಿಯಂತ್ರಣ ಹಾಗೂ ಸಂಚಾರ ದಟ್ಟಣೆ ನಿರ್ವಹಣೆಗೆ ಆಧ್ಯತೆ ನೀಡುವುದಾಗಿ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಹಿತಿ ತಂತ್ರಜ್ಞಾನದ ಜೊತೆಗೆ ಮಾಹಿತಿ ಬುದ್ಧಿಮತ್ತೆಯ ಕಣ್ಗಾವಲನ್ನಿರಿಸಿ ಕಾನೂನು ಸುವ್ಯವಸ್ಥೆ ಕಾಪಾಡಲಾಗುವುದು. ಪ್ರಥಮ ಮತ್ತು ಅತೀ ಹೆಚ್ಚಿನ ಆಧ್ಯತೆ ಕೋಮು ಸೌಹಾರ್ಧತೆ ಕಾಪಾಡುವುದಾಗಿದೆ. ಕೊಮು ಸಾಮರಸ್ಯ ಕದಡುವ ಪ್ರಯತ್ನ ಮಾಡುವವರು ಯಾರೇ ಆಗಿದ್ದರೂ ಅದನ್ನು ಕಟ್ಟು ನಿಟ್ಟಾಗಿ ನಿಯಂತ್ರಿಸುತ್ತೇವೆ. ಇದು ಕೇವಲ ಪೊಲೀಸ್ ಇಲಾಖೆ ಜವಾಬ್ದಾರಿ ಅಲ್ಲ. ಎಲ್ಲರ ಹೊಣೆಗಾರಿಕೆ ಇದೆ ಎಂದು ಹೇಳಿದರು.
ಇದರ ಜೊತೆಗೆ ನೈತಿಕ ಪೊಲೀಸ್ಗಿರಿ ಮತ್ತು ದ್ವೇಷ ಭಾಷಣ ಮಾಡುವುದನ್ನು ಸಹಿಸುವುದಿಲ್ಲ. ಈ ವಿಚಾರದಲ್ಲಿ ಪೊಲೀಸರು ಏನು ಕ್ರಮ ಕೈಗೊಳ್ಳಬೇಕು ಅದನ್ನು ಮಾಡುತ್ತದೆ. ಅದನ್ನು ಹೊರತು ಪಡಿಸಿ ಯಾರಾದರೂ ನೈತಿಕ ಪೊಲೀಸ್ಗಿರಿ ತೋರಿದರೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.
ಅಪರಾಧ ನಿಯಂತ್ರಣ ಸಂಬಂಧ ಜಿಲ್ಲೆಯ ಎಲ್ಲಾ ಠಾಣೆಗಳಿಗೆ ಸೂಚನೆಗಳನ್ನು ನೀಡಿದ್ದೇವೆ. ಅದರಲ್ಲೂ ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧ ಪಟ್ಟ ಯಾವುದೇ ಪ್ರಕರಣಗಳು ದಾಖಲಾದರೂ ತಕ್ಷಣ ಸ್ಪಂದಿಸಿ ಕ್ರಮ ತೆಗೆದುಕೊಳ್ಳಬೇಕು. ಈ ವಿಚಾರದಲ್ಲಿ ವಿಳಂಭ ಮಾಡುವುದು ಒಳ್ಳೆಯ ಸಂಗತಿಯಲ್ಲ. ಈ ಬಗ್ಗೆ ಠಾಣೆ ಮಟ್ಟದಲ್ಲಿ ನಿಗಾ ವಹಿಸುತ್ತೇವೆ ಎಂದರು.
ಮಹಿಳೆ ಮತ್ತು ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳನ್ನು ನಿರ್ವಹಣೆ ಮಾಡುವ ಕುರಿತಾಗಿ ಪ್ರತಿ ಠಾಣೆಯ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಸಂಘಟಿತ ಅಪರಾಧ ಮತ್ತು ರೌಡಿಯಿಸಂನಲ್ಲಿ ಭಾಗಿಯಾಗುವವರ ಬಗ್ಗೆ ಮಾಹಿತಿ ಪಡೆದು. ಮುಂದಿನ ಅಪರಾಧ ನಿಯಂತ್ರಣ ಸಭೆಯಲ್ಲಿ ಇಂತಹ ಮಂದಿ ಹಾಗೂ ಪ್ರಕರಣಗಳು ಎಷ್ಟಿವೆ ಎನ್ನುವ ಅಂಕಿ ಅಂಶ ಪಡೆದು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಚಿಕ್ಕಮಗಳೂರು ಜಿಲ್ಲೆಗೆ ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ ಅವರಿಗೆ ಸೂಕ್ತ ರಕ್ಷಣೆ ನೀಡುವ ಜವಾಬ್ದಾರಿ ಪೊಲೀಸ್ ಇಲಾಖೆ ಸೇರಿ ಎಲ್ಲರ ಮೇಲಿದೆ. ಇದೇ ವೇಳೆ ಮಾದಕ ವಸ್ತು ಬಳಕೆ ಮತ್ತು ಮಾರಾಟ ನಿಯಂತ್ರಣಕ್ಕೂ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಣ ಕುರಿತು ಜಿಲ್ಲಾಡಳಿತ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮತ್ತಿತರೆ ಸಿಬ್ಬಂದಿಗಳ ಜೊತೆ ಸಮಾಲೋಚನೆ ನಡೆಸಿ ಕ್ರಮ ಜರುಗಿಸಲಾಗುವುದು. ಈ ಸಂಬಂಧ ಒಂದು ತಿಂಗಳ ಕಾಲ ಸಾರ್ವಜನಿಕರಿಗೆ ವಾಹನ ಸಂಚಾರ ನಿಯಂತ್ರಣ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ಸೈಬರ್ ಅಪರಾಧಗಳ ನಿಯಂತ್ರಣ ಸಂಬಂಧ ನಮ್ಮ ಸಿಬ್ಬಂದಿಗಳಿಗೂ ಹೆಚ್ಚಿನ ತರಬೇತಿ ಅಗತ್ಯವಿದೆ ಅದನ್ನು ಒದಗಿಸಲಾಗುವುದು ಎಂದು ತಿಳಿಸಿದರು.
Traffic congestion management a priority in the district
Leave a comment