ಚಿಕ್ಕಮಗಳೂರು: : ಕರ್ನಾಟಕ ರಾಜ್ಯದಲ್ಲಿ ಅಕ್ಟೋಬರ್ ೧೨, ೨೦೦೫ ರಲ್ಲಿ ಅಸ್ತಿತ್ವಕ್ಕೆ ಬಂದ ಮಾಹಿತಿ ಆಯೋಗವು ಆಡಳಿತದಲ್ಲಿ ಪಾರದರ್ಶಕತೆ ಮತ್ತು ಬದ್ಧತೆಯನ್ನು ತರುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ ಎಂದು ಕರ್ನಾಟಕ ರಾಜ್ಯ ಮಾಹಿತಿ ಆಯುಕ್ತರಾದ ಡಾ.ಹರೀಶ್‌ಕುಮಾರ್ ತಿಳಿಸಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಇಂದು ನಗರದ ಜಿ.ಪಂ.ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ, ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ ಮಾಹಿತಿ ಹಕ್ಕು ಅಧಿನಿಯಮ-೨೦೦೫ ಕುರಿತ ಜಾಗೃತಿ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆಯ ಅಧ್ಯಯನ ಮತ್ತು ಸಾಮಾನ್ಯ ತಿಳುವಳಿಕೆ ಇರಬೇಕು. ಮಾಹಿತಿ ಬಯಸಿ ಸಲ್ಲಿಕೆಯಾಗುವ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಕಾಯ್ದೆಯಲ್ಲಿ ಲಭ್ಯವಿರುವ ಸೆಕ್ಷನ್‌ಗಳ ಆಧಾರದ ಮೇಲೆ ಉತ್ತರ ಮತ್ತು ಮಾಹಿತಿಯನ್ನು ಒದಗಿಸಬೇಕು. ಕಳೆದ ಹತ್ತು ವರ್ಷಗಳಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ವಯ ಮಾಹಿತಿ ನೀಡುವಲ್ಲಿ ವಿಳಂಬ, ಸರಿಯಾದ ಮಾಹಿತಿ ನೀಡದಿರುವುದು ಹಾಗೂ ಇತರ ಕಾರಣಗಳಿಂದಾಗಿ ರೂ.೧೦ ಕೋಟಿಯಷ್ಟು ದಂಡವು ಸರ್ಕಾರಿ ಅಧಿಕಾರಿಗಳಿಂದ ಆಯೋಗಕ್ಕೆ ಜಮೆ ಆಗಿದೆ. ಆದ್ದರಿಂದ ಮಾಹಿತಿ ಅಧಿಕಾರಿಗಳು ಮಾಹಿತಿ ಕೋರಿ ಸಲ್ಲಿಕೆಯಾಗುವ ಅರ್ಜಿಗಳಿಗೆ ಕಾಲಮಿತಿಯಲ್ಲಿ ಉತ್ತರ ಒದಗಿಸಬೇಕೆಂದು ಅವರು ಹೇಳಿದರು.
ಮಾಹಿತಿ ಹಕ್ಕು ಕಾಯ್ದೆಯಡಿ ಸಾರ್ವಜನಿಕರು ಮಾಹಿತಿ ಕೋರಿ ಸಲ್ಲಿಸುವ ಅರ್ಜಿಗಳನ್ನು ಅರ್ಜಿ ಸಲ್ಲಿಕೆಯಾದ ೩೦ ದಿನಗಳಲ್ಲಿ ವಿಲೇವಾರಿ ಮಾಡಬೇಕು. ಮಾಹಿತಿ ಕೇಳಿ ಯಾವುದೇ ವ್ಯಕ್ತಿಯು ಸರ್ಕಾರದ ಉದ್ಯೋಗ, ಸೌಲಭ್ಯಗಳ ಬಗ್ಗೆ ಮಾಹಿತಿ ಕೇಳಿ ಅರ್ಜಿ ಸಲ್ಲಿಸಿದ್ದಲ್ಲಿ ಮಾಹಿತಿ ನೀಡಬೇಕಾಗುತ್ತದೆ. ಅಧಿಕಾರಿಯ ಹೆಸರು ಮತ್ತು ಹುದ್ದೆ ಸಾರ್ವಜನಿಕ ದಾಖಲೆಯಾಗಿರುವುದರಿಂದ ಅವುಗಳನ್ನು ನೀಡಬೇಕಾಗುತ್ತದೆ. ಯಾವುದೇ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಅಥವಾ ತನಿಖೆ ಮುಕ್ತಾಯವಾಗಿ ಅಂತಿಮ ವರದಿ ಸಲ್ಲಿಸದಿರುವ ಅಥವಾ ತನಿಖೆ ಮುಕ್ತಾಯವಾದ ಬಗ್ಗೆ ಸಂಬಂಧಿಸಿದ ಅಧಿಕಾರಿ ಅಥವಾ ಸಂಸ್ಥೆ ದೃಢೀಕರಣ ನೀಡದ ಹೊರತು ಯಾವುದೇ ಮಾಹಿತಿಯನ್ನು ನೀಡುವಂತಿಲ್ಲ. ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕಾಯ್ದೆ ಮತ್ತು ಕಾನೂನುಗಳ ಸಾಮಾನ್ಯ ಜ್ಞಾನವು ಅಗತ್ಯವಾಗಿದೆ ಎಂದರು.
ಮಾಹಿತಿ ಹಕ್ಕು ಕಾಯ್ದೆ ೨೦೦೫ ರಲ್ಲಿ ಜಾರಿಗೆ ಬಂದಿದ್ದರೂ ಸಹ ಹಿಂದಿನ ೨೦ ವರ್ಷಗಳ ಮಾಹಿತಿಗಳಿಗೂ ಈ ಕಾಯ್ದೆ ಅನ್ವಯವಾಗುತ್ತದೆ. ಕಳೆದ ೨೦ ವರ್ಷಗಳಲ್ಲಿ ಮಾಹಿತಿ ಹಕ್ಕು ಕಾಯ್ದೆಯ ಕುರಿತು ಉಚ್ಚ ನ್ಯಾಯಾಲಯ ಹಾಗೂ ಸರ್ವೋಚ್ಚ ನ್ಯಾಯಾಲಯಗಳಿಂದ ಹಲವಾರು ಆದೇಶಗಳು ಬಂದಿವೆ. ಈ ಆದೇಶಗಳು ಮಾಹಿತಿ ಹಕ್ಕು ಕಾಯ್ದೆ ಅನ್ವಯ ಅಳವಡಿಕೆ ಹಾಗೂ ವಿಸ್ತರಣೆಗಳಿಗೆ ಸಾಕಷ್ಟು ಬಲ ತುಂಬಿವೆ ಎಂದು ತಿಳಿಸಿದರು.
ಮಾಹಿತಿ ಆಯುಕ್ತರಾದ ಬದ್ರುದ್ದೀನ್ ಕೆ. ಮಾತನಾಡಿ, ಮಾಹಿತಿ ಅಧಿಕಾರಿಗಳು ಮಾಹಿತಿ ಕೋರಿ ಬಂದ ಅರ್ಜಿಗಳಿಗೆ ಕಾಯ್ದೆಯನ್ವಯ ಪರಿಶೀಲಿಸಿ ನಿಯಮಾನುಸಾರ ವಿಲೇವಾರಿ ಮಾಡಬೇಕು. ಅರ್ಜಿಗಳ ವಿಲೇವಾರಿಯಲ್ಲಿ ಜಿಲ್ಲೆ ಪ್ರಥಮ ಸ್ಥಾನಕ್ಕೆ ಬರುವಂತೆ ಆಶಿಸಿದ ಅವರು, ಕೇವಲ ಸಿಸಿ ಟಿ.ವಿ.ದೃಶ್ಯಗಳು ಪ್ರಕರಣಗಳ ಬಗ್ಗೆ ಅಂತಿಮ ಆರೋಪ ಪಟ್ಟಿ, ಯಾವ ವ್ಯಕ್ತಿ ಮೇಲೆ ಎಷ್ಟು ಪ್ರಕರಣಗಳಿವೆ ಎಂಬುದು ಸೇರಿದಂತೆ ವೈಯಕ್ತಿಕ ಹಾಗೂ ವ್ಯಕ್ತಿಗತ ಮಾಹಿತಿಯನ್ನು ನೀಡುವಾಗ ಮಾಹಿತಿ ಹಕ್ಕು ಕಾಯ್ದೆಯಲ್ಲಿನ ಸೆಕ್ಷನ್‌ಗಳನ್ನು ಸರಿಯಾಗಿ ತಿಳಿದು ಅರ್ಥೈಸಿಕೊಂಡು ಮುಂದುವರಿಯಬೇಕು. ಯಾವ ಮಾಹಿತಿ ನೀಡಲು ಅವಕಾಶವಿದೆ ಮತ್ತು ಯಾವುದನ್ನು ನೀಡಲು ಅವಕಾಶವಿಲ್ಲ ಎಂಬುದರ ಬಗ್ಗೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ತಿಳುವಳಿಕೆ ಇರಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಪ್ರಾಸ್ತಾವಿಕ ಮಾತನಾಡಿ, ಮಾಹಿತಿ ಹಕ್ಕು ಕಾಯ್ದೆ. ಸ್ವತಂತ್ರ ಭಾರತದಲ್ಲಿ ಹೆಚ್ಚು ಪರಿಣಾಮಕಾರಿಯಾದ ಹಾಗೂ ಹೆಚ್ಚು ಅವಶ್ಯಕತೆ ಇರುವ ಕಾಯ್ದೆ. ಸರ್ಕಾರಿ ದಾಖಲೆಗಳನ್ನು ಅಷ್ಟು ಸುಲಭವಾಗಿ ಯಾರಿಗೂ ನೀಡುತ್ತಿರಲಿಲ್ಲ. ಕಾಲಕ್ರಮೇಣ ಸಾಕಷ್ಟು ಬದಲಾವಣೆಗಳಾಗೆ ಕರ್ನಾಟಕ ಮುಂಚೂಣಿಯಲ್ಲಿತ್ತು. ಮಾಹಿತಿ ಹಕ್ಕು ಕಾಯ್ದೆ ೨೦೦೫ ಜಾರಿಗೆ ಬರುವುದಕ್ಕೆ ಮುನ್ನವೇ ಕರ್ನಾಟಕದಲ್ಲಿ ಸಾರ್ವಜನಿಕರಿಗೆ ದಾಖಲೆಗಳನ್ನು ಯಾವುದೇ ರಹಸ್ಯವಿಲ್ಲದೆ ಮುಕ್ತವಾಗಿ ನೀಡಬೇಕು ಎಂದು ತೀರ್ಮಾನವಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಕಾಯ್ದೆ ಜಾರಿಗೆ ಬಂದಿತ್ತು. ಬೇರೆ ರಾಜ್ಯಗಳು ಸಹ ಈ ದಿಸೆಯಲ್ಲಿ ಕೆಲವು ಪ್ರಯತ್ನಗಳನ್ನು ಮಾಡಿದ್ದವು ಎಂದರು.
ಮಾಹಿತಿ ಹಕ್ಕು ಕಾಯ್ದೆ ಸಮರ್ಪಕ ಅನುಷ್ಠಾನದ ಜವಾಬ್ದಾರಿ ಪ್ರತಿಯೊಬ್ಬ ಅಧಿಕಾರಿಯ ಮೇಲಿದೆ. ಒಟ್ಟಿನಲ್ಲಿ ಈ ಕಾಯ್ದೆ ಅಸ್ತಿತ್ವಕ್ಕೆ ಬಂದ ಈ ೨೦ ವರ್ಷಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಿವೆ. ಇದಕ್ಕೆ ರಾಷ್ಟ್ರಮಟ್ಟದಲ್ಲಿ ಏಕಸ್ವರೂಪದ ಅವಕಾಶ ನೀಡಿ, ಸಾರ್ವಜನಿಕರಿಗೆ ಅಗತ್ಯ ಮಾಹಿತಿಗಳು ದೊರೆಯಬೇಕು; ಆಡಳಿತದಲ್ಲಿ ಪಾರದರ್ಶಕತೆ ಬರಬೇಕು; ಜನರ ಹಕ್ಕುಗಳು ಮೊಟಕಾಗಬಾರದು ಎನ್ನುವ ದೃಷ್ಟಿಯಿಂದ ಕೇಂದ್ರ ಸರ್ಕಾರ ೨೦೦೫ ರಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿತು. ಇಂತಹ ಕಾಯ್ದೆಗಳು ಅವಶ್ಯಕವಾಗಿದ್ದು, ಜನರ ಜೀವನವನ್ನು ಸುಗಮಗೊಳಿಸುತ್ತದೆ. ಆಡಳಿತದಲ್ಲಿ ಪಾರದರ್ಶಕತೆಯನ್ನು ತರುತ್ತವೆಯಲ್ಲದೆ, ನಮ್ಮ ಹೊಣೆಗಾರಿಕೆಯನ್ನು ಹೆಚ್ಚು ಮಾಡುತ್ತವೆ. ಏನು ಉತ್ತರದಾಯಿತ್ವ ವ್ಯವಸ್ಥೆ ಏನಿದೆ ಅದು ಇಂತಹ ಕಾಯ್ದೆಗಳಿಂದ ಸದೃಢವಾಗುತ್ತಾ ಹೋಗುತ್ತದೆ. ಇಂತಹ ಕ್ರಮದಿಂದ ಸರ್ಕಾರದ ಮೇಲೆ ಜನರಿಗೆ ಭರವಸೆ. ನಂಬಿಕೆ ಹೆಚ್ಚುತ್ತಾ ಹೋಗುತ್ತದೆ. ಅಧಿಕಾರಿಗಳು ಯಾರೂ ತಪ್ಪು ಮಾಡುವುದಿಲ್ಲ ಎನ್ನುವ ವಿಶ್ವಾಸ ಮೂಡುತ್ತದೆ. ಸರ್ಕಾರಿ ಅಧಿಕಾರಿಗಳು ತಪ್ಪು ಮಾಡಿದರೆ ಶಿಕ್ಷೆ ಏನು ಎಂಬುದರ ಬಗ್ಗೆ ಈಗಾಗಲೇ ನಿರ್ಧಾರವಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಮಾಹಿತಿ ಆಯುಕ್ತರಾದ ಮಹೇಶ್ ವಾಳ್ವೇಕರ್, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಟಿ.ಜಯಕುಮಾರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
The Information Commission has played a role in bringing transparency in governance.
Leave a comment