ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ಜೂನ್ 12ರಂದು ‘ಯೆಲ್ಲೊ ಅಲರ್ಟ್’, ಜೂನ್ 13 ಮತ್ತು 14ರಂದು ‘ರೆಡ್ ಅಲರ್ಟ್’ ಘೋಷಣೆ ಮಾಡಲಾಗಿದೆ.
ಒಂದು ವಾರದಿಂದ ಬಿಡುವು ನೀಡಿದ್ದ ಮಳೆ ಬುಧವಾರ ಚಿಕ್ಕಮಗಳೂರಿನ ವಿವಿಧೆಡೆ ಧಾರಾಕಾರವಾಗಿ ಸುರಿಯಿತು. ಮಳೆ ಮುನ್ಸೂಚನೆ ಅರಿಯದೆ ಬಂದಿದ್ದ ಪಾದಚಾರಿಗಳು, ಬೀದಿ ಬದಿ ತಳ್ಳುಗಾಡಿ ವ್ಯಾಪಾರಿಗಳು ಮಳೆಯಿಂದ ತೊಯ್ದು ತೊಪ್ಪೆಯಾದರು. ರಸ್ತೆ ಮತ್ತು ಚರಂಡಿಗಳಲ್ಲಿ ನೀರು ತುಂಬಿ ಹರಿಯಿತು.
ಮಳೆ ಹೆಚ್ಚಳವಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮತ್ತು ಪ್ರವಾಸಿಗರು ನದಿ, ತಗ್ಗು ಪ್ರದೇಶಗಳಿಗೆ ತೆರಳಬಾರದು. ಹಳ್ಳ, ಕೆರೆ ಕಟ್ಟೆಗಳಿಗೆ ತೆರಳಬಾರದು. ಮಳೆಯಿಂದ ಧರೆ, ಗುಡ್ಡ ಕುಸಿತ ಉಂಟಾಗುವ ಸಂಭವ ಇರುವುದರಿಂದ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದ್ದಾರೆ.
ಮೂಡಿಗೆರೆಯಲ್ಲಿ ಮಳೆ ಚುರುಕು: ತಾಲ್ಲೂಕಿನಾದ್ಯಂತ ಬುಧವಾರ ಮಳೆ ಚುರುಕಾಗಿತ್ತು.
ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಮಧ್ಯಾಹ್ನದ ಬಳಿಕ ಜಿಟಿ ಜಿಟಿ ಮಳೆ ಪ್ರಾರಂಭವಾಗಿ ಸಂಜೆಯ ಬಳಿಕ ಧಾರಾಕಾರವಾಗಿ ಸುರಿಯಿತು.
ಬಾಳೂರು, ಚಾರ್ಮಾಡಿ ಘಾಟಿ ಸೇರಿದಂತೆ ವಿವಿಧೆಡೆಗಳಲ್ಲಿ ಮಳೆಯೊಂದಿಗೆ ದಟ್ಟವಾದ ಮಂಜು ಕವಿದಿದ್ದರಿಂದ ವಾಹನ ಸವಾರರು ಪರದಾಡುವಂತಾಗಿತ್ತು.
Red Alert in the district on June 13 and
Leave a comment