ಚಿಕ್ಕಮಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ 137ನೇ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರಿನ ರೈತರ ಕೃಷಿ ವೈವಿಧ್ಯತೆ ಹಾಗೂ ನಾವೀನ್ಯತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಚಿಕ್ಕಮಗಳೂರಿನ ಕಾಫಿ ಬೆಳೆಗಾರರು ಸಾಂಪ್ರದಾಯಿಕ ಕಾಫಿ ತೋಟಗಳ ನಡುವೆ ಉಪಬೆಳೆಯಾಗಿ ‘ಅವಕಾಡೊ’ ಅಥವಾ ‘ಬಟರ್‌ಫೂಟ್’ (ಬೆಣ್ಣೆಹಣ್ಣು) ಗಿಡಗಳನ್ನು ಬೆಳೆಸಿ ಯಶಸ್ವಿಯಾಗುತ್ತಿರುವುದನ್ನು ಪ್ರಧಾನಿ ನರೇಂದ್ರ ಮೋದಿ ವಿಶೇಷವಾಗಿ ಪ್ರಸ್ತಾಪಿಸಿದರು.
ಕಾಫಿ ತೋಟಗಳಲ್ಲಿ ಉಪಬೆಳೆಯಾಗಿ ಬೆಣ್ಣೆಹಣ್ಣಿನ ಕೃಷಿ ಕೈಗೊಳ್ಳುವುದರಿಂದ ರೈತರಿಗೆ ಹೆಚ್ಚುವರಿ ಆದಾಯ ದೊರೆಯುತ್ತಿದ್ದು, ಇದು ಅವರ ಆರ್ಥಿಕ ಸಬಲೀಕರಣಕ್ಕೆ ಹೊಸ ಅವಕಾಶವನ್ನು ಕಲ್ಪಿಸಿದೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಮೂಲಕ ಮಲೆನಾಡಿನ ರೈತರು ಸಾಂಪ್ರದಾಯಿಕ ಕೃಷಿಯೊಂದಿಗೆ ಹೊಸ ಬೆಳೆಗಳನ್ನು ಅಳವಡಿಸಿಕೊಂಡು ಆದಾಯದ ಮೂಲಗಳನ್ನು ವೈವಿಧ್ಯಗೊಳಿಸುತ್ತಿರುವುದು ದೇಶದ ಇತರ ರೈತರಿಗೆ ಮಾದರಿಯಾಗಿದೆ ಎಂಬ ಸಂದೇಶವೂ ರಾಷ್ಟ್ರಮಟ್ಟದಲ್ಲಿ ಮೂಡಿದೆ.
ಚಿಕ್ಕಮಗಳೂರಿನ ಸಾಧನೆ ‘ಮನ್ ಕಿ ಬಾತ್’ನಲ್ಲಿ ಪ್ರಸ್ತಾಪವಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದಿನ ಸಂಚಿಕೆಗಳಲ್ಲಿಯೂ ಚಿಕ್ಕಮಗಳೂರಿನ ಕಾಫಿ ಹಾಗೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ, ಚಿಕ್ಕಮಗಳೂರು ತಾಲೂಕಿನ ಆಲ್ದೂರು ಮೂಲದ ಯುವ ವಿಜ್ಞಾನಿ ಅವೈಜ್ ಅಹಮದ್ ಅವರ ಪ್ರತಿಭೆಯನ್ನು ಪ್ರಧಾನಿ ದೇಶದ ಜನತೆಗೆ ಪರಿಚಯಿಸಿದ್ದರು.
ಇದೀಗ ಮತ್ತೊಮ್ಮೆ ಮಲೆನಾಡಿನ ರೈತರ ಕೃಷಿ ಸಾಧನೆ ಪ್ರಧಾನಿಯವರ ‘ಮನ್ ಕಿ ಬಾತ್’ನಲ್ಲಿ ಪ್ರಶಂಸೆಗೆ ಪಾತ್ರವಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಮತ್ತಷ್ಟು ಹೆಚ್ಚಿಸಿದೆ.
PM Modi praises Chikmagalur farmers for their agricultural diversification in Mann Ki Baat
Leave a comment