ಮೂಡಿಗೆರೆ: ವ್ಯಾಪಾರಿಯೊಬ್ಬರ ಗೋದಾಮಿನಿಂದ ೧೮೦೦ ಕೆ.ಜಿ ಕಾಳುಮೆಣಸು ಕಳವು ಮಾಡಿದ ಮಹಿಳಾ ಆರೋಪಿಯನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.
ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಬಂಧಿತೆಯಿಂದ ೫೦೦ ಕೆ.ಜಿ ಕಾಳುಮೆಣಸು ವಶಪಡಿಸಿಕೊಂಡಿದ್ದಾರೆ.
ಪಟ್ಟಣದ ಬಾಪುನಗರ ಗ್ರಾಮದ ಸಬೀನಾ(೩೫) ಬಂಧಿತ ಆರೋಪಿ, ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಜಾರಿಗೆಬೈಲು ಗ್ರಾಮದ ಬದ್ರುದ್ದೀನ್(೪೦), ಆತನ ಪತ್ನಿ ರಮೀಜಾ(೩೫), ಆತನ ಸಹೋದರ ಅಬ್ದುಲ್ ಸಾಬೀರ್ (೩೦) ತಲೆಮರೆಸಿಕೊಂಡಿದ್ದಾರೆ. ಪಟ್ಟಣದ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿರುವ ನೀಲಮ್‌ಕುಮಾರ್ ಎಂಬುವರ ಗೋದಾಮಿನ ಶೆಟರ್ ತೆರೆದು ಆರೋಪಿಗಳು ಕಾಳುಮೆಣಸಿನ ಚೀಲಗಳನ್ನು ನಿರಂತರವಾಗಿ ರಾತ್ರಿ ಕಳ್ಳತನ ಮಾಡುತ್ತಿದ್ದರು.
ಒಟ್ಟು ೧೮೦೦ ಕೆ.ಜಿ ಕಾಳುಮೆಣಸು ಕಳವು ಮಾಡಿದ್ದಾರೆ ಎಂದು ನೀಲಂಕುಮಾರ್ ಅ.೧೯ರಂದು ಪೊಲೀಸರಿಗೆ ದೂರು ನೀಡಿದ್ದರು. ಗೋದಾಮಿಗೆ ಸಿಸಿಟಿವಿ ಕ್ಯಾಮರಾ ಅಳವಡಿಸಿರದ ಕಾರಣ ಆರೋಪಿಗಳ ಪತ್ತೆ ಕಾರ್ಯ ಪೊಲೀಸರಿಗೆ ಕಷ್ಟವಾಗಿತ್ತು. ಪಟ್ಟಣದ ವಿವಿಧ ರಸ್ತೆಯ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಗೋಣಿಚೀಲದಲ್ಲಿ ಸರಕು ತುಂಬಿಸಿ ಕಾರಿನಲ್ಲಿ ಸಾಗಿಸುತ್ತಿರುವುದು ಕಂಡುಬಂದಿದೆ.
ಅದರ ಜಾಡು ಹಿಡಿದು ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಗೋದಾ’ ಮಿನ ಶೆಟರ್ ಎಳೆದ ಬಳಿಕ ಅದರ ಲಾಕ್ ಸಡಿಲವಾಗುತ್ತಿತ್ತು. ಹೀಗಾಗಿ ಹೊರಭಾಗ ದಿಂದ ಆರೋಪಿಗಳು ಶೆಟರ್ ಎತ್ತಿ ಕಾಳುಮೆಣಸು ಕಳವು ಮಾಡುತ್ತಿದ್ದರು. ಕಳೆದ ತಿಂಗಳು ಕಾಳುಮೆಣಸು ಕಳವು ಮಾಡುತ್ತಿದ್ದಾಗ ರಸ್ತೆಯಲ್ಲಿ ಯಾರೋ ಬಂದಾಗ ಶೆಟರನ್ನು ಮುಚ್ಚದೆ ಕಳ್ಳರು ಪರಾರಿಯಾಗಿದ್ದರು.
ಇದರಿಂದ ಅನುಮಾನಗೊಂಡ ಪಾದಚಾರಿ ಸ್ಥಳೀಯರಿಗೆ ತಿಳಿಸಿದ್ದಾರೆ. ಈ ವಿಚಾರ ಗೋದಾಮಿನ ಮಾಲೀಕರಿಗೆ ತಲುಪಿ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿ ಬದ್ರುದ್ದೀನ್, ರಮೀಜಾ ದಂಪತಿ ಈ ಹಿಂದೆ ಕಾಳುಮೆಣಸು ಕಳ್ಳತನ ಮಾಡಿದ ಗೋದಾಮಿನ ಪಕ್ಕದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕಳ್ಳತನ ಮಾಡಿದ ಕಾಳುಮೆಣಸನ್ನು ಮನೆಯಲ್ಲಿ ಶೇಖರಿಸಿಟ್ಟುಕೊಂಡು ನಂತರ ‘ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಬದ್ರುದ್ದೀನ್ ದಂಪತಿ ಮೂಡಿಗೆರೆ ಛತ್ರಮೈದಾನ ಬಡಾವಣೆಯಲ್ಲಿ ವಾಸವಾಗಿದ್ದರು. ಬಂಧಿತ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾಳೆ. ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷಕ “ಕೆ.ವಿ.ರಾಜಶೇಖರ್, ಪಿಎಸ್‌ಐ ಶ್ರೀನಾಥ್ ರೆಡ್ಡಿ, ಸಿಬ್ಬಂದಿ ವಿನಯ್, ಸಚಿನ್, ಮಹೇಂದ್ರ, ವೈಭವ್, ಸುರೇಂದ್ರ, ಮಲ್ಲಿಕಾರ್ಜುನ, ಪ್ರದೀಪ್ ಭಾಗವಹಿಸಿದ್ದರು.
Pepper theft in Mudigere – Female accused arrested
Leave a comment