ಚಿಕ್ಕಮಗಳೂರು: ಹಣದ ಆಸೆಗಾಗಿ ಹೆತ್ತ ಮಗಳನ್ನೇ ಪಾಲಕರು ವಿದೇಶದಲ್ಲಿ ವೇಶ್ಯಾವಾಟಿಕೆ ದಂಧೆಗೆ ಮಾರಾಟ ಮಾಡಿರುವ ಅಮಾನುಷ ಘಟನೆ ನಡೆದಿದೆ. ಚಿಕ್ಕಮಗಳೂರು ತಾಲೂಕು ಮಲ್ಲೇನಹಳ್ಳಿ ಗ್ರಾಮದಿಂದ ಗಿಡಮೂಲಿಕೆ ವ್ಯಾಪಾರದ ನೆಪದಲ್ಲಿ ಮಗಳನ್ನು ವಿದೇಶಕ್ಕೆ ಕರೆದೊಯ್ದು ಮಾರಾಟ ಮಾಡಿರುವ ಘಟನೆ ನಾಗರಿಕ ಸಮಾಜವೇ ತಲೆತಗ್ಗಿಸುವಣರೆ ಮಾಡಿದೆ.
ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದಲ್ಲಿ ವೇಶ್ಯಾವಾಟಿಕೆ ಕೂಪಕ್ಕೆ ತಳ್ಳಲ್ಪಟ್ಟಿದ್ದ ೨೦ ವರ್ಷದ ಯುವತಿ ನಂದಿತಾಳನ್ನು ಭಾರತೀಯ ರಾಯಭಾರ ಕಚೇರಿ ಹಾಗೂ ಸ್ಥಳೀಯರ ಸಹಾಯದಿಂದ ಇದೀಗ ಯಶಸ್ವಿಯಾಗಿ ರಕ್ಷಿಸಲಾಗಿದೆ.
ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ಸಮೀಪವಿರುವ ಹಕ್ಕಿಪಿಕ್ಕಿ ಕಾಲನಿಯ ಕ್ರಾಂತಿ ಮತ್ತು ರಾಜಶೇಖರ್ ಎಂಬ ದಂಪತಿಗೆ ನಂದಿತಾ (೨೦) ಎಂಬ ಮಗಳಿದ್ದಾಳೆ. ಮೂಲ ಬುಡಕಟ್ಟು ಸಮುದಾಯಕ್ಕೆ ಸೇರಿದ ಈ ಕುಟುಂಬವು ಗಿಡಮೂಲಿಕೆ ಮತ್ತು ಸಾಂಪ್ರದಾಯಿಕ ಔಷಧ ವ್ಯಾಪಾರಕ್ಕಾಗಿ ಸುಮಾರು ೪ ತಿಂಗಳ ಹಿಂದಷ್ಟೇ ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶಕ್ಕೆ ತೆರಳಿತ್ತು.
ತಮ್ಮೊಂದಿಗೆ ಮಗಳು ನಂದಿತಾಳನ್ನು ಕರೆದೊಯ್ದಿದ್ದ ಪಾಲಕರು ಕೇವಲ ೧೦ ದಿನಗಳ ಹಿಂದೆ ತೀವ್ರ ಹಣದ ಆಸೆಗೆ ಬಿದ್ದು, ಅಲ್ಲಿನ ವೇಶ್ಯಾವಾಟಿಕೆ ದಂಧೆಕೋರರಿಗೆ ಬರೋಬ್ಬರಿ ೭ ಲಕ್ಷ ರೂಪಾಯಿಗೆ ಮಗಳನ್ನೇ ಮಾರಾಟ ಮಾಡಿದ್ದರು. ಮಗಳನ್ನು ಮಾರಾಟ ಮಾಡಿದ ಬಳಿಕ ಭಾರತಕ್ಕೆ ಮರಳಿದ್ದ ಪಾಲಕರು ಮಗಳು ನಮಗಿಂತ ಮೊದಲೇ ಭಾರತಕ್ಕೆ ಮರಳಿದ್ದಾಳೆ ಎಂದು ಸ್ಥಳೀಯರ ಬಳಿ ಸುಳ್ಳು ಕಥೆ ಕಟ್ಟಿ ನಂಬಿಸಲು ಯತ್ನಿಸಿದ್ದರು.
ಯಾರಾದರೂ ಮಗಳ ಬಗ್ಗೆ ವಿಚಾರಿಸಿದರೆ, ಮಗಳು ಸೆನೆಗಲ್ಗೆ ವಾಪಸ್ ಹೋಗಿದ್ದಾಳೆ” ಎಂದು ಸುಳ್ಳಿನ ಕಥೆ ಕಟ್ಟಿ ಎಲ್ಲರನ್ನೂ ನಂಬಿಸಲು ಯತ್ನಿಸಿದ್ದರು. ವಿದೇಶದಲ್ಲಿ ನರಕಯಾತನೆ ಅನುಭವಿಸುತ್ತಿದ್ದ ನಂದಿತಾ, ಧೈರ್ಯಗೆಡದೆ ಕಷ್ಟಪಟ್ಟು ಸೆನೆಗಲ್ನಿಂದಲೇ ತನಗೆ ಪರಿಚಯವಿದ್ದವರನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾಗಿದ್ದಾಳೆ. ತಂದೆ-ತಾಯಿಯೇ ಹಣಕ್ಕಾಗಿ ತನ್ನನ್ನು ವೇಶ್ಯಾವಾಟಿಕೆಗೆ ಮಾರಾಟ ಮಾಡಿರುವ ಕಹಿ ಸತ್ಯವನ್ನು ಬಿಚ್ಚಿಟ್ಟಿದ್ದಾಳೆ.
ಅಷ್ಟೇ ಅಲ್ಲದೆ ತನಗೆ ಆಗಿರುವ ಅನ್ಯಾಯ ಮತ್ತು ಅಲ್ಲಿ ತಾನು ಅನುಭವಿಸುತ್ತಿರುವ ಚಿತ್ರಹಿಂಸೆಯ ಬಗ್ಗೆ ವಿಡಿಯೋ ಮಾಡಿ ತಾಯ್ನಾಡಿಗೆ ಕಳುಹಿಸಿಕೊಟ್ಟಿದ್ದಾಳೆ. ಈ ವಿಡಿಯೋ ಊರಿನ ಪರಿಚಯಸ್ಥರ ಕೈ ತಲುಪುತ್ತಿದ್ದಂತೆ ಇಡೀ ಹಕ್ಕಿಪಿಕ್ಕಿ ಕಾಲನಿಯ ಜನ ದಿಗ್ಬ್ರಮೆಗೊಂಡಿದ್ದಾರೆ.
ಯುವತಿಯ ವಿಡಿಯೋ ಮತ್ತು ಸಂದೇಶ ತಲುಪುತ್ತಿದ್ದಂತೆ ಎಚ್ಚೆತ್ತ ಸ್ಥಳೀಯರು ಹಾಗೂ ಸಂಘಟನೆಯವರು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ಭಾರತೀಯ ರಾಯಭಾರ ಕಚೇರಿಗೆ ವಿಷಯ ಮುಟ್ಟಿಸಿ, ಸೆನಗಲ್ನ ಸ್ಥಳೀಯ ಪೊಲೀಸರ ಸಹಾಯದೊಂದಿಗೆ ನಂದಿತಾಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
ತಮ್ಮ ಮಗಳನ್ನು ರಕ್ಷಿಸಿರುವ ವಿಷಯ ತಿಳಿಯುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಕ್ರಾಂತಿ ಮತ್ತು ರಾಜಶೇಖರ್ ದಂಪತಿ ಸದ್ದಿಲ್ಲದೆ ಊರಿಗೆ ಮರಳಿದ್ದಾರೆ. ಸದ್ಯ ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ನಂದಿತಾಗೆ ಸೂಕ್ತ ನ್ಯಾಯ ಕೊಡಿಸಬೇಕು ಮತ್ತು ಆಕೆಯನ್ನು ಈ ನರಕಕ್ಕೆ ತಳ್ಳಿದ ಹೆತ್ತವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.
ಈ ಸಂಬಂಧ ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದ ಮುಖಂಡರು ಚಿಕ್ಕಮಗಳೂರು ಎಸ್ ಪಿ ಜಿತೇಂದ್ರ ಕುಮಾರ್ ದಯಾಮ ಅವರಿಗೆ ಅಧಿಕೃತವಾಗಿ ದೂರು ಪತ್ರ ಸಲ್ಲಿಸಿದ್ದಾರೆ.
Parents who sold their daughter abroad for money
Leave a comment