ಅಜ್ಜಂಪುರ : ಯುವತಿಯೊಬ್ಬಳನ್ನು ಕಾರಿನಲ್ಲಿ ಬಲವಂತವಾಗಿ ಅಪಹರಿಸಿಕೊಂಡು ಹೋಗಿರುವ ಗಂಭೀರ ಆರೋಪ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯ ತ್ಯಾಗದಕಟ್ಟೆ ಗ್ರಾಮದಲ್ಲಿ ಕೇಳಿ ಬಂದಿದೆ.
ಬೈರಪ್ಪ ಎಂಬುವವರ ಮಗಳು ಗಾಯತ್ರಿ (30) ಎಂಬಾಕೆಯನ್ನು ಮದುವೆಯಾಗುವುದಾಗಿ ಹೊಸದುರ್ಗ ತಾಲ್ಲೂಕಿನ ಕಡುವನಕಟ್ಟೆ ನಿವಾಸಿ ಮಂಜುನಾಥ ಎಂಬುವವನು ಆರು ವರ್ಷಗಳ ಹಿಂದೆ ಕೇಳಿದ್ದನು.
ಆದರೆ ಇದಕ್ಕೆ ಕುಟುಂಬಸ್ಥರು ಒಪ್ಪಿರಲಿಲ್ಲ. ಈ ಹಿಂದೆ 2020 ರ ಜುಲೈನಲ್ಲಿಯೂ ಆಕೆಯನ್ನು ಮಂಜುನಾಥ ಕರೆದೊಯ್ದಿದ್ದಾಗ ಅಜ್ಜಂಪುರ ಪೊಲೀಸರು ಇಬ್ಬರನ್ನೂ ಪತ್ತೆಹಚ್ಚಿ ಕುಟುಂಬಕ್ಕೆ ಒಪ್ಪಿಸಿದ್ದರು.
ಈಗ ಗಾಯತ್ರಿ ಅವರು ತೋಟಕ್ಕೆ ನೀರು ಬಿಡಲು ಹೋದ ಸಮಯವನ್ನು ಹೊಂಚುಹಾಕಿ ಬಂದ ಮಂಜುನಾಥನು, ಆಕೆಯನ್ನು ಬಲವಂತವಾಗಿ ಕಾರೊಂದರಲ್ಲಿ ಕೂರಿಸಿಕೊಂಡು ಅಪಹರಿಸಿದ್ದಾನೆ ಎನ್ನಲಾಗಿದೆ.
ಎಣ್ಣೆಗೆಂಪು ಬಣ್ಣ, ನೀಳಮುಖ ಹಾಗೂ ಎಡಗಣ್ಣಿನ ಹುಬ್ಬಿನ ಮೇಲೆ ಹಳೆಯ ಗಾಯದ ಗುರುತಿರುವ ಗಾಯತ್ರಿಯ ಪತ್ತೆಗಾಗಿ ಆಕೆಯ ಸಹೋದರ ರಂಜಿತ್ ನೀಡಿದ ದೂರಿನ ಮೇರೆಗೆ ಅಜ್ಜಂಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Young woman kidnapped while going to water garden
Leave a comment