ಚಿಕ್ಕಮಗಳೂರು: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಒಂದೇ ಒಂದು ವಿಫಲತೆಯನ್ನು ಜೀವನದ ಅಂತಿಮ ಸೋಲು ಎಂದು ಭಾವಿಸಬಾರದು. ಆತ್ಮವಿಶ್ವಾಸ, ನಿರಂತರ ಪರಿಶ್ರಮ ಮತ್ತು ದೊಡ್ಡ ಕನಸುಗಳೊಂದಿಗೆ ಮುನ್ನಡೆದರೆ ಯಶಸ್ಸು ಖಂಡಿತ ಸಿಗುತ್ತದೆ ಎಂದು ಮಾಜಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ ಹೇಳಿದರು.
ನಗರದ ಕುವೆಂಪು ಕಲಾ ಮಂದಿರದಲ್ಲಿ ಲೈಫ್ ಲೈನ್ ಪ್ರೈವೇಟ್ ಲಿಮಿಟೆಡ್ ಇವರ ಪ್ರಾಯೋಜಕತ್ವದಲ್ಲಿ ವಿ-ಶೈನ್ ಕೋಚಿಂಗ್ ಸೆಂಟರ್ ಕೋಟ ಇವರ ವತಿಯಿಂದ ಪೊಲೀಸ್ ಕಾನ್ಸ್ಟೇಬಲ್, ಗ್ರಾಮ ಆಡಳಿತ ಅಧಿಕಾರಿ, ಭೂಮಾಪಕರ ಹುದ್ದೆ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳಿಗಾಗಿ ಆಯೋಜಿಸಿದ್ದ ಉಚಿತ ಕಾರ್ಯಗಾರ ಉದ್ಯೋಗ ಸಂಕಲ್ಪ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಅತ್ಯಂತ ಕಠಿಣವೆಂದು ಭಾವಿಸಿ ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಆರಂಭದಲ್ಲಿ ಯಾವುದೇ ವಿಷಯ ಕಷ್ಟವೆನಿಸಿದರೂ ಅದರ ವಿಧಾನ, ಸೂತ್ರಗಳು ಮತ್ತು ತಯಾರಿಯ ಕ್ರಮವನ್ನು ಅರ್ಥಮಾಡಿಕೊಂಡು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿದರೆ ಅದು ಸುಲಭವಾಗುತ್ತದೆ. ಜೀವನದಲ್ಲಿ ಒಂದು ಅವಕಾಶ ಕೈತಪ್ಪಿದರೆ ಎಲ್ಲ ಅವಕಾಶಗಳೂ ಮುಗಿದಂತಾಗುವುದಿಲ್ಲ. ದೇವರು ಪ್ರತಿಯೊಬ್ಬರಿಗೂ ಬದುಕಿನಲ್ಲಿ ಯಾವುದಾದರೂ ಒಂದು ದಾರಿಯನ್ನು ತೆರೆದಿರುತ್ತಾನೆ. ಆದ್ದರಿಂದ ಒಂದೇ ಪರೀಕ್ಷೆಯ ಫಲಿತಾಂಶದಿಂದ ನಿರಾಶೆಗೊಳಗಾಗಿ ಜೀವನದ ಬಗ್ಗೆ ನಕಾರಾತ್ಮಕವಾಗಿ ಯೋಚಿಸಬಾರದು ಎಂದು ಸಲಹೆ ನೀಡಿದರು.
ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಬದುಕನ್ನು ಉದಾಹರಿಸಿದ ರವಿ ಅವರು, ಕಲಾಂ ಅವರು ಪೈಲಟ್ ಆಗುವ ಕನಸು ಕಂಡಿದ್ದರೂ ಆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲಿಲ್ಲ. ಆದರೆ ಅದೇ ವೈಫಲ್ಯ ಅವರ ಬದುಕಿನ ಅಂತ್ಯವಾಗಲಿಲ್ಲ. ಬಳಿಕ ಅವರು ಶ್ರೇಷ್ಠ ವಿಜ್ಞಾನಿಯಾಗಿ, ತತ್ವಜ್ಞಾನಿಯಾಗಿ ಹಾಗೂ ರಾಷ್ಟ್ರಪತಿಯಾಗಿ ವಿಶ್ವದ ಗೌರವಕ್ಕೆ ಪಾತ್ರರಾದರು. ಆದ್ದರಿಂದ ಒಂದು ಪರೀಕ್ಷೆಯಲ್ಲಿ ವಿಫಲರಾದರೆ ಜೀವನವೇ ಮುಗಿದಂತಾಗಿದೆ ಎಂದು ಯಾರೂ ಭಾವಿಸಬಾರದು ಎಂದು ಹೇಳಿದರು.
ಅಭ್ಯರ್ಥಿಗಳು ತಮಗೆ ಇಷ್ಟವಾದ ಹುದ್ದೆಗಳಿಗಾಗಿ ಶ್ರಮಿಸುವುದು ಸಹಜ. ಆದರೆ ಮೊದಲ ಪ್ರಯತ್ನದಲ್ಲಿ ಯಶಸ್ಸು ದೊರೆಯದಿದ್ದರೆ ಅದನ್ನು ಅನುಭವವಾಗಿ ಸ್ವೀಕರಿಸಿ ಮತ್ತಷ್ಟು ಸಿದ್ಧತೆಯೊಂದಿಗೆ ಮುಂದುವರಿಯಬೇಕು. ಯಶಸ್ಸಿನ ಇನ್ನೂ ಅನೇಕ ಅವಕಾಶಗಳು ಬದುಕಿನಲ್ಲಿ ತೆರೆದಿರುತ್ತವೆ ಎಂಬ ವಿಶ್ವಾಸವನ್ನು ಕಳೆದುಕೊಳ್ಳಬಾರದು ಎಂದು ಕರೆ ನೀಡಿದರು.
ವಿ-ಶೈನ್ ಕೋಚಿಂಗ್ ಸೆಂಟರ್ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಚಿಕ್ಕಮಗಳೂರಿನ ಯುವಕರಿಗೆ ಉಚಿತ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಸಂಸ್ಥೆಯ ರೂವಾರಿ ಕಿಶೋರ್ ಕುಮಾರ್ ಹೆಗಡೆ ಅವರು ಸಮಾಜಸೇವೆ ಮತ್ತು ರಾಷ್ಟ್ರಹಿತದ ಚಿಂತನೆಯೊಂದಿಗೆ ಯುವಕರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಪ್ರಶಂಸಿಸಿದರು.
ಎವರೆಸ್ಟ್ ಶಿಖರವನ್ನು ಯಾರೂ ಒಂದೇ ದಿನದಲ್ಲಿ ಏರುವುದಿಲ್ಲ; ಒಂದೊಂದು ಹೆಜ್ಜೆ ಇಡುತ್ತಾ ಶಿಖರ ತಲುಪುತ್ತಾರೆ. ಅದೇ ರೀತಿ ಯಶಸ್ಸೂ ಕೂಡ ನಿರಂತರ ಪರಿಶ್ರಮದ ಫಲ ಎಂದು ಹೇಳಿದರು.
ಸಂಸತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಅನುಭವದ ಕೊರತೆ ಕಾರಣಕ್ಕೆ ಪರೀಕ್ಷೆಯಲ್ಲಿ ವಿಫಲವಾಗುವ ಹಲವು ಉದಾಹರಣೆಗಳನ್ನು ನೋಡಿದ್ದೇವೆ. ಈ ದೃಷ್ಠಿಯಿಂದ ಇಂತಹ ಉಚಿತ ಕಾರ್ಯಾಗಾರ ಉಪಯುಕ್ತ ಎಂದರು.
ಅಭ್ಯರ್ಥಿಗಳಲ್ಲಿ ಆತ್ಮವಿಶ್ವಾಸ ಅಗತ್ಯ. ಸ್ಪರ್ಧಾತ್ಮ ಪರೀಕ್ಷೆಗಳಲ್ಲಿ ಅರ್ಹತೆ ಇದ್ದವರಿಗೆ ಮಾತ್ರ ಅವಕಾಶ ಇರುತ್ತದೆ. ಇದಕ್ಕಾಗಿ ಹೆಚ್ಚು ಅನುಭವವನ್ನು ಪಡೆದು ಮತ್ತೆ ಪ್ರಶ್ನೆಗಳನ್ನು ಕೇಳಿ ಸಂಶಯಗಳನ್ನು ಪರಿಹರಿಸಿಕೊಂಡು ಪರೀಕ್ಷೆ ಬರೆದರೆ ಯಶಸ್ಸು ಖಂಡಿತ ಎಂದರು.
ಲೈಫ್ಲೈನ್ ಫೀಡ್ಸ್ ನಿರ್ದೇಶಕರಾದ ಅರ್ಜುನ್ ಕೆ.ಹೆಗ್ಡೆ ಮಾತನಾಡಿ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಿದಾಗ ಉತ್ತಮ ಅವಕಾಶಗಳು ದೊರೆಯುತ್ತವೆ, ವಿದ್ಯಾಭ್ಯಾಸ ಮಾಡುವಾಗ ಕಠಿಣ ಶ್ರಮದಿಂದ ಗುರಿ ಇಟ್ಟುಕೊಂಡು ಅಧ್ಯಾಯನ ಮಾಡಬೇಕು ಎಂದ ಅವರು ಎಲ್ಲರಿಗೂ ಸರ್ಕಾರಿ ಕೆಲಸ ಸಿಗುವುದಿಲ್ಲ, ಸ್ವತ ಬಂಡವಾಳದಿಂದ ಉದ್ದಿಮೆಗಳನ್ನು ಪ್ರಾರಂಭಿಸುವ ಮೂಲಕ ತಮ್ಮ ಜೀವನ ರೂಪಿಸಿಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್ ದೇವರಾಜ್ ಶೆಟ್ಟಿ, ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಲ್ಮುರುಡಪ್ಪ, ಲೈಫ್ ಲೈನ್ ಪ್ರೈವೇಟ್ ಲಿಮಿಟೆಡ್ ಉಪಾಧ್ಯಕ್ಷರಾದ ಡಾ. ಸುಬ್ರಹ್ಮಣ್ಯ ಭಟ್, ನಗರಸಭಾ ಅಧ್ಯಕ್ಷೆ ಭವ್ಯ ಮಂಜುನಾಥ್, ಹಿರಿಯ ಮುಖಂಡರಾದ ಕೋಟೆ ರಂಗನಾಥ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೀರ್ತನಾ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.
If you move forward with big dreams success is certain.
Leave a comment