ಚಿಕ್ಕಮಗಳೂರು: ಚೀನಾ ದೇಶದ ಯುವತಿ ಜೇಡ್ ಮತ್ತು ಕಾಫಿಸೀಮೆಯ ಯುವಕ ರೂಪಕ್ ಪರಸ್ಪರ ಇಷ್ಟಪಟ್ಟು ಇಂದು ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಸಪ್ತಪದಿ ತುಳಿದರು.
ಹಿರೇಗೌಜದ ಬಳಿ ಕಾಫಿ, ಅಡಿಕೆ, ತರಕಾರಿ ಕೃಷಿ ಮಾಡಿಕೊಂಡಿರುವ ಶ್ರೀನಿವಾಸ ಮತ್ತು ಕಸ್ತೂರಿ ದಂಪತಿಗಳ ಏಕಮಾತ್ರಪುತ್ರ ಕೆ.ಎಸ್.ರೂಪಕ್ ಸುಮಾರು ಏಳೆಂಟು ವರ್ಷದ ಹಿಂದೆ ಅಧ್ಯಯನಕ್ಕಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದು ಯುನಿರ್ವಸಿಟಿ ಆಫ್ ಕ್ವೀನ್ಸ ಲ್ಯಾಡ್‌ನಲ್ಲಿ ಎಂಬಿಎ ವ್ಯಾಸಂಗ ಮಾಡಿದವರು. ಚೀನಾ ದೇಶದ ಗಾಂಗ್‌ಜಾವ್ ಪಟ್ಟಣದ ಡಾ||ಜಿನ್‌ಚಾಂಗ್ ಲಯಾವ್ ಮತ್ತು ಡಾ|| ಶಾಂಗ್‌ಕಿಯಾನ್ ವು ವೈದ್ಯದಂಪತಿಗಳ ಪುತ್ರಿ ಲೂ ವು (ಜೇಡ್) ಸಹ ಆಸ್ಟ್ರೇಲಿಯಾದಲ್ಲಿ ಅಧ್ಯಯನಕ್ಕೆ ಬಂದಿದ್ದಳು. ಇಬ್ಬರಿಗೂ ಪರಿಚಯ-ಸ್ನೇಹ ಪ್ರೇಮವಾಗಿ ಪರಿವರ್ತನೆಗೊಂಡಿತು.
ಶಿಕ್ಷಣದ ನಂತರ ರೂಪಕ್ ಆಸ್ಟ್ರೇಲಿಯಾದ ಮೂರನೇ ಅತಿದೊಡ್ಡ ನಗರವಾದ ಬ್ರೆಸ್‌ಬೈನ್‌ನಲ್ಲಿ ನೆಲೆಸಿ ಬ್ರೆಡ್ಸ್ ಗ್ರೂಫ್ ಫೈನಾಸ್ಷಿಯಲ್ ಕಂಟ್ರೋಲರ್ ಉದ್ಯೋಗ ನಿರ್ವಹಿಸುತ್ತಿದ್ದು ಜೀಡ್‌ಕೂಡ ಲಿನೊವೋ ಕಂಪನಿಯ ಪಾಲುದಾರರಾಗಿ ಉದ್ಯೋಗ ನಿರತರಾಗಿದ್ದಾರೆ. ಇಬ್ಬರೂ ಕುಟುಂಬದ ಹಿರಿಯರು, ಬಂಧು-ಮಿತ್ರರ ಆಶೀರ್ವಾದ ಪಡೆದು ಹಿಂದೂ ಸಂಸ್ಕೃತಿಗನುಗುಣವಾಗಿ ವಿವಾಹವಾಗಲು ತೀರ್ಮಾನಿಸಿದರು.
ರೂಪಕ್ ಚೀನಾಕ್ಕೆ ತೆರಳಿ ಜೇಡಾ ಅವರ ಕುಟುಂಬದ ಒಪ್ಪಿಗೆ ಪಡೆದು ತಾಯಿ ಡಾ|| ಶಾಂಗ್‌ಕಿಯಾನ್ ವು ಜೊತೆಗೆ ಲಿಯೋ ಚಿಂಗ್, ಚಾಕ್-ಕೂಲ್‌ರೊಂದಿಗೆ ನಾಲ್ಕುದಿನದ ಹಿಂದೆ ಚಿಕ್ಕಮಗಳೂರಿಗೆ ಆಗಮಿಸಿ ತಮ್ಮ ಕುಟುಂಬದ ಸಮ್ಮತಿ ಪಡೆದರು. ನಿನ್ನೆ ಅರಿಶಿನಶಾಸ್ತ್ರ-ಎಣ್ಣೆಸ್ನಾನ, ದೇವರಕಾರ್‍ಯ ನಡೆಯಿತು. ಇಂದು ಬೆಳಗ್ಗೆ ಹಳಿಯೂರು ಕಲ್ಲೇಶ್ವರ ದೇವಸ್ಥಾನದ ಅರ್ಚಕ ಉಪೇಂದ್ರ ಚಡಗ ಮತ್ತು ಉಡುಪಿಯ ರಾಘವೇಂದ್ರರಾವ್ ಪೌರೋಹಿತ್ಯದೊಂದಿಗೆ ವಿವಾಹಶಾಸ್ತ್ರ ನಡೆಯಿತು.
ಚೀನಾದಿಂದ ಬಂದಿದ್ದ ಐವರೂ ಭಾರತೀಯ ವಸ್ತ್ರವಿನ್ಯಾಸದೊಂದಿಗೆ ಅಲಂಕೃತಗೊಂಡು ಎಲ್ಲ ಪೂಜಾವಿಧಾನದಲ್ಲೂ ಸಂತಸದಿಂದ ಪಾಲ್ಗೊಂಡರು. ಧಾರೆಶಾಸ್ತ್ರ-ಮಾಂಗಲ್ಯಧಾರಣೆ-ಅಶ್ವಿನಿನಕ್ಷತ್ರ ತೋರಿಸುವ ಆಚರಣೆಗಳು ಚೀನಾತಂಡದ ವಿಶೇಷ ಆಸಕ್ತಿಗೆ ಕಾರಣವಾಯಿತು. ಮಧ್ಯಾಹ್ನ ಆರತಿ-ಅಕ್ಷತೆಯಲ್ಲಿ ನೂರಾರುಮಂದಿ ನೂತನ ವಧುವರರನ್ನು ಹರಸಿದರು.
ಜೇಡಾ ಕುಟುಂಬ ಬೌದ್ಧ ಧರ್ಮದಿಂದ ಪ್ರಭಾವಿತಗೊಂಡವರು. ಅವರಲ್ಲೂ ದೀಪ, ಧೂಪ, ಎಡೆ ಹಾಕುವುದು, ಪಟಾಕಿ ಸಿಡಿಸುವುದು ಸೇರಿದಂತೆ ಬಹುತೇಕ ಆಚರಣೆಗಳಲ್ಲಿ ನಮ್ಮೊಂದಿಗೆ ಸಾಮ್ಯತೆ ಇದೆ. ಅವರು ಸಸ್ಯಹಾರ-ಮಾಂಸಹಾರ ಸೇವಿಸುತ್ತಾರೆ. ಇಂಗ್ಲೀಷ್ ಬಳಕೆಯಲ್ಲಿ ವ್ಯತ್ಯಾಸ ಹೊರತುಪಡಿಸಿದರೆ ಹೊಂದಾಣಿಕೆಗೆ ತೊಂದರೆ ಇಲ್ಲ ಎನ್ನುವ ರೂಪಕ್, ಹಿಂದೂಧರ್ಮ ಪಾಲನೆಗೆ ಅವರೆಲ್ಲರ ಸಹಮತಿ ಇದೆ. ದೇಶ, ಭಾಷೆ, ಮತ, ಗಡಿದಾಟಿ ಭಾವೈಕ್ಯತೆಯ ಸಂಕೇತವಾಗಿ ವಿವಾಹ ನಡೆದಿದೆ ಎಂದು ಪತ್ನಿ ಜೇಡಾರೊಂದಿಗೆ ಹರ್ಷಿಸಿದರು.
Marriage across borders of country language and religion
Leave a comment