ಚಿಕ್ಕಮಗಳೂರು: ಆರ್ಥಿಕವಾಗಿ ಅಭಿವೃದ್ಧಿಗೆ ಅನುದಾನ ಕ್ರೂಢೀಕರಿಸಬೇಕೆಂಬ ಉದ್ದೇಶದೊಂದಿಗೆ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರವನ್ನು ಆರ್ಥಿಕ ಸದೃಢಗೊಳಿಸಿದ್ದರ ಫಲವಾಗಿ ರಸ್ತೆ, ಪಾರ್ಕ್ ಅಭಿವೃದ್ಧಿಗೆ ಮುಂದಾಗಿರುವುದಾಗಿ ಶಾಸಕ ಹೆಚ್.ಡಿ ತಮ್ಮಯ್ಯ ತಿಳಿಸಿದರು.
ಅವರು ಇಂದು ೧.೩೦ ಕೋಟಿ ರೂ. ವೆಚ್ಚದಲ್ಲಿ ಕಲ್ಯಾಣ ನಗರದ ಹಿರೇಮಗಳೂರು ವಸತಿ ಬಡಾವಣೆಯ ಗಣಪತಿ ದೇವಸ್ಥಾನದ ೬೦ ಅಡಿ ರಸ್ತೆಯ ಪಶ್ಚಿಮ ಭಾಗದ ಉದ್ಯಾನವನದ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಈ ಬಡಾವಣೆಯಲ್ಲಿ ಸ್ವಚ್ಚತೆ ದೃಷ್ಟಿಯಿಂದ ಮನೆ ಮನೆ ಕಸ ಸಂಗ್ರಹಣೆ ಮಾಡಬೇಕು, ಈ ಪಾರ್ಕ್ ಮತ್ತು ರಸ್ತೆಯನ್ನು ಸಮಗ್ರವಾಗಿ ಡಾಂಬರೀಕರಣಗೊಳಿಸಿ ಮುಂದಿನ ಮಾ.೩೧ ರೊಳಗೆ ಶಾಶ್ವತ ಗುಣಮಟ್ಟದ ಕಾಮಗಾರಿಯನ್ನು ಕೈಗೊಂಡು ಪೂರ್ಣಗೊಳಿಸಬೇಕೆಂದು ಗುತ್ತಿಗೆದಾರರು ಮತ್ತು ಇಂಜಿನಿಯರ್‌ಗೆ ಸೂಚನೆ ನೀಡಿದರು.
ಸಮಗ್ರ ಅಭಿವೃದ್ಧಿಪಡಿಸಬೇಕೆಂಬ ಗುರಿಯೊಂದಿಗೆ ಈಗಾಗಲೇ ಈ ಬಡಾವಣೆಯನ್ನು ನಗರಸಭೆಗೆ ಹಸ್ತಾಂತರಿಸಲಾಗಿದ್ದು, ಅದಕ್ಕೂ ಮುನ್ನ ಈ ವಾರ್ಡಿನ ಎಲ್ಲಾ ರಸ್ತೆಗಳನ್ನು ಆದ್ಯತೆ ಮೇರೆಗೆ ಡಾಂಬರೀಕರಣ ಮಾಡಬೇಕೆಂಬ ಬಗ್ಗೆ ನಗರಾಭಿವೃದ್ಧಿ ಪ್ರಾಧಿಕಾರದ ಅನುಮೋದನೆ ಪಡೆದು ಕಾಮಗಾರಿ ಆರಂಭಿಸಲಾಗಿದೆ ಎಂದರು.
ನಗರಸಭೆಯಲ್ಲಿ ಈಗಾಗಲೇ ೧೨೮ ಪಾರ್ಕ್‌ಗಳನ್ನು ಗುರ್ತಿಸಿ ಪುಸ್ತಕ ಸಿದ್ದಪಡಿಸಲಾಗಿದ್ದು, ಇದರಲ್ಲಿ ಒತ್ತುವರಿಯಾಗಿರುವ ಪಾರ್ಕ್‌ಗಳನ್ನು ಕೂಡಲೇ ತೆರವುಗೊಳಿಸಲು ಅಧಿಕಾರಿಗಳು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ನನ್ನನ್ನು ರಾಜಕೀಯವಾಗಿ ಸಸಿ ನೆಟ್ಟವರು ಹಿರೇಮಗಳೂರಿನ ಗ್ರಾಮಸ್ಥರು. ಅದಕ್ಕೆ ನೀರೆರೆದು ಪೋಷಿಸಿದವರು ಚಿಕ್ಕಕುರುಬರಹಳ್ಳಿ, ದೊಡ್ಡಕುರುಬರಹಳ್ಳಿ, ಸಿಡಿಎ ಲೇಔಟ್, ನರಿಗುಡ್ಡನಹಳ್ಳಿ, ಆಶ್ರಯ ಬಡಾವಣೆಯ ಜನ. ನಗರಸಭೆಗೆ ಆಯ್ಕೆಮಾಡಿದ ಪರಿಣಾಮ ಕಲ್ಯಾಣ ನಗರದ ರಸ್ತೆಗಳು ಡಾಂಬರೀಕರಣಗೊಳಿಸಲಾಗುತ್ತಿದೆ ಎಂದು ಸ್ಮರಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಅಹಮದ್ ಮಾತನಾಡಿ, ಕಲ್ಯಾಣ ನಗರ ಬಸವೇಶ್ವರ ನಗರದಲ್ಲಿ ಇರುವ ಪಾರ್ಕ್‌ನ್ನು ಅತ್ಯಾಧುನಿಕ ಮಾದರಿಯಲ್ಲಿ ನಿರ್ಮಾಣ ಮಾಡಲು ಶಾಸಕ ಹೆಚ್.ಡಿ. ತಮ್ಮಯ್ಯನವರು ಮುಂದಾಗಿರುವುದು ಶ್ಲಾಘನೀಯ, ಈ ನಿಟ್ಟಿನಲ್ಲಿ ಟೆಂಡರ್ ಆಗಿ ಕಾಮಗಾರಿ ಆರಂಭಿಸಲು ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದರು.
ಕಂಚಿನ ಕಟ್ಟೆ ಕೆರೆ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಗುದ್ದಲಿ ಪೂಜೆ ನೆರವೇರಿಸಿ ದೊಡ್ಡಮಟ್ಟದಲ್ಲಿ ಅಭಿವೃದ್ಧಿಪಡಿಸಲು ಗುರಿಹೊಂದಲಾಗಿದೆ ಎಂದು ಹೇಳಿದರು.
ನಗರಸಭಾಧ್ಯಕ್ಷೆ ಶೀಲಾದಿನೇಶ್ ಮಾತನಾಡಿ, ನಗರದ ೩೫ ವಾರ್ಡ್‌ಗಳಲ್ಲಿಯೂ ಇದೇ ಮಾದರಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲು ಸಹಕರಿಸಬೇಕೆಂದು ವಿನಂತಿಸಿದರು.
ನಗರಸಭೆ ಇಂಜಿನಿಯರ್ ಲೋಕೇಶ್ ಮಾತನಾಡಿ, ಈ ಪಾರ್ಕ್‌ನ್ನು ಅತ್ಯಾಧುನಿಕ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದ್ದು, ವಾಕ್ ಮಾಡುವವರಿಗೆ ಅನುಕೂಲವಾಗುವಂತೆ ಅಲ್ಲಲ್ಲಿ ಬೇಂಚ್ ನಿರ್ಮಾಣ, ಆಯ್ದ ಮರಗಳ ಬಳಿ ಸುತ್ತ ಕಟ್ಟೆ ಕಟ್ಟಿ ನಾಗರೀಕರು ಕುಳಿತುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.
ವಿದ್ಯುತ್ ದೀಪಗಳ ಅಳವಡಿಕೆ, ಮಕ್ಕಳ ಆಟಿಕೆ ವಸ್ತುಗಳು ಹಾನಿಯಾಗಿದ್ದು, ಹೊಸದಾಗಿ ನಿರ್ಮಿಸುತ್ತೇವೆ, ಜೊತೆಗೆ ಜಿಮ್ ವಸ್ತುಗಳು, ರೈನ್ ವಾಟರ್ ಹಾರ್ವೆಸ್ಟ್‌ಗೆ ಅವಕಾಶ ನೀಡಲಾಗಿದ್ದು, ಟ್ರೈನ್ ಟ್ಯ್ರಾಕ್ ಅಳವಡಿಸಲು ಗುರಿಹೊಂದಲಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಲಲಿತಾರವಿನಾಯ್ಕ್, ಸದಸ್ಯರಾದ ಅರುಣ್ ಕುಮಾರ್, ವರಸಿದ್ದಿ ವೇಣುಗೋಪಾಲ್, ಎ.ಸಿ. ಕುಮಾರಗೌಡ, ಪರಮೇಶ್‌ರಾಜ್ ಅರಸ್, ಲಕ್ಷ್ಮಣ್, ಸಿಡಿಎ ನಾಮಿನಿ ಸದಸ್ಯರಾದ ರಾಘವೇಂದ್ರ, ಸುದೀಪ್, ಆಶಾಸುರೇಶ್, ಆಯುಕ್ತರಾದ ನಾಗರತ್ನ, ಪೌರಾಯುಕ್ತ ಬಿ.ಸಿ. ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು
Kalyana Nagar Park Comprehensive Development at a cost of Rs 1.30 crore
Leave a comment