ಚಿಕ್ಕಮಗಳೂರು: ಕೊಪ್ಪದ ಜಿ.ಎಚ್.ವೆಂಕಟೇಶ್ ಅವರ ಮಣಿಪುರ ಎಸ್ಟೇಟ್ ಮನೆಯಲ್ಲಿ ನಡೆದಿದ್ದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ನೇಪಾಳ ಮೂಲದ ಮೂರು ಮಂದಿ ಅಂತರಾಷ್ಟ್ರೀಯ ಕಳ್ಳರನ್ನು ಪೊಲೀಸರು ಬಂಧಿಸಿ, ೧.೭೫ ಕೋಟಿ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣವನ್ನು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಡಾ.ವಿಕ್ರಮ ಅಮಟೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ್ದು, ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಮಹರಾಷ್ಟ್ರದ ಸಾಂಗ್ಲಿ ಪೊಲೀಸರು ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.
ನೇಪಾಳದ ಕೈಲಾಲಿ ಜಿಲ್ಲೆಯ ರಾಜೇಂದ್ರ ಶೇರ್ ಭಾಯ್, ಏಕೇಂದ್ರ ಕುಟಲ್ ಬದ್ವಾಲ್ ಹಾಗೂ ನೇಪಾಳದ ದಾಮಡಿ ನಿವಾಸಿ ಕರಂಸಿಂಗ್ ಬಹದ್ದೂರ್ ಬಂಧಿತ ಆರೋಪಿಗಳಾಗಿದ್ದಾರೆ. ಅವರಿಂದ ೧.೫೦ ಕೋಟಿ ರೂ.ಮೌಲ್ಯದ ೧ ಕೆಜಿ ೮೦೦ ಗ್ರಾಂ ತೂಕದ ಚಿನ್ನ, ೧ ಕೆಜಿ ೨೦೦ ಗ್ರಾಂ ಬೆಳ್ಳಿ ಆಭರಣಗಳು ಹಾಗೂ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ೧೫ ದಿನಗಳ ಹಿಂದೆ ನೇಪಾಳದ ದಂಪತಿಗಳಿಬ್ಬರು ಮಣಿಪುರ ಎಸ್ಟೇಟ್ಗೆ ಬಂದು ಕಾವಲುಗಾರರಾಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಮೊನ್ನೆ ವೆಂಕಟೇಶ್ ಅವರ ಕುಟುಂಬದವರು ಕಾರ್ಯಕ್ರಮ ನಿಮಿತ್ತ ಬೇರೆಡೆ ತೆರಳಿದ್ದಾಗ ನಕಲಿ ಕೀ ಬಳಸಿ ಮನೆಯೊಳಗೆ ನುಗ್ಗಿ ೬ ಲಕ್ಷ ರೂ. ನಗದು ಮತ್ತು ೩೭.೫೦ ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಜಿ.ಎಚ್.ವೆಂಕಟೇಶ್ ಅವರು ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿ ಟಿವಿ ಫುಟೇಜ್ಗಳನ್ನು ಪರಿಶೀಲಿಸಿದಾಗ ಮನೆ ಬಳಿ ಕಾರೊಂದು ಬಂದು ಹೋಗಿರುವುದು ಕಂಡು ಬಂದಿತ್ತು. ಅದು ಮಹರಾಷ್ಟ್ರ ಕಡೆ ಹೊಗುತ್ತಿರುವುದು ಗೊತ್ತಾಯಿತು. ಈ ಬಗ್ಗೆ ಅಲ್ಲಿನ ಪೊಲೀಸರಿಗೆ ಮಾಹಿತಿ ಕೊಡಲಾಯಿತು. ಕೂಡಲೇ ಕಾರ್ಯಪ್ರವೃತ್ತರಾದ ಮಹರಾಷ್ಟ್ರ ಪೊಲೀಸರು ಕಾರು ಇರುವ ಜಾಗವನ್ನು ಪತ್ತೆ ಹಚ್ಚಿ ಅಲ್ಲಿನ ಸಾಂಗ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರಿನ ಸಮೇತ ಆರೋಪಿಗಳನ್ನು ಅಲ್ಲಿನ ಪೊಲೀಸರು ಬಂಧಿಸಿದರು ಎಂದು ವಿವರಿಸಿದರು.
ಇವರೊಂದಿಗೆ ಪ್ರಮುಖ ಆರೋಪಿಗಳಾದ ದಂಪತಿಗಳು ಸೇರಿದಂತೆ ಮತ್ತೊಂದು ತಂಡವೂ ಕೃತ್ಯದಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಅವರ ಬಂಧನಕ್ಕಾಗಿ ಈಗ ಬಲೆ ಬೀಸಲಾಗಿದೆ ಎಂದರು.
ಪ್ರಕರಣವನ್ನು ಬೇಧಿಸುವಲ್ಲಿ ಚಿಕ್ಕಮಗಳೂರು ಸೆನ್ ಠಾಣೆ ಡಿವೈಎಸ್ಪಿ ತಿಪ್ಪೇಸ್ವಾಮಿ, ಪಿಎಸ್ಐ ಖಾದರ್, ಸಿಪಿಸಿ ಹರೀಶ್, ಕೊಪ್ಪ ಡಿವೈಎಸ್ಪಿ ಬಾಲಾಜಿ ಸಿಂಗ್, ಪಿಎಸ್ಐ ಬಸವರಾಜು ಮತ್ತು ಸಿಬ್ಬಂಧಿಗಳ ತಂಡ ಯಶಸ್ವಿಯಾಗಿದೆ.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್ ಉಪಸ್ಥಿತರಿದ್ದರು.
International thieves arrested – Rs. 1.75 crore worth of gold jewellery seized
Leave a comment