ಚಿಕ್ಕಮಗಳೂರು : ಚಿಕ್ಕಮಗಳೂರು ನಗರ ಹಾಗೂ ವಿವಾದಿತ ಐ.ಡಿ ಪೀಠ ಮಾರ್ಗ ಸಂಪೂರ್ಣ ಕೇಸರಿ ಹಾಗೂ ಖಾಕಿಮಯವಾಗಿದೆ. ನಗರದ ಎಲ್ಲೆಲ್ಲೂ ಪೊಲೀಸರೇ ಕಾಣಿಸುತ್ತಿದ್ದು ನಾಳಿನ ಕಾರ್ಯಕ್ರಮಕ್ಕೆ ಎಲ್ಲಿಲ್ಲದ ಭದ್ರತೆ ಒದಗಿಸಲಾಗಿದೆ.
ಕಾಫಿನಾಡಲ್ಲಿ ಶ್ರೀರಾಮಸೇನೆಯ ದತ್ತಮಾಲಾ ಅಭಿಯಾನದ ಅಂಗವಾಗಿ ನಾಳೆ ಚಿಕ್ಕಮಗಳೂರು ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಲಿರುವ ಹಿನ್ನೆಲೆಯಲ್ಲಿ ನಗರ ಹಾಗೂ ದತ್ತಪೀಠ ಸುತ್ತಮುತ್ತ ವ್ಯಾಪಕ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಈ ಮೂಲಕ ಕಾಫಿನಾಡಿನಾದ್ಯಂತ ಖಾಕಿ ಹೈ ಅಲರ್ಟ್ ಆಗಿದೆ. ನಾಳೆ ಸಾವಿರಾರು ಭಕ್ತರಿಂದ ಶಂಕರಮಠ ಬಳಿ ಧರ್ಮಸಭೆ ನಂತರ ಶೋಭಾಯಾತ್ರೆ ಹಾಗೂ ದತ್ತಪೀಠದಲ್ಲಿ ದತ್ತಪಾದುಕೆ ದರ್ಶನ ಇರುವುದರಿಂದ ಜಿಲ್ಲೆ ಹಾಗೂ ಚಿಕ್ಕಮಗಳೂರು ತಾಲೂಕಿನಾದ್ಯಂತ ಖಾಕಿ ಹದ್ದಿನ ಕಣ್ಣು ಇಟ್ಟಿದೆ.
ದತ್ತಪೀಠ ಹಾಗೂ ಚಿಕ್ಕಮಗಳೂರು ನಗರದಲ್ಲಿ 1700ಕ್ಕೂ ಅಧಿಕ ಪೊಲೀಸರಿಂದ ಬಂದೋಬಸ್ತ್ ಮಾಡಲಾಗಿದೆ. ಓರ್ವ ಎಸ್ಪಿ, ಓರ್ವ ಅಡಿಷನಲ್ ಎಸ್ಪಿ, 6 ಡಿವೈಎಸ್ಪಿ,15 ಸಿಪಿಐ ಸೇರಿದಂತೆ 100 ಜನ ಪಿಎಸ್ಐ, 1500 ಸಿವಿಲ್ ಪೊಲೀಸರು ಹಾಗೂ 8 ಕೆ.ಎಸ್.ಆರ್.ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಅಲ್ಲದೇ
11 ಡಿಎಆರ್ ತುಕಡಿ ಕ್ಯೂ.ಆರ್.ಟಿ. ಟೀಂಗಳು, 2 ಎಸಿ ಟೀಂಗಳಿಂದ ಬಂದೋಬಸ್ತ್ ಏರ್ಪಟ್ಟಿದೆ.
ವಿಶೇಷವಾಗಿ ದತ್ತಪೀಠ ಮಾರ್ಗದ ಸೂಕ್ಷ್ಮ ಪ್ರದೇಶದಲ್ಲಿ ಸಿಸಿಟಿವಿ ಗಳನ್ನು ಅಳವಡಿಕೆ ಮಾಡಲಾಗಿದೆ.
ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಡ್ರೋನ್ ಕ್ಯಾಮರಾಗಳನ್ನು ಸಹ ಬಳಕೆ ಮಾಡಲಾಗಿದೆ, ಅಲ್ಲದೇ
ಬಾಟಲಿಗೆ ಪೆಟ್ರೋಲ್ ಕೊಡದಂತೆ ಬಂಕ್ ಮಾಲೀಕರಿಗೆ ನೋಟೀಸ್ ನೀಡಲಾಗಿದೆ ಎಂದು ಚಿಕ್ಕಮಗಳೂರು ಎಸ್ಪಿ ವಿಕ್ರಮ್ ಅಮಟೆ ತಿಳಿಸಿದ್ದಾರೆ. ಚಿಕ್ಕಮಗಳೂರು ತಾಲೂಕಿನ ವಿವಾದಿತ ದತ್ತಪೀಠದಲ್ಲಿ ನಡೆಯುವ ದತ್ತಮಾಲಾ ಕಾರ್ಯಕ್ರಮ ಸಂಪೂರ್ಣ ಕೇಸರಿ ಮತ್ತು ಖಾಕಿಮಯವಾಗಿದೆ. ಆದರೆ ಇಷ್ಟೊಂದು ಪೊಲೀಸರ ಅವಶ್ಯಕತೆ ಇತ್ತಾ ಎಂದು ಕೆಲವರು ಇಲಾಖೆಯ ವಿರುದ್ಧ ಮಾತನಾಡಿಕೊಳ್ಳುತ್ತಿದ್ದುದು ಕಂಡು ಬಂತು
Leave a comment