ಚಿಕ್ಕಮಗಳೂರು : ಗೊರುಚ ಅವರಿಗೆ ನೆನ್ನೆಯಿಂದ ರಾಜ್ಯದ ಎಲ್ಲಾ ಕಡೆಯಿಂದ ಶುಭಾಶಯಗಳು ಹರಿದು ಬರುತ್ತಿವೆ. ಅದರಲ್ಲೂ ತವರು ಜಿಲ್ಲೆ ಚಿಕ್ಕಮಗಳೂರಲ್ಲಿ ಅಭಿನಂದನೆ,ಶುಭಾಶಯ,ಪ್ರಶಂಸೆಯ ಮಹಾಪೂರ,
ಗೊಂಡೆದಹಳ್ಳಿ ರುದ್ರಪ್ಪ ಚನ್ನಬಸಪ್ಪ ಚಿರಪರಿಚಿತರಾಗಿರುವುದು ಗೊರುಚ ಎಂಬ ಹೃಸ್ವನಾಮದಿಂದ. ವ್ಯಕ್ತಿಗೆ ಒಂದು ಮುಖ,ವ್ಯಕ್ತಿತ್ವಕ್ಕೆ ನಾನಾ ಮುಖಗಳು ಅಂದು ೧0ನೇ ತರಗತಿ ಪಾಸು ಮಾಡಲಾಗದ ಒಬ್ಬ ವಿದ್ಯಾರ್ಥಿ ಇಂದು ಅಖಿಲ ಭಾರತ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವಕ್ಕೆ ಭಾಜನರಾಗಿರುವುದು ಮತ್ತು ಫಿ ಹೆಚ್ ಡಿ ಮಾಡುವ ಸಂಶೋಧನ ವಿದ್ಯಾರ್ಥಿಗಳಿಗೆ ವಿಷಯವಾಗಿರುವುದು ಅಚ್ಚರಿಯ ಸಂಗತಿ.
ಗೊರುಚ ಅವರದು ಹಳ್ಳಿಯ ಹುಟ್ಟು. ಹಳ್ಳಿಗಳು ಅನೇಕ ಸಿರಿತನಗಳಿಂದ ಶ್ರೀಮಂತಿಕೆಯಿಂದ ಕೂಡಿದ್ದರೂ ಕೂಡ, ಯುವಕ ಯುವತಿಯರು ತಮ್ಮ ಬಾಲ್ಯದ ಜೀವನದಲ್ಲಿ ಶೈಕ್ಷಣಿಕ ವಿಚಾರವಾಗಿ ಕೆಲವು ಸಂಗತಿಗಳಿಂದ ವಂಚಿತರಾಗಿ ಬೆಳೆಯಬೇಕಾಗುತ್ತದೆ. ಇದಕ್ಕೆ ಗೊರುಚ ಅವರು ಹೊರತಲ್ಲ,
ಈ ಕಾರಣ ಗೊರುಚ ಅವರು ಯಾವುದೇ ವಿಶ್ವವಿದ್ಯಾಲದ ಒಳಗೆ ಹೋಗಿ ಕಲಿಯಲಾಗಲಿಲ್ಲ. ಆದರೆ ಔಪಚಾರಿಕವಾಗಿ ವಿಶ್ವವಿದ್ಯಾಲಯಗಳು ಕಲಿಸುವುದಕ್ಕಿಂತ ನೂರುಪಟ್ಟು ಹೆಚ್ಚಾಗಿ ಸಮಾಜವನ್ನು ನೋಡುತ್ತಾ, ಸಮಾಜದ ಮಾತುಗಳಿಗೆ ಕಿವಿಯಾಗುತ್ತಾ, ಸಾವಿರ ಸಾವಿರ ಸಂಖ್ಯೆಯ ಜನಮನವನ್ನು ಓದುತ್ತಾ ಅನುಭವದ ಶ್ರೀಮಂತಿಕೆಯ ಪದವಿ ಪಡೆದು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ, ಸಂಘಟನಾತ್ಮಕವಾಗಿ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು.
ಸಾಹಿತ್ಯ ಮತ್ತು ಸಾಂಸ್ಕೃತಿಕ ಕೆಲಸಕ್ಕಾಗಿ ಅನೇಕ ಪ್ರಶಸ್ತಿಗಳಿಗೂ ಮಾನ್ಯರಾಗಿ, ನಾಡೋಜ ಗೌರವಕ್ಕೂ ಪಾತ್ರರಾಗಿರುವ ಗೊರುಚ ತಮ್ಮ ಜೀವತಾವಧಿಯಲ್ಲಿ ಎದುರುಗೊಂಡ ಮುಖ್ಯ ಮೇರು ಸಂಗತಿಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಜವಾಬ್ದಾರಿ ಹೊತ್ತಿರುವುದು ಒಂದಾಗಿದೆ. ಈಗ ಬಹು ಮುಖ್ಯವಾಗಿ ಮಾತನಾಡಲೇಬೇಕಾದಂತಹ ಜವಾಬ್ದಾರಿ ಮತ್ತು ಕರ್ತವ್ಯ ತಮ್ಮದಾಗಿದೆ.
ಸಮಾಜಿಕ ಬದುಕಿನ ಸ್ವರೂಪದ ಕಡೆಗೆ ಕನ್ನಡಿಗರ ಮೊಗವನ್ನು ಭ್ರಾತೃತ್ವ, ಸಹಿಷ್ಣುತೆ, ಬಹುತ್ವ ಮತ್ತು ಬಹುರೂಪಿ ಕಡೆ ತಿರುಗಿಸುವ ಹಾಗೆ,ಕನ್ನಡ ಸಾಹಿತ್ಯ ಪರಿಷತ್ತಿನ ನಿಜವಾದ ಧ್ಯೇಯೋದ್ದೇಶಗಳನ್ನು ಮತ್ತೊಮ್ಮೆ ಪುನರ್ ಮನನ ಮಾಡುತ್ತಾ, ಕನ್ನಡ ಸಾಹಿತ್ಯ ಪರಿಷತ್ತಿಗೆ ಕೆಲವು ಸಂಗತಿಗಳಲ್ಲಿ ಹೇಳಲೇಬೇಕಾದ ಕಿವಿ ಮಾತನ್ನು ಹೇಳುವುದರೊಟ್ಟಿಗೆ ಸರ್ವಾಧ್ಯಕ್ಷತೆ ನುಡಿಗಳು ಕರುನಾಡ ತುಂಬೆಲ್ಲ ಸಂಚರಿಸಲಿ, ಆ ಸಂಚಾರದ ಮೂಲಕ ನಿಮ್ಮ ಮಾತುಗಳು ಮುಂದಿನ ದಿನಗಳಲ್ಲಿ ಫಸಲು ತೆಗೆದು ಮಗದಷ್ಟು ಸಮೃದ್ಧವಾಗಿ ಸಾಹಿತ್ಯ ಪರಿಷತ್ತು ಈ ನೆಲದ ಕಟ್ಟೆ ಕಡೆಯ ಜನರಿಗೂ ತಲುಪಲಿ ಎಂಬ ಅಭಿಲಾಷೆ ಮತ್ತು ನಿರೀಕ್ಷೆ ನಮ್ಮದು….
ವರದಿ
ಡಿ.ಎಂ.ಮಂಜುನಾಥ್
Leave a comment