ಚಿಕ್ಕಮಗಳೂರು: ಮಾಜಿ ಶಾಸಕ ಸಿ.ಟಿ. ರವಿಯವರು ಕೆಟ್ಟ ಪದ ಬಳಕೆ ಮಾಡುವುದನ್ನು ಬಿಡಲಿ ಎಂದು ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ. ಮಂಜೇಗೌಡ ಸಲಹೆ ನೀಡಿದ್ದಾರೆ.
ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರು ನಗರದ ಆದಿಶಕ್ತಿ ನಗರದ ರಸ್ತೆಯ ವಿಚಾರವಾಗಿ ಕಾಂಗ್ರೆಸ್ ನಾಯಕರ ಮೇಲೆ ನಡೆದ ಗೂಂಡಾಗಿರಿ ಘಟನೆ ಅತ್ಯಂತ ಖಂಡನೀಯ. ನಾಲ್ಕು ಬಾರಿ ಕ್ಷೇತ್ರದ ಶಾಸಕರಾಗಿ ಸಚಿವರಾಗಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ನಿಮಗೆ ಇಂತಹ ದುರ್ಬುದ್ದಿ ಬರಬಾರದಿತ್ತು ಎಂದು ಹೇಳಿದರು.
ಸಮಾಜದಲ್ಲಿ ಶಾಂತಿ ಕಾಪಾಡಬೇಕಾದ ಜವಾಬ್ದಾರಿ ಸ್ಥಾನದಲ್ಲಿ ಇರುವವರೇ ಸಮಾಜದ ಸ್ವಾಸ್ಥ್ಯ ಹಾಳು ಮಾಡಿದರೆ ಬೇಲಿಯೇ ಎದ್ದು ಹೊಲ ಮೆಯ್ದಂತೆ ಆಗುತ್ತದೆ. ಕೆಟ್ಟ ಕೆಟ್ಟ ಪದ ಬಳಕೆ ಮಾಡಿ ಬಾಯಿಗೆ ಬಂದಂತೆ ಮಾತನಾಡಿರುವುದನ್ನು ಗಮನಿಸಿದರೆ ಸೋಲಿನಿಂದ ಹತಾಶಾರಾಗಿ ಮಾನಸಿಕ ಆರೋಗ್ಯ ಏರುಪೇರಾಗಿರಬಹುದೆಂಬ ಅನುಮಾನ ಮೂಡುತ್ತಿದೆ ಎಂದು ಆರೋಪಿಸಿದರು.
ನಮ್ಮ ಶಾಸಕರ ಬಗ್ಗೆ ಮಾತನಾಡುವ ಮೊದಲು ತಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ನೋಡಿಕೊಳ್ಳಲಿ. ೨೦೦೮ ರಲಿ ಬೆಳವಾಡಿ ಕೆರೆಯ ಸಮೀಪದಲ್ಲಿ ನಗರದ ಎಂ.ಜಿ. ರಸ್ತೆಯ ಜ್ಯುವೆಲ್ಲರಿ ಶಾಪ್ ಓನರ್ ತೋಟದ ಮನೆಯಲ್ಲಿ ನಕಲಿ ಮದ್ಯ ತಯಾರಿಸಲು ಹೋಗಿ ಸಿಕ್ಕಿಬಿದ್ದಿದ್ದವರು ಯಾರು ? ಆ ಕೇಸ್ ನಲ್ಲಿ ಎ೧ ಯಾರು ಆಗಿದ್ದರು ತಮ್ಮ ಭಾಮೈದನ ಪಾತ್ರ ಏನು ಎಂಬುದನ್ನು ಕ್ಷೇತ್ರದ ಜನತೆ ಮರೆತಿಲ್ಲ ಎಂದರು
೨೦೦೪ರಲ್ಲಿ ತಾವು ಶಾಸಕರಾದಾಗ ನಿಮ್ಮ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಹಾಗೂ ಈಗ ಹೇಗಿದೆ ಎಂಬುದನ್ನು ಅವಲೋಕನ ಮಾಡಿಕೊಳ್ಳಿ. ಕಳೆದ ಮೂರು ವರ್ಷಗಳಿಂದ ಚಿಕ್ಕಮಗಳೂರು ಶಾಂತವಾಗಿದ್ದು, ಜನರ ನೆಮ್ಮದಿಯನ್ನು ಕೆಡಿಸಬೇಡಿ ಎಂದು ಸಲಹೆ ನೀಡಿದ ಮಂಜೇಗೌಡ ಅವರು, ನಿಮಗೆ ಕಾಮಗಾರಿಯ ಬಗ್ಗೆ ಕಾಳಜಿ ಇದ್ದಿದ್ದರೆ ಅಧಿಕಾರಿಗಳೊಂದಿಗೆ ಸೂಕ್ತ ಸಭೆಯಲ್ಲಿ ಚರ್ಚಿಸಿ ಸಲಹೆ ನೀಡಬಹುದಿತ್ತು. ಬದಲಿಗೆ ಗೂಂಡಾಗಳಂತೆ ವರ್ತನೆ ಮಾಡುವವರನ್ನು ಉದ್ದೇಶ ಪೂರ್ವಕವಾಗಿ ಕರೆದುಕೊಂಡು ಹೋಗುತ್ತಿರಲಿಲ್ಲ.
ಈ ಕಾಮಗಾರಿಯನ್ನು ೨೦೨೬ ರ ಮಾರ್ಚ್ ೩೧ ರೊಳಗೆ ಪೂರ್ಣಗೊಳಿಸುತ್ತೇನೆ ಎಂದು ಗುತ್ತಿಗೆದಾರರು ಪಿ. ಡಬ್ಲೂ.ಡಿ. ಕಛೇರಿಗೆ ಬರೆದು ಕೊಟ್ಟಿದ್ದು ಕಾಮಗಾರಿ ಪೂರ್ಣಗೊಳ್ಳ ದಿದ್ದರಿಂದ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸುತ್ತಾರೆ ಎಂಬ ಭಯದಿಂದ ಅವರ ರಕ್ಷಣೆಗಾಗಿ ಕಾಮಗಾರಿ ವೀಕ್ಷಣೆ ನೆಪದಲ್ಲಿ ಹೋಗಿದ್ದೀರಿ. ಸಂಬಂಧ ಎಂಬುದನ್ನು ಗುತ್ತಿಗೆದಾರರಿಗೂ ಮತ್ತು ಸಾರ್ವಜನಿಕವಾಗಿ ಸ್ಪಷ್ಟ ಪಡಿಸಿ ಎಂದು ಆಗ್ರಹಿಸಿದರು.
ಕಳೆದ ಇಪ್ಪತ್ತು ವರ್ಷ ಶಾಸಕರಾಗಿ ಸಚಿವನಾಗಿ ದೇಶದ ತುಂಬಾ ಕೆಲಸ ಮಾಡಿದ್ದೀನಿ ಎಂದು ಹೇಳುವ ನೀವು ಒಬ್ಬ ಚುನಾಯಿತ ನಗರಸಭಾ ಸದಸ್ಯನ ಮೇಲೆ ಕೈ ಮಾಡಲು ಮುಂದಾಗುತ್ತೀರ ಎಂದಾದರೆ ನಿಮಗೆ ಯಾವ ಜ್ಞಾನ ಇದೆ ? ಜನ ನಿಮ್ಮನ್ನು ತಿರಸ್ಕರಿಸಿರುವುದು ಸರಿಯಾಗಿಯೇ ಇದೆ. ಚಿಕ್ಕಮಗಳೂರು ಕ್ಷೇತ್ರ ವ್ಯಾಪ್ತಿಯ ಎಲ್ಲಾ ದಿಕ್ಕೂಗಳಲ್ಲೂ ನಿಮ್ಮ ಹಿಂಬಾಲಕರ ಹೆಸರಿನ ಬೇನಾಮಿ ಬಾರ್ ಗಳೇ ತುಂಬಿ ತುಳುಕುತ್ತಿವೆ ಎಂದರು.
ನೀವು ಯಡಿಯೂರಪ್ಪ ಹಾಗೂ ಆರ್. ಅಶೋಕ್ ಅವರ ಹಿಂದೆ ಹೋಗಿ ನಿಲ್ಲುತ್ತೀರಲ್ಲ ಅವರಿಗೆ ಬಕೆಟ್ ಹಿಡಿಯಲು ಹೋಗಿದ್ರಾ, ಇಷ್ಟು ವರ್ಷ ಜೊತೆಗೆ ಇದ್ದ ತಮ್ಮಯ್ಯನವರಿಗೆ ಬಕೆಟ್ ಹಿಡಿದಿದ್ರು ಎಂದು ಹೇಳುವ ನೀವು, ನಾಳೆಯೂ ನಿಮ್ಮ ಜೊತೆಗೆ ಇರುವ ಕಾರ್ಯ ಕರ್ತರಿಗೂ ಇದೇ ಮಾತು ಹೇಳುತ್ತಿರಾ, ತಮ್ಮಯ್ಯನವರು ನಿಮ್ಮ ಜೊತೆಗೆ ಇದ್ದಿದ್ದಕ್ಕೆ ನೀವು ಇಷ್ಟು ವರ್ಷ ಅವರ ಸಮುದಾಯದ ಮತ ಪಡೆದು ಗೆಲುವು ಪಡೆಯುತ್ತಿದ್ದಿರಿ ಎಂಬುದನ್ನು ಮರೆಯಬೇಡಿ ಎಂದು ಹೇಳಿದರು.
ಹಲವು ವರ್ಷಗಳ ರಾಜಕೀಯ ಅನುಭವ ಇರುವ ತಾವುಗಳು ಮುತ್ಸದ್ದಿ ರಾಜಕಾರಣಿಯಂತೆ ಇರಬೇಕಾದವರು ಪುಡಾರಿಗಳಂತೆ ವರ್ತನೆ ಮಾಡುತ್ತಿರುವುದು ಜಿಲ್ಲೆಯ ದೌರ್ಭಾಗ್ಯ. ಕಳೆದ ಇಪ್ಪತ್ತು ವರ್ಷಗಳಲ್ಲಿ ಊರು ಬಿಟ್ಟು ಹೋಗಿದ್ದ ಅನೇಕ ಗುತ್ತಿಗೆದಾರರು ವಾಪಾಸ್ ಬಂದು ಕೆಲಸ ಮಾಡುತ್ತಿದ್ದಾರೆ. ಸಣ್ಣಪುಟ್ಟ ಮರದ ವ್ಯಾಪಾರಿಗಳಿಗೆ ಬೆದರಿಸಿ ರಷೀಲ್ ಕಂಪನಿಗೆ ಸೌದೆ ಮರಗಳನ್ನು ಪೂರೈಸಿದಷ್ಟು ಸುಲಭ ಅಲ್ಲ ನಮ್ಮ ಕಾಂಗ್ರೆಸ್ ಕಾರ್ಯಕರ್ತರನ್ನು ಬೆದರಿಸುವುದು, ಎಂಬುದನ್ನು ಮನದಟ್ಟು ಮಾಡಿಕೊಳ್ಳಿ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡರಾದ ಪ್ರವೀಣ್ ಬೆಟಗೆರೆ, ಶಿವಕುಮಾರ್, ಪರಮೇಶ್ ರಾಜ್ ಅರಸ್, ತನೋಜ್ ನಾಯ್ಡು, ಪ್ರಕಾಶ್ ರೈ ಉಪಸ್ಥಿತರಿದ್ದರು.
C.T. Ravi should stop using bad words.
Leave a comment