ಚಿಕ್ಕಮಗಳೂರು: ಭಾರತದ ನಾಗರಿಕ ನೋಂದಣಿ ನಿಯಮದ ಪ್ರಕಾರ ಜನನ-ಮರಣ ನೋಂದಣಿಯನ್ನು ಪ್ರತಿಯೊಬ್ಬರೂ ತಪ್ಪದೇ ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಕೇಸ್ವಾನ್ ಸಭಾಂಗಣದಲ್ಲಿ ಇಂದು ನಡೆದ ಜನನ-ಮರಣ ನೋಂದಣಿಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿಯಾಗಿ ಇರುವ ಒಟ್ಟು ೧೨೩೧ ಕೇಂದ್ರಗಳಲ್ಲಿ ಜನನ-ಮರಣ ನೋಂದಣಿ ಮಾಡಿಕೊಳ್ಳಲಾಗುತ್ತಿದ್ದು, ಸರ್ಕಾರಿ ಆಸ್ಪತ್ರೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಈ ನೋಂದಣಿ ಮಾಡಬಹುದಾಗಿದ್ದು, ಸಾರ್ವಜನಿಕರು ಜನನ, ಮರಣ ಸಂಭವಿಸಿದ ೨೧ ದಿನಗಳ ಒಳಗಾಗಿ ಸಮೀಪದ ಕೇಂದ್ರದಲ್ಲಿ ನೋಂದಾಯಿಸುವುದು ಕಡ್ಡಾಯ ಎಂದು ಹೇಳಿದರು.
೨೧ ದಿನಗಳ ನಂತರ ೩೦ ದಿನಗಳ ಒಳಗೆ ನೋಂದಾಯಿಸಲು ಕೂಡ ಅವಕಾಶವಿದ್ದು, ನಾಗರಿಕರು ತಪ್ಪದೇ ನೋಂದಣಿ ಮಾಡಿಸಬೇಕು ಎಂದ ಅವರು, ಜಿಲ್ಲೆಯ ಪ್ರಸ್ತುತ ನೋಂದಣಿ ಘಟಕದಲ್ಲಿ ನೋಂದಣಿ ಮಾಡುವ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಪ್ರತೀ ವರ್ಷ ತರಬೇತಿ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸರ್ಕಾರದಿಂದ ಆಗಾಗ ಹೊರಡಿಸಲಾಗುತ್ತಿರುವ ಸುತ್ತೋಲೆಗಳ ಅನ್ವಯ ಜನನ-ಮರಣ ನೋಂದಣಿ ಮಾಡುವ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ ಎಂದರು ಹೇಳಿದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಯೂ ಆಗಿರುವ ಅಪರ ಜಿಲ್ಲಾ ಜನನ, ಮರಣ ನೋಂದಣಾಧಿಕಾರಿ ಶಿವಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಜಿಲ್ಲೆಯ ಎಲ್ಲಾ ತಾಲ್ಲೂಕು ತಹಸೀಲ್ದಾರರು ವೀಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು.
Birth and death registration is mandatory in the district.
Leave a comment