ಚಿಕ್ಕಮಗಳೂರು:ನಗರದ ನಾಗರೀಕರಲ್ಲಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸುವುದು ಸ್ವಚ್ಚ ಭಾರತ್ ಮಿಷನ್ ಉದ್ದೇಶವಾಗಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು.
ಅವರು ಇಂದು ಆಜಾದ್ ಪಾರ್ಕಿನ ಬಳಿ ನಗರಸಭೆ, ಸ್ವಚ್ಚ ಭಾರತ್ ಮಿಷನ್‌ನ ೨.೦ ಯೋಜನೆಯಡಿಯಲ್ಲಿ ಸಾರ್ವಜನಿಕರಿಗೆ ಸ್ವಚ್ಚತೆ ಬಗ್ಗೆ ಗೋಡೆಬರಹ ಮತ್ತು ಬೀದಿ ನಾಟಕದ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸಲು ಕೇಂದ್ರ ಮತ್ತು ರಾಜ್ಯಸರ್ಕಾರ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿದೆ ಎಂದು ಶ್ಲಾಘಿಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ನಗರಸಭೆಯಿಂದ ಕೈಗೊಂಡ ಫುಟ್‌ಪಾತ್ ಮೇಲಿನ ವಸ್ತುಗಳ ತೆರವು ಮತ್ತು ಸಂತೆಯಲ್ಲಿ ಸ್ವಚ್ಚತೆಯನ್ನು ಮೂಡಿಸಿದ ಪರಿಣಾಮ ವರ್ತಕರು ಸಹಕರಿಸಿದ್ದಾರೆ. ನಗರದ ಹೊರವಲಯದ ವಾರ್ಡ್‌ಗಳಲ್ಲಿ ಸ್ವಚ್ಚತೆಯಲ್ಲಿ ಹಿಂದಿ ಬಿದ್ದಿದ್ದು, ಈ ಬಗ್ಗೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಸ ಸಂಗ್ರಹಕ್ಕೆ ಗುರ್ತಿಸಲಾದ ಸ್ಥಳಗಳಲ್ಲಿ ಸಾರ್ವಜನಿಕರು ಕಸವನ್ನು ಹಾಕದೆ ಎಲ್ಲೆಂದರಲ್ಲಿ ಹಾಕಲಾಗುತ್ತಿದೆ. ಪ್ರತಿದಿನ ಗಂಟೆಗಾಡಿ ಕಸ ಸಂಗ್ರಹ ಮಾಡುತ್ತಿಲ್ಲ ಎಂಬ ದೂರು ನಾಗರೀಕರಿಂದ ಬರುತ್ತಿದ್ದು, ಈ ಬಗ್ಗೆ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಗಮನಹರಿಸಬೇಕೆಂದು ಹೇಳಿದರು.
ಬೀದಿನಾಯಿಗಳ ಉಪಟಳ ಮತ್ತು ಬಿಡಾಡಿ ದನಗಳಿಂದ ಆಗುತ್ತಿರುವ ತೊಂದರೆಯ ಬಗ್ಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಈಗಾಗಲೇ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಜೊತೆಗೆ ವಿದ್ಯಾರ್ಥಿಗಳಲ್ಲಿ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದರು.
ಸಧ್ಯದಲ್ಲೇ ಪರಿಸರ ಉಳಿಸಲು ನಗರದ ಪ್ರತೀ ವಾರ್ಡ್‌ನಲ್ಲಿ ಜಾಥಾ ನಡೆಸುವ ಮೂಲಕ ಅರಿವು ಮೂಡಿಸಲು ದಿನಾಂಕ ನಿಗದಿಮಾಡುವಂತೆ ಪೌರಾಯುಕ್ತರಿಗೆ ಸೂಚನೆ ನೀಡಿದರು.
ನಗರಸಭಾಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ, ಕಳೆದ ನಾಲ್ಕು ವಾರಗಳಿಂದ ಸ್ವಚ್ಚತೆಗೆ ಆದ್ಯತೆ ನೀಡುವಂತೆ ವರ್ತಕರು ಮತ್ತು ನಾಗರೀಕರಲ್ಲಿ ನಗರಸಭೆಯಿಂದ ಅರಿವು ಮೂಡಿಸಲಾಗಿದ್ದು, ಇದರಿಂದ ಸುಂದರ ನಗರವನ್ನಾಗಿಸಲು ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಪೌರಾಯುಕ್ತ ಬಿ.ಸಿ. ಬಸವರಾಜ್ ಮಾತನಾಡಿ, ಗೋಡೆ ಬರಹ ಮತ್ತು ಬೀದಿ ನಾಟಕಗಳ ಮೂಲಕ ಸಾರ್ವಜನಿಕರಲ್ಲಿ ಸ್ವಚ್ಚತೆ ಕುರಿತು ಅರಿವು ಮೂಡಿಸಲು ೨೦ ನಾಟಕ ತಂಡಗಳನ್ನು ಆಯ್ಕೆಮಾಡಲಾಗಿದೆ ಎಂದರು.
೨೬೦೦ ಅಡಿಗಳಷ್ಟು ಗೋಡೆಬರಹದ ಮೂಲಕ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ನಗರಸಭೆ ಸದಸ್ಯರು ಸ್ವಚ್ಚತೆಗೆ ಆದ್ಯತೆ ನೀಡಿ ಜಾಗೃತಿ ಮೂಡಿಸಲು ತಿರುಪತಿಗೆ ತೆರಳಲು ಸಧ್ಯದಲ್ಲೇ ದಿನಾಂಕ ನಿಗದಿಮಾಡಲಾಗುವುದೆಂದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಅನುಮಧುಕರ್, ಸದಸ್ಯರಾದ ಎ.ಸಿ. ಕುಮಾರ್‌ಗೌಡ, ಪರಮೇಶ್ ರಾಜ್ ಅರಸ್, ರೂಪಾ ಕುಮಾರ್, ಗೋಪಿ, ಗುರುಮಲ್ಲಪ್ಪ, ಕೀರ್ತಿ ಮತ್ತಿತರರು ಉಪಸ್ಥಿತರಿದ್ದರು.
Awareness among the public about cleanliness through wall writing and street drama
Leave a comment