ಚಿಕ್ಕಮಗಳೂರು: ರಸಗೊಬ್ಬರ ಮಾರಾಟಗಾರರು ರಸಗೊಬ್ಬರವನ್ನು ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತಹ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ೨೦೨೬-೨೭ನೇ ಸಾಲಿನ ಮುಂಗಾರು ಹಂಗಾಮಿಗೆ ರಸಗೊಬ್ಬರಗಳ ಸಮರ್ಪಕ ನಿರ್ವಹಣೆ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ರಸಗೊಬ್ಬರ ಚೀಲದ ಮೇಲಿನ ಮುದ್ರಿತ ಎಂ.ಆರ್.ಪಿ. ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತಹ ರಸಗೊಬ್ಬರ ಮಾರಾಟಗಾರರ ಪರವಾನಿಗೆ ರದ್ದುಗೊಳಿಸಲಾಗುವುದು. ಮಾರಾಟ ಮಾಡಿದ ರಸಗೊಬ್ಬರಗಳಿಗೆ ಕಡ್ಡಾಯವಾಗಿ ಬಿಲ್ ನೀಡಬೇಕು.
ರೈತರು ಕೂಡ ತಾವು ಕೊಂಡುಕೊಳ್ಳುವ ರಸಗೊಬ್ಬರಕ್ಕೆ ಬಿಲ್ ಕೇಳಿ ಪಡೆಯಬೇಕು ಎಂದ ಅವರು, ರೈತರು ರಸಗೊಬ್ಬರ ಖರೀದಿಸುವಾಗ ರಸಗೊಬ್ಬರ ಚೀಲದ ಮೇಲೆ ಮುದ್ರಿತ ದರ ಗಮನಿಸಿ ಖರೀದಿಸಬೇಕು. ಮುದ್ರಿತ ಧಾರಣೆಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದು ಕಂಡು ಬಂದಲ್ಲಿ ರೈತರು ಹತ್ತಿರದ ಕೃಷಿ ಇಲಾಖೆಯ ಕಚೇರಿಯನ್ನು ಸಂಪರ್ಕಿಸಿ ದೂರು ನೀಡಬಹುದು ಎಂದರು.
ರಸಗೊಬ್ಬರ ಮಾರಾಟಗಾರರು ರೈತರಿಗೆ ಆಗಿಂದಾಗ್ಗೆ ಮಾಹಿತಿ ನೀಡಬೇಕಲ್ಲದೆ, ಸೂಚನಾ ಫಲಕದಲ್ಲಿ ರಸಗೊಬ್ಬರದ ದಾಸ್ತಾನು ಹಾಗೂ ದರಪಟ್ಟಿ ಪ್ರಕಟಿಸಬೇಕು. ಬೇಡಿಕೆ ಇರುವ ರಸಗೊಬ್ಬರವನ್ನು ಹೆಚ್ಚು ದಾಸ್ತಾನು ಮಾಡಿಕೊಳ್ಳುವಂತೆ ಸೂಚಿಸಿದ ಅವರು, ಮಲೆನಾಡು ಹಾಗೂ ಬಯಲುಸೀಮೆ ಪ್ರದೇಶಗಳಿಗೆ ಬೇಡಿಕೆಗೆ ತಕ್ಕಂತೆ ರಸಗೊಬ್ಬರ ಪೂರೈಸುವಂತೆ ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕ ಎಂ.ತಿರುಮಲೇಶ್ ಸಭೆಗೆ ಮಾಹಿತಿ ನೀಡಿ, ಜಿಲ್ಲೆಯಲ್ಲಿ ೧,೩೪,೦೪೬ ಅತೀ ಸಣ್ಣ ರೈತರು, ೫೫,೮೬೭ ಸಣ್ಣ ರೈತರು, ೨೭,೪೩೯ ಅರೆ ಮಧ್ಯಮ ರೈತರು, ೯೫೦೪ ಮಧ್ಯಮ ಹಾಗೂ ೧೮೦೪ ದೊಡ್ಡ ಹಿಡುವಳಿದಾರರಿದ್ದಾರೆ. ೩,೧೧,೮೩೨ ಹೆಕ್ಟೇರ್ ಕೃಷಿ ಭೂಮಿ ಇದೆ. ೧,೯೯,೬೪೬ ಸಾಮಾನ್ಯ, ೨೩,೮೬೪ ಪರಿಶಿಷ್ಟ ಜಾತಿ ಹಾಗೂ ೩೭೬೩ ಪರಿಶಿಷ್ಟ ಪಂಗಡದ ಹಿಡುವಳಿದಾರರಿದ್ದಾರೆ.
ಜಿಲ್ಲೆಯಲ್ಲಿ ರಾಜ್ಯಮಟ್ಟದ ೧೪ ಸಗಟು ಪರವಾನಗಿದಾರರು ಜಿಲ್ಲಾ ಮಟ್ಟದ ೬೯ ಸಗಟು ಪರವಾನಗಿದಾರರು, ೪೮೮ ಚಿಲ್ಲರೆ ರಸಗೊಬ್ಬರ ಮಾರಾಟಗಾರರು ಸೇರಿದಂತೆ ಒಟ್ಟು ೫೭೧ ಮಾರಾಟಗಾರರಿದ್ದಾರೆ. ೧೦ ಮಾರ್ಚ್ ೨೦೨೬ರವರೆಗೆ ೪೪೭ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದ್ದು, ರಸಗೊಬ್ಬರಕ್ಕೆ ಸಮಸ್ಯೆ ಇಲ್ಲ ಎಂದು ತಿಳಿಸಿದರು.
ಸಭೆಯಲ್ಲಿ ಕೃಷಿ ಜಾಗೃತ ದಳದ ಉಪನಿರ್ದೇಶಕ ವೆಂಕಟೇಶ್ ಚವ್ಹಾಣ್, ರಸಗೊಬ್ಬರ ಸರಬರಾಜು ಸಂಸ್ಥೆಗಳ ಮಾರಾಟ ಪ್ರತಿನಿಧಿಗಳು, ವಿವಿಧ ರೈತಸಂಘಗಳ ಮುಖಂಡರು ಹಾಗೂ ಕೃಷಿಕ ಸಮಾಜದ ಪ್ರತಿನಿಧಿಗಳು ಹಾಜರಿದ್ದರು.
Action to be taken if fertilizer is sold at high prices
Leave a comment