ಚಿಕ್ಕಮಗಳೂರು: ರಾಷ್ಟ್ರೀಯ ಹೆದ್ದಾರಿ 169ರ ತನಿಕೋಡ್ನಿಂದ ಎಸ್.ಕೆ. ಬಾರ್ಡ್ರವರೆಗಿನ ರಸ್ತೆ ಮಾರ್ಗದಲ್ಲಿ ಭಾರಿ ವಾಹನಗಳ ಸಂಚಾರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೆಪ್ಟೆಂಬರ್ 30, 2026ರವರೆಗೆ ಸಂಪೂರ್ಣವಾಗಿ ನಿಷೇಧಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಭಂವರ್ ಸಿಂಗ್ ಮೀನಾ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.
ಈ ನಿರ್ದಿಷ್ಟ ಹೆದ್ದಾರಿ ವಲಯದಲ್ಲಿರುವ ನಾಲ್ಕು ಕಿರು ಸೇತುವೆಗಳು ತೀರಾ ಶಿಥಿಲಾವಸ್ಥೆ ತಲುಪಿದ್ದು, ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ 12 ಟನ್ಗಿಂತ ಅಧಿಕ ಭಾರದ ಸರಕು ಸಾಗಾಣಿಕೆ ವಾಹನಗಳಾದ ಟಿಪ್ಪರ್, ಲಾರಿ ಹಾಗೂ ಕಟ್ಟಡ ನಿರ್ಮಾಣ ಸಾಮಗ್ರಿ ಹೊತ್ತ ವಾಹನಗಳ ಓಡಾಟವನ್ನು ನಿರ್ಬಂಧಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಉಪವಿಭಾಗದ ಅಧಿಕಾರಿಗಳು ನಡೆಸಿದ ಪರಿಶೀಲನೆಯಲ್ಲಿ, 1950ರಿಂದ 1960ರ ಅವಧಿಯಲ್ಲಿ ನಿರ್ಮಿಸಲಾದ ಕಿರು ಸೇತುವೆಗಳ ಕಲ್ಲುಗಳು ಕಿತ್ತುಬಂದಿರುವುದು,
ಕಂಬಗಳು ಭಾಗಶಃ ಹಾನಿಗೊಳಗಾಗಿರುವುದು ಮತ್ತು ಸ್ಲಾಬ್ನ ಕಾಂಕ್ರೀಟ್ ಬಿದ್ದು ಸರಳುಗಳು ಹೊರ ಭಾಗಕ್ಕೆ ಕಾಣಿಸುತ್ತಿರುವುದು ಪತ್ತೆಯಾಗಿದೆ. ಪ್ರಸ್ತುತ ಮಳೆಗಾಲ ಆರಂಭವಾಗುತ್ತಿರುವುದರಿಂದ ಹಳ್ಳಗಳಲ್ಲಿ ನೀರಿನ ಹರಿವು ಹೆಚ್ಚಾಗಿ ಸೇತುವೆಗಳು ಮತ್ತಷ್ಟು ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದೆ. ಜೊತೆಗೆ, ಈ ರಸ್ತೆಯು ಬಹುತೇಕ ಏಕಪಥ ರಸ್ತೆಯಾಗಿದ್ದು, ತೀವ್ರ ತಿರುವುಗಳು ಹಾಗೂ ಕಡಿದಾದ ಏರಿಗಳಿಂದ ಕೂಡಿದೆ. ಮಳೆಯಿಂದಾಗಿ ರಸ್ತೆಯ ಇಕ್ಕೆಲಗಳ ಮಣ್ಣು ಕೊಚ್ಚಿಹೋಗಿ ಭಾರಿ ವಾಹನಗಳ ಚಕ್ರಗಳು ಹೂತುಹೋಗುವ ಮತ್ತು ಅಪಘಾತಗಳು ಸಂಭವಿಸುವ ಗಂಭೀರ ಆತಂಕ ಎದುರಾಗಿರುವುದರಿಂದ ನಿರ್ಧಾರ ಕೈಗೊಳ್ಳಲಾಗಿದೆ.
ಚಿಕ್ಕಮಗಳೂರು ಮತ್ತು ನರಸಿಂಹರಾಜಪುರ ಕಡೆಯಿಂದ ಸಂಚರಿಸುವ ಭಾರಿ ವಾಹನಗಳು ಇನ್ನು ಮುಂದೆ ಬಾಳೆಹೊನ್ನೂರು, ಮಾಗುಂಡಿ, ಕಳಸ ಹಾಗೂ ಕುದುರೆಮುಖ ಮಾರ್ಗವಾಗಿ ಎಸ್.ಕೆ. ಬಾರ್ಡರ್ ತಲುಪಬೇಕಾಗುತ್ತದೆ. ಇನ್ನು ಕೊಪ್ಪ ಕಡೆಯಿಂದ ಬರುವ ಭಾರಿ ವಾಹನಗಳು ಕೊಪ್ಪ, ಜಯಪುರ, ಬಾಳೆಹೊನ್ನೂರು, ಮಾಗುಂಡಿ, ಕಳಸ ಮತ್ತು ಕುದುರೆಮುಖ ರಸ್ತೆಯ ಮೂಲಕ ಎಸ್.ಕೆ. ಬಾರ್ಡರ್ ಕಡೆಗೆ ಸಾಗಲು ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ವಾಹನ ಸವಾರರು ಮತ್ತು ಸಾರ್ವಜನಿಕರು ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತದೊಂದಿಗೆ ಸಹಕರಿಸಿ ಈ ಬದಲಿ ಮಾರ್ಗಗಳನ್ನು ಬಳಸಬೇಕಾಗಿ ವಿನಂತಿಸಲಾಗಿದೆ.
Heavy vehicle traffic banned from Thanikode to SK border
Leave a comment