ಚಿಕ್ಕಮಗಳೂರು: ಕಾಡಾನೆಗಳ ಹಾವಳಿಯಿಂದ ತೋಟ ಹಾಗೂ ಬದುಕು ಕಳೆದುಕೊಂಡ ರೈತನೊಬ್ಬ ಪ್ರತಿಭಟನೆ ನಡೆಯುತ್ತಿದ್ದ ಸ್ಥಳದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೂಡಿಗೆರೆ ತಾಲ್ಲೂಕಿನ ಮಾಕೋನಹಳ್ಳಿಯಲ್ಲಿ ನಡೆದಿದೆ.
ಆನೆ ಹಾವಳಿಯಿಂದ ಕಂಗೆಟ್ಟಿರುವ ಮಲೆನಾಡಿಗರು ಮೂಡಿಗೆರೆ–ಬೇಲೂರು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಎರಡು ಎಕರೆ ಕಾಫಿ ತೋಟವನ್ನು ಕಾಡಾನೆಗಳ ಹಾವಳಿಯಿಂದ ಕಳೆದುಕೊಂಡಿರುವ ರೈತ ಪ್ರಹ್ಲಾದ್ ಎಂಬುವರು ಪ್ರತಿಭಟನಾ ಸ್ಥಳದಲ್ಲೇ ಮಹಡಿ ಹತ್ತಿ ವಿಷ ಸೇವಿಸಲು ಯತ್ನಿಸಿದ್ದಾರೆ.
ಕಾಡಾನೆಗಳ ಹಾವಳಿಯಿಂದ ತೀವ್ರವಾಗಿ ನೊಂದಿದ್ದ ಪ್ರಹ್ಲಾದ್, ನಿನ್ನೆ ಆನೆ ತನ್ನನ್ನೂ ತುಳಿದು ಸಾಯಿಸಲಿ ಎಂದು ತೋಟದ ಮಧ್ಯೆಯೇ ಕುಳಿತಿದ್ದರು ಎನ್ನಲಾಗಿದೆ. ಇದೀಗ ಇಂದು ಪ್ರತಿಭಟನೆ ನಡೆಯುತ್ತಿದ್ದ ಸ್ಥಳದಲ್ಲೇ ವಿಷ ಸೇವಿಸಲು ಯತ್ನಿಸಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಧಾವಿಸಿ ರೈತನನ್ನು ಸಮಾಧಾನಪಡಿಸಲು ಮುಂದಾದರು. ಆದರೆ, “ನಿಮ್ಮ ಸಮಾಧಾನ ನಮಗೆ ಬೇಡ, ಆನೆ ಹಾವಳಿಗೆ ಶಾಶ್ವತ ಪರಿಹಾರ ಬೇಕು” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಶಾಸಕಿ ನಯನಾ ಮೋಟಮ್ಮ ಆಗಮಿಸಿ ರೈತರ ಸಮಸ್ಯೆ ಆಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ, ರೈತರ ಬೆಳೆ ಹಾಗೂ ತೋಟಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಮುಂದುವರಿಸಿದ್ದಾರೆ.
ಮೂಡಿಗೆರೆ–ಬೇಲೂರು ರಾಜ್ಯ ಹೆದ್ದಾರಿ ತಡೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಮುಂದಾಗಿದ್ದಾರೆ.
Farmer fed up with elephant menace attempts to consume poison at the protest site
Leave a comment