Home namma chikmagalur chikamagalur ಆನೆಗಳ ವಾಪಸ್ ಕಳುಹಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ
chikamagalurHomeLatest Newsnamma chikmagalur

ಆನೆಗಳ ವಾಪಸ್ ಕಳುಹಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ

Share
Share

ಚಿಕ್ಕಮಗಳೂರು: ಹಾಸನ ಜಿಲ್ಲೆಯ ಬೇಲೂರು ಭಾಗದಿಂದ ಮೂಡಿಗೆರೆ ಕಡೆಗೆ ಕಾಡಾನೆಗಳ ಗುಂಪನ್ನು ಅರಣ್ಯ ಇಲಾಖೆ ರಹಸ್ಯವಾಗಿ ಸ್ಥಳಾಂತರಿಸಲು ಮುಂದಾಗಿರುವುದನ್ನು ತೀವ್ರವಾಗಿ ಖಂಡಿಸಿರುವ ಮೂಡಿಗೆರೆ ಶಾಸಕಿ ನಯನ ಮೋಟಮ್ಮ, ಇಂದು ರಾತ್ರಿ ಒಳಗಾಗಿ ಆನೆಗಳನ್ನು ವಾಪಸ್ ಕಳುಹಿಸದಿದ್ದರೆ ಸೋಮವಾರ ಬೆಳಿಗ್ಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ನಗರದ ಪ್ರೆಸ್ ಕ್ಲಬ್‌ನಲ್ಲಿ ಭಾನುವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ವಾರದ ಹಿಂದೆ ಬೇಲೂರು ಭಾಗದಲ್ಲಿ ಸುಮಾರು 56 ಕಾಡಾನೆಗಳ ಗುಂಪು ಸಂಚರಿಸಲು ಆರಂಭಿಸಿದ ಬಳಿಕ ಅಲ್ಲಿ ಒಂದೆರಡು ಜೀವಹಾನಿ ಸಂಭವಿಸಿದೆ. ಇದೇ ಸಂದರ್ಭದಲ್ಲಿ ಎನ್.ಆರ್.ಪುರ ಭಾಗದಲ್ಲಿಯೂ ಕಾಡಾನೆ ದಾಳಿಯಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಈ ಘಟನೆಗಳ ಬೆನ್ನಲ್ಲೇ ಹಾಸನ ಜಿಲ್ಲಾ ಉಸ್ತುವಾರಿ ಸಚಿವರು, ಬೇಲೂರು ಭಾಗದಲ್ಲಿರುವ ಆನೆಗಳ ಗುಂಪನ್ನು ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸುವ ಕುರಿತು ಹೇಳಿಕೆ ನೀಡಿದ್ದರು ಎಂದರು.

ಈ ನಿರ್ಧಾರದ ವಿಚಾರ ತಿಳಿದ ತಕ್ಷಣ ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು ಹಾಗೂ ತರೀಕೆರೆ ಕ್ಷೇತ್ರಗಳ ನಾಲ್ವರು ಶಾಸಕರು ಅರಣ್ಯ ಸಚಿವರಿಗೆ ಲಿಖಿತವಾಗಿ ಆಕ್ಷೇಪ ಸಲ್ಲಿಸಿದ್ದೇವೆ. ಭದ್ರಾ ಅಭಯಾರಣ್ಯವು ಈ ನಾಲ್ಕು ಕ್ಷೇತ್ರಗಳ ಗಡಿಭಾಗದಲ್ಲಿದ್ದು, ಅಲ್ಲಿಗೆ ಆನೆಗಳನ್ನು ಸ್ಥಳಾಂತರಿಸಿದರೆ ಸುತ್ತಮುತ್ತಲಿನ ಗ್ರಾಮಗಳ ಜನಜೀವನ, ರೈತರ ಕೃಷಿ ಮತ್ತು ಕಾಫಿ ತೋಟಗಳಿಗೆ ತೀವ್ರ ತೊಂದರೆಯಾಗಲಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಈ ಕ್ರಮಕ್ಕೆ ನಮ್ಮ ಒಪ್ಪಿಗೆ ಇಲ್ಲ ಎಂದು ಸ್ಪಷ್ಟಪಡಿಸಿದ್ದೇವೆ ಎಂದು ತಿಳಿಸಿದರು.

ನವೆಂಬರ್ 25ರಂದು ಅರಣ್ಯ ಸಚಿವರು ಎರಡೂ ಜಿಲ್ಲೆಗಳ ಶಾಸಕರ ಸಭೆ ಕರೆಯುವುದಾಗಿ ತಿಳಿಸಿದ್ದರು. ಬಳಿಕ ನವೆಂಬರ್ 30ರಂದು ಸಭೆ ನಡೆಸಿ ಚರ್ಚಿಸಿದ ನಂತರ ನಿರ್ಧಾರ ಕೈಗೊಳ್ಳುವುದಾಗಿ ಹೇಳಲಾಗಿತ್ತು. ಆದರೆ, ಸಭೆ ನಡೆಯುವ ಮೊದಲೇ ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳನ್ನು ಮೂಡಿಗೆರೆ ಕಡೆಗೆ ಓಡಿಸಲು ಆರಂಭಿಸಿರುವುದು ಆಘಾತಕಾರಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾನು ಕಳಸ ಪ್ರವಾಸದಲ್ಲಿದ್ದಾಗ ಆನೆಗಳನ್ನು ಮೂಡಿಗೆರೆ ಕಡೆಗೆ ಸುಮಾರು ಮೂರೂವರೆ ಕಿಲೋಮೀಟರ್ ದೂರದವರೆಗೆ ಓಡಿಸಲಾಗಿದೆ ಎಂಬ ಮಾಹಿತಿ ಬಂದಿತು. ಹಾಸನ ಹಾಗೂ ಚಿಕ್ಕಮಗಳೂರು ಭಾಗದ ಅರಣ್ಯ ಅಧಿಕಾರಿಗಳು ಮತ್ತು ಆನೆ ಯೋಜನೆಯ ಎಪಿಸಿಸಿಎಫ್ ನೇತೃತ್ವದಲ್ಲಿ ಆನೆಗಳನ್ನು ಮೊದಲು ತತ್ಕೊಳ್ ಅರಣ್ಯ ಪ್ರದೇಶದತ್ತ ರಾತ್ರಿ ವೇಳೆ ಓಡಿಸಲು ಪ್ರಯತ್ನಿಸಲಾಗುತ್ತಿದೆ ಎಂಬ ಮಾಹಿತಿ ಲಭಿಸಿತು. ತಕ್ಷಣ ಅರಣ್ಯ ಸಚಿವರು, ಎಪಿಸಿಸಿಎಫ್, ಪಿಸಿಸಿಎಫ್ ಪುಷ್ಕರ್ ಹಾಗೂ ಯಶಪಾಲ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ನಮ್ಮ ಒಪ್ಪಿಗೆ ಇಲ್ಲದೆ, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಈ ನಿರ್ಧಾರ ಹೇಗೆ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿ, ತಕ್ಷಣ ಕಾರ್ಯಾಚರಣೆ ನಿಲ್ಲಿಸುವಂತೆ ಸೂಚಿಸಿದ್ದೆ. ಆಗ ಅಧಿಕಾರಿಗಳು ಕ್ರಮ ಕೈಗೊಳ್ಳುವುದಿಲ್ಲ ಎಂದು ಭರವಸೆ ನೀಡಿದ್ದರು ಎಂದರು.

ಆದರೆ ಭಾನುವಾರ ಬೆಳಿಗ್ಗೆಯಿಂದ ಮತ್ತೆ ಆನೆಗಳ ಸಂಚಾರದ ಕುರಿತು ದೂರವಾಣಿ ಕರೆಗಳು ಮತ್ತು ಎಚ್ಚರಿಕೆ ಸಂದೇಶಗಳು ಬರಲಾರಂಭಿಸಿದವು. ಈ ಹಿನ್ನೆಲೆಯಲ್ಲಿ ಇಬ್ಬರು ಶಾಸಕರಿಗೂ ಮಾಹಿತಿ ನೀಡಿದ್ದೇನೆ. ಪಿಸಿಸಿಎಫ್ ಮತ್ತು ಆನೆ ಯೋಜನೆಯ ಎಪಿಸಿಸಿಎಫ್ ಅವರಿಗೆ ವಾಟ್ಸ್‌ಆ್ಯಪ್ ಮೂಲಕ ಲಿಖಿತ ಆಕ್ಷೇಪವನ್ನೂ ಸಲ್ಲಿಸಿದ್ದೇನೆ. ಸ್ಥಳೀಯ ಜನಪ್ರತಿನಿಧಿಗಳು, ರೈತರು, ತೋಟಗಾರರ ಸಂಘಟನೆಗಳು ಹಾಗೂ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇಂತಹ ನಿರ್ಧಾರ ಕೈಗೊಂಡಿರುವುದು ತೀವ್ರ ಖಂಡನೀಯ ಎಂದು ತಿಳಿಸಿದ್ದೇನೆ.

ಈಗಾಗಲೇ ನನ್ನ ರಾಜೀನಾಮೆ ಪತ್ರವನ್ನು ಸಿದ್ಧಪಡಿಸಿಕೊಂಡು ಬಂದಿದ್ದೇನೆ. ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ಸಿಸಿಎಫ್ ಅಧಿಕಾರಿಗಳು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ಹಾಗೂ ಮುಂದಿನ ಕ್ರಮವನ್ನು ತಾತ್ಕಾಲಿಕವಾಗಿ ನಿಲ್ಲಿಸುವುದಾಗಿ ತಿಳಿಸಿದ್ದಾರೆ. ಆದರೆ, ಆನೆಗಳನ್ನು ರಾತ್ರಿ ವೇಳೆ ಮೂಡಿಗೆರೆ ಕಡೆಗೆ ಓಡಿಸಿದ್ದರೆ ಅವುಗಳನ್ನು ಅದೇ ರಾತ್ರಿ ವಾಪಸ್ ಕಳುಹಿಸಬೇಕು. ಇಂದು ರಾತ್ರಿ ಒಳಗಾಗಿ ಆನೆಗಳು ನಮ್ಮ ಕ್ಷೇತ್ರದಿಂದ ಹಿಂದಿರುಗದಿದ್ದರೆ ಸೋಮವಾರ ಬೆಳಿಗ್ಗೆ ರಾಜೀನಾಮೆ ನೀಡುವುದು ಖಚಿತ ಎಂದು ಎಚ್ಚರಿಸಿದರು.

ನಾನು ಸರ್ಕಾರಕ್ಕೆ ಉತ್ತರ ನೀಡಬೇಕಾಗಿಲ್ಲ; ನನ್ನನ್ನು ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಿರುವ ಜನರಿಗೆ ಉತ್ತರ ನೀಡಬೇಕು. ಜನರ ಜೀವ ಮತ್ತು ಆಸ್ತಿಯನ್ನು ರಕ್ಷಿಸಲು ಸಾಧ್ಯವಾಗದಿದ್ದರೆ ಶಾಸಕಿಯಾಗಿ ಮುಂದುವರಿಯುವುದರಲ್ಲಿ ಅರ್ಥವಿಲ್ಲ. ಹಾಸನದ ಜನರ ಜೀವಕ್ಕೆ ಇರುವ ಬೆಲೆ ಚಿಕ್ಕಮಗಳೂರು ಜಿಲ್ಲೆಯ ಜನರ ಜೀವಕ್ಕೆ ಇಲ್ಲವೇ? ಯಾವ ವೈಜ್ಞಾನಿಕ ಆಧಾರದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು. ವೈಜ್ಞಾನಿಕ ಕ್ರಮ ಎಂದು ಹೇಳುತ್ತಿದ್ದರೂ ಅದರ ಬಗ್ಗೆ ಶಾಸಕರು, ರೈತರು ಹಾಗೂ ತೋಟಗಾರರ ಸಂಘಟನೆಗಳಿಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಪ್ರಶ್ನಿಸಿದರು.

ಕಾಡಾನೆಗಳ ಸಂಚಾರಕ್ಕೆ ನಿರ್ದಿಷ್ಟ ಪ್ರದೇಶಗಳಿದ್ದು, ಅವುಗಳ ಚಲನವಲನದ ಬಗ್ಗೆ ಅರಣ್ಯ ಇಲಾಖೆಯಲ್ಲಿಯೇ ಗಣತಿ ಮತ್ತು ದಾಖಲೆಗಳಿವೆ. ಕಳೆದ 20-21 ವರ್ಷಗಳಿಂದ ಬೇಲೂರು ಭಾಗದಿಂದ ಮೂಡಿಗೆರೆ, ಶೃಂಗೇರಿ ಹಾಗೂ ಚಿಕ್ಕಮಗಳೂರು ಮಾರ್ಗವಾಗಿ ಆನೆಗಳು ಸಂಚರಿಸಿ ಮತ್ತೆ ಹಿಂದಿರುಗುತ್ತಿದ್ದವು. ಈ ಸಹಜ ಸಂಚಾರದ ನಡುವೆ ಅವುಗಳನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಬಲವಂತವಾಗಿ ಓಡಿಸಿ ಅರಣ್ಯಕ್ಕೆ ಬಿಡುವ ಪ್ರಯತ್ನ ಸರಿಯಲ್ಲ ಎಂದರು.

ಆನೆಗಳಿಂದ ಬೆಳೆ ನಾಶವಾದರೆ ರೈತರಿಗೆ ಆಗುವ ನಷ್ಟಕ್ಕೆ ಯಾರು ಹೊಣೆ? ಜೀವಹಾನಿಯಾದರೆ ಅದಕ್ಕೆ ಯಾರು ಬೆಲೆ ಕಟ್ಟಲು ಸಾಧ್ಯ? ಮೃತರ ಕುಟುಂಬಗಳ ಜವಾಬ್ದಾರಿಯನ್ನು ಸರ್ಕಾರ ಅಥವಾ ಅರಣ್ಯ ಇಲಾಖೆ ಸಂಪೂರ್ಣವಾಗಿ ಹೊರುತ್ತದೆಯೇ? ಯಾವುದೇ ಅನಾಹುತ ಸಂಭವಿಸುವ ಮೊದಲೇ ಈ ಕಾರ್ಯಾಚರಣೆಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅಧಿಕಾರಿಗಳು ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿರುವುದು ಐವರು ಕಾಂಗ್ರೆಸ್ ಶಾಸಕರಿಗೂ ಅಗೌರವ ತೋರಿದಂತಾಗಿದೆ. ಜನರ ಹಿತಾಸಕ್ತಿಯನ್ನು ಕಡೆಗಣಿಸಿ ಕೈಗೊಂಡಿರುವ ಈ ಕ್ರಮವನ್ನು ಜಿಲ್ಲೆಯ ಶಾಸಕರ ಪರವಾಗಿ ತೀವ್ರವಾಗಿ ಖಂಡಿಸುತ್ತೇನೆ ಎಂದು ನಯನ ಮೋಟಮ್ಮ ಹೇಳಿದರು.

Resignation from MLA post if elephants are not sent back

Share

Leave a comment

Leave a Reply

Your email address will not be published. Required fields are marked *

Don't Miss

ನ.18ರಂದು ಗೌಡನಹಳ್ಳಿ ಜನಾಂದೋಲನ ಅಂಬಳೆದಿಂದ ಚಲೋ

ಚಿಕ್ಕಮಗಳೂರು:ಕೈಗಾರಿಕಾ ಮಾಲಿನ್ಯ, ರಾಸಾಯನಿಕ ತ್ಯಾಜ್ಯದಿಂದ ಜಲಮೂಲಗಳ ಮಾಲಿನ್ಯ ಹಾಗೂ ಸಾರ್ವಜನಿಕ ಆಸ್ತಿಗಳ ಅತಿಕ್ರಮಣ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಗೌಡನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ನ.18ರಂದು ಅಂಬಳೆ ಕೈಗಾರಿಕಾ ಪ್ರದೇಶದಲ್ಲಿ...

ಚಿಕ್ಕಮಗಳೂರಿನಲ್ಲಿ ಇಂದಿರಾಗಾಂಧಿ 110ನೇ ಜನ್ಮದಿನಾಚರಣೆ ಅದ್ದೂರಿ ಸಿದ್ಧತೆ

ಚಿಕ್ಕಮಗಳೂರು: ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯವರಿಗೆ ರಾಜಕೀಯ ಮರುಜನ್ಮ ನೀಡಿದ ಐತಿಹಾಸಿಕ ನೆಲವಾದ ಚಿಕ್ಕಮಗಳೂರಿನಲ್ಲಿ ಅವರ 110ನೇ ಜನ್ಮದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲು ಜಿಲ್ಲಾ ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಇದೇ ಸಂದರ್ಭದಲ್ಲಿ ನೂತನ...

Related Articles

ಕನ್ನಡ ಸಾಹಿತ್ಯ ಪರಿಷತ್ ಘಟಕಗಳ ನಿರ್ವಹಣೆಗೆ ಆಡಳಿತಾಧಿಕಾರಿ ನೇಮಕ

ಕನ್ನಡ,ಕನ್ನಡ ಬನ್ನಿ ನಮ್ಮ ಸಂಗಡ ಎನ್ನುವ ಬದಲಿಗೆ ಕನ್ನಡ, ಕನ್ನಡ ನಮಗೆ ದೇಣಿಗೆ ನಿಮಗೆ ಬೇಕಾದ...

ಕಾಡನೆಗಳ ಕಾಟಕ್ಕೆ ಶಾಸಕರ ರಾಜೀನಾಮೆ ಹೈಡ್ರಾಮಾ ?.

ಚಿಕ್ಕಮಗಳೂರು: ಹಾಸನ ಜಿಲ್ಲೆಯ ಬೇಲೂರಿನಲ್ಲಿ ಬೀಡು ಬಿಟ್ಟಿರುವ ಆನೆಗಳ ಹಿಂಡು ಇಬ್ಬರ ಸಾವಿಗೆ ಕಾರಣವಾಗಿದ್ದು ಜನ...

ಮುತ್ತೋಡಿ ಅರಣ್ಯಕ್ಕೆ ಆನೆ ಸ್ಥಳಾಂತರದ ಪ್ರಕ್ರಿಯೆಗೆ ವಿರೋಧ

ಚಿಕ್ಕಮಗಳೂರು: ಹಾಸನ ಜಿಲ್ಲೆಯ ಬೇಲೂರು ಭಾಗದಿಂದ ಸೆರೆಹಿಡಿಯಲಾಗಿರುವ ಕಾಡಾನೆಗಳನ್ನು ಮೂಡಿಗೆರೆ ಮಾರ್ಗವಾಗಿ ಮುತ್ತೋಡಿ ಅರಣ್ಯಕ್ಕೆ ಸ್ಥಳಾಂತರಿಸುವ...

ಹಾಸನ ಜಿಲ್ಲೆಯ ಡಿಎಫ್‌ಒ ಹರೀಶ್ ವಿರುದ್ಧ ಶಾಸಕ ಎಚ್.ಡಿ. ತಮ್ಮಯ್ಯ ಆಕ್ರೋಶ

ಚಿಕ್ಕಮಗಳೂರು: ಕಳೆದ ಐದಾರು ವರ್ಷಗಳಿಂದ ಜಿಲ್ಲೆಯಲ್ಲಿ ಮಾನವ–ಪ್ರಾಣಿ ಸಂಘರ್ಷ ತೀವ್ರಗೊಳ್ಳುತ್ತಿದ್ದು, ಹಾಸನ ಜಿಲ್ಲೆಯಲ್ಲಿರುವ ಕಾಡಾನೆಗಳನ್ನು ಬಲವಂತವಾಗಿ...