ಮೂಡಿಗೆರೆ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಚಾರ್ಮಾಡಿ ಘಾಟ್ನ ಅಲೆಖಾನ್ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 24 ವರ್ಷದ ಯುವಕ ಮೃತಪಟ್ಟಿದ್ದು, ಮತ್ತೊಬ್ಬ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಬೆಂಗಳೂರಿನಿಂದ ಚಾರ್ಮಾಡಿ ಘಾಟ್ನ ಪ್ರಕೃತಿ ಸೌಂದರ್ಯ ಹಾಗೂ ವ್ಯೂ ಪಾಯಿಂಟ್ಗಳನ್ನು ವೀಕ್ಷಿಸಲು ಬಂದಿದ್ದ ಇಬ್ಬರು ಕಾಲೇಜು ಸ್ನೇಹಿತರು ಬೈಕ್ನಲ್ಲಿ ಸಂಚರಿಸುತ್ತಿದ್ದರು. ಅಲೆಖಾನ್ ಸಮೀಪ ಮುಂದೆ ಸಾಗುತ್ತಿದ್ದ ವಾಹನವನ್ನು ಓವರ್ಟೇಕ್ ಮಾಡಲು ಪ್ರಯತ್ನಿಸಿದ ವೇಳೆ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಬೈಕ್ನ ಹಿಂಬದಿ ಕುಳಿತಿದ್ದ 24 ವರ್ಷದ ಚಿರಾಗ್ ರಸ್ತೆಗೆ ಎಸೆಯಲ್ಪಟ್ಟಿದ್ದಾನೆ. ಇದೇ ವೇಳೆ ಕಡೂರಿನಿಂದ ಧರ್ಮಸ್ಥಳದತ್ತ ತೆರಳುತ್ತಿದ್ದ ಬಸ್ನ ಹಿಂಬದಿ ಚಕ್ರ ರಸ್ತೆಗೆ ಬಿದ್ದಿದ್ದ ಚಿರಾಗ್ನ ತಲೆಯ ಮೇಲೆ ಹರಿದಿದೆ. ಹೆಲ್ಮೆಟ್ ಧರಿಸಿದ್ದರೂ ತಲೆಗೆ ಗಂಭೀರ ಗಾಯಗಳಾಗಿವೆ.
ಗಂಭೀರವಾಗಿ ಗಾಯಗೊಂಡಿದ್ದ ಚಿರಾಗ್ನನ್ನು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ, ಚಿಕಿತ್ಸೆಗಾಗಿ ಸಾಗಿಸುವ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಬೈಕ್ನಲ್ಲಿದ್ದ ಮತ್ತೊಬ್ಬ ಯುವಕ ಯಶಸ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಘಟನೆಯ ಕುರಿತು ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Horrific accident in Charmadi Ghat – Youth dies
Leave a comment