ಚಿಕ್ಕಮಗಳೂರು: ದೇಶಾದ್ಯಂತ ನಡೆಯುತ್ತಿರುವ ‘ಪ್ರಜಾಪ್ರಭುತ್ವ ಉಳಿಸಿ, ಮತ ಬಚಾವೋ–ದೇಶ ಬಚಾವೋ’ ಚಳುವಳಿಯ ಭಾಗವಾಗಿ ಅ.8ರಂದು ಚಿಕ್ಕಮಗಳೂರು ನಗರದಲ್ಲಿ ಇಂಡಿಯಾ ಒಕ್ಕೂಟದ ವತಿಯಿಂದ ಪ್ರತಿಭಟನೆ ಹಾಗೂ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಚ್.ಪಿ. ಮಂಜೇಗೌಡ ತಿಳಿಸಿದರು.
ಚಿಕ್ಕಮಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.8ರಂದು ಗುರುವಾರ ಬೆಳಿಗ್ಗೆ 10.30ಕ್ಕೆ ನಗರದ ಹನುಮಂತಪ್ಪ ವೃತ್ತದಿಂದ ಇಂಡಿಯಾ ಒಕ್ಕೂಟದ ಮುಖಂಡರು ಹಾಗೂ ಕಾರ್ಯಕರ್ತರು ಮೆರವಣಿಗೆ ಮೂಲಕ ಕೋರ್ಟ್ ಸಮೀಪದ ಗಾಂಧಿ ಪಾರ್ಕ್‌ಗೆ ತೆರಳಲಿದ್ದಾರೆ. ಬಳಿಕ ಗಾಂಧಿ ಪ್ರತಿಮೆ ಎದುರು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಧರಣಿ ನಡೆಸಲಾಗುವುದು ಎಂದರು.
ಕೇಂದ್ರ ಬಿಜೆಪಿ ಸರ್ಕಾರ ಚುನಾವಣಾ ಆಯೋಗದ ಮೇಲೆ ತೆರೆಮರೆಯಲ್ಲಿ ಪ್ರಭಾವ ಬೀರುತ್ತಿದೆ ಎಂದು ಆರೋಪಿಸಿದ ಅವರು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂವಿಧಾನದ 326ನೇ ವಿಧಿಯಂತೆ ಯಾವುದೇ ತಾರತಮ್ಯವಿಲ್ಲದೆ ಪ್ರತಿಯೊಬ್ಬ ಅರ್ಹ ವಯಸ್ಕ ನಾಗರಿಕನಿಗೂ ಮತದಾನದ ಹಕ್ಕು ಖಾತರಿಯಾಗಬೇಕು. ಆದರೆ ಎಸ್‌ಐಆರ್ (ವಿಶೇಷ ತೀವ್ರ ಪರಿಷ್ಕರಣೆ) ಹೆಸರಿನಲ್ಲಿ ಕೋಟ್ಯಂತರ ನಾಗರಿಕರ ಮತದಾನದ ಹಕ್ಕನ್ನು ಕಸಿಯುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ಮತದಾನದ ಹಕ್ಕು ಪ್ರಜಾಪ್ರಭುತ್ವದ ಮೂಲಭೂತ ಹಕ್ಕಾಗಿದ್ದು, ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸಂವಿಧಾನಬದ್ಧತೆಯನ್ನು ಖಾತರಿಪಡಿಸಬೇಕು. ಪ್ರಜಾಪ್ರಭುತ್ವ ಹಾಗೂ ಸಂವಿಧಾನ ವಿರೋಧಿ ಚಟುವಟಿಕೆಗಳಿಗೆ ಅಂತ್ಯ ಕಾಣುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ಮಂಜೇಗೌಡ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಇಂಡಿಯಾ ಒಕ್ಕೂಟದ ಮುಖಂಡರಾದ ರೇಣುಕಾರಾಧ್ಯ, ರಘು, ರೂಬಿನ್ ಮೋಸಸ್, ಪ್ರವೀಣ್ ಬೆಟ್ಟಗೆರೆ, ಶಿವು, ತನುಜ್ ನಾಯ್ಡು, ಭರತ್ ಹಾಗೂ ರಮೇಶ್ ಉಪಸ್ಥಿತರಿದ್ದರು.
INDIA bloc protest in Chikkamagaluru on October 8
Leave a comment