ಚಿಕ್ಕಮಗಳೂರು: ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶಕ್ಕೆ ನೀಡಿದ ಸಂದೇಶಗಳು ಮತ್ತು ಮಾರ್ಗದರ್ಶನ ಇಂದಿಗೂ ಅತ್ಯಂತ ಪ್ರಸ್ತುತವಾಗಿದ್ದು, ಅವರ ತತ್ವಗಳನ್ನು ಪಾಲಿಸುವ ಮೂಲಕ ಪ್ರತಿಯೊಬ್ಬರೂ ಕಾರ್ಯಾನ್ಮುಖರಾಗಬೇಕು ಎಂದು ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್. ಮಹೇಶ್ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ನೆನಪಿನಂಗಳದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯು ಭಾರತ ದೇಶದ ಜನತೆಗೆ ಅತ್ಯಂತ ಶುಭ ಸಂದರ್ಭವಾಗಿದೆ. ದೇಶದ ಸ್ವಾತಂತ್ರ್ಯ ಮತ್ತು ಪ್ರಗತಿಗೆ ಈ ಇಬ್ಬರು ಮಹಾ ನಾಯಕರು ನೀಡಿದ ಕೊಡುಗೆ ಅಪಾರ. ಅವರು ನಮಗೆ ತೋರಿಸಿಕೊಟ್ಟ ಸತ್ಯ, ಅಹಿಂಸೆ ಹಾಗೂ ಸರಳತೆಯ ಮಾರ್ಗದಲ್ಲಿ ನಾವು ನಡೆಯಬೇಕಿದೆ ಎಂದು ಹೇಳಿದರು.
ಮಹಾತ್ಮರು ನೀಡಿದ ಸಂದೇಶಗಳನ್ನು ಬರಿ ನೆನಪಿಸಿಕೊಳ್ಳುವುದಷ್ಟೇ ಅಲ್ಲದೆ, ಅವುಗಳನ್ನು ದಿನನಿತ್ಯದ ಜೀವನದಲ್ಲಿ ಪಾಲಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕ್ರಿಯಾಶೀಲರಾಗಬೇಕು. ಆ ಮೂಲಕ ಈ ಇಬ್ಬರೂ ಮಹಾತ್ಮರಿಗೆ ನಾವೆಲ್ಲರೂ ಗೌರವ ಸಲ್ಲಿಸಬೇಕಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಆದರ್ಶ, ತತ್ವ ಮತ್ತು ಸಿದ್ಧಾಂತಗಳು ಮುಂದಿನ ಪೀಳಿಗೆಗೆ ಅತ್ಯಂತ ಅವಶ್ಯಕವಾಗಿದ್ದು, ಅವರ ತತ್ವಗಳನ್ನು ಬದುಕಿನಲ್ಲಿ ಪರಿಪಾಲಿಸುವುದೇ ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಎಂದರು.
ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಕೇವಲ ಸಾಂಕೇತಿಕವಾಗಿ ಆಚರಿಸದೆ ಅರ್ಥಪೂರ್ಣವಾಗಿ ಆಚರಿಸಬೇಕಿದೆ. ದೇಶದಲ್ಲಿ ಸಂಪೂರ್ಣ ಮದ್ಯಪಾನ ನಿಷೇಧವಾಗಬೇಕು ಎಂಬುದು ಗಾಂಧೀಜಿಯವರ ಮಹತ್ವಾಕಾಂಕ್ಷೆಯ ಕನಸಾಗಿತ್ತು. ಆದರೆ, ಇಂದು ಅವರ ಜಯಂತಿಯ ನೆಪದಲ್ಲಿ ಕೇವಲ ಒಂದು ದಿನ ಮದ್ಯದ ಅಂಗಡಿಗಳನ್ನು ಬಂದ್ ಮಾಡಿದರೆ ಸಾಲದು ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಮದ್ಯಪಾನದ ಚಟದಿಂದಾಗಿ ಸಮಾಜದಲ್ಲಿ ಅನೇಕ ಕುಟುಂಬಗಳು ಬೀದಿಗೆ ಬಿದ್ದಿವೆ, ಜನರ ಆರೋಗ್ಯ ಹದಗೆಟ್ಟಿದೆ. ಈ ನಿಟ್ಟಿನಲ್ಲಿ ರಾಜಕಾರಣಿಗಳು ಮತ್ತು ಸಮಾಜದ ಮುಖಂಡರು ಗಾಂಧೀಜಿಯವರ ವಿಚಾರಧಾರೆಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಇಂದಿಗೂ ಕಾಲ ಮಿಂಚಿಲ್ಲ. ಮದ್ಯವರ್ಜನದಂತಹ ಉತ್ತಮ ಆಶಯಗಳನ್ನು ಅನುಷ್ಠಾನಗೊಳಿಸಲು ಪ್ರತಿಯೊಬ್ಬರೂ ಪಣತೊಡಬೇಕು ಎಂದರು.
ಮಹಾತ್ಮರ ತತ್ವ-ಸಿದ್ಧಾಂತಗಳನ್ನು ಪಾಲಿಸದೆ ಕೇವಲ ಜಯಂತಿಗಳನ್ನು ಆಚರಿಸಿದರೆ ಅದಕ್ಕೆ ಯಾವುದೇ ಅರ್ಥವಿರುವುದಿಲ್ಲ. ಗಾಂಧೀಜಿ ಅವರು ನೀಡಿದ ಸಂದೇಶಗಳು ಹಾಗೂ ಶಾಸ್ತ್ರೀಜಿ ಅವರು ದೇಶಕ್ಕೆ ನೀಡಿದ ಸೇವೆಯನ್ನು ಪ್ರತಿಯೊಬ್ಬರೂ ಹೃತ್ಪೂರ್ವಕವಾಗಿ ಸ್ವೀಕರಿಸಿ, ಸ್ವಾಗತಿಸಬೇಕಿದೆ ಎಂದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ತತ್ವ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಪಾಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಮಹಾಪುರುಷರು ತೋರಿಸಿಕೊಟ್ಟ ಸನ್ಮಾರ್ಗ ಹಾಗೂ ಒಳ್ಳೆಯ ಚಿಂತನೆಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಅಂತಹ ಒಳ್ಳೆಯ ಮನಸ್ಸನ್ನು ನನಗೂ ಸೇರಿದಂತೆ ಜಗತ್ತಿನ ಸಮಸ್ತ ಜನರಿಗೆ ಭಗವಂತ ಕರುಣಿಸಲಿ ಎಂದು ಆಶಿಸಿದರು.
ಗಾಯಕರಾದ ಸುರೇಂದ್ರ ನಾಯಕ್ ತಂಡದವರು ಹಾಗೂ ವಿದ್ಯಾರ್ಥಿಗಳು ಗಾಂಧೀಜಿಯವರಿಗೆ ಪ್ರಿಯವಾದ ‘ರಘುಪತಿ ರಾಘವ ರಾಜಾರಾಂ… ಹಾಗೂ ಸಿದ್ಧ ಬುದ್ಧ ನೀ ಸ್ಕಂದ ವಿನಾಯಕ, ವೈಷ್ಣವ ಜನತೋ ಭಜನೆಗಳನ್ನು ಹಾಡಿದರು. ಅನಂತರ ನಡೆದ ಸರ್ವ ಧರ್ಮ ಪ್ರಾರ್ಥನೆಯಲ್ಲಿ ನಾಗಶ್ರೀ ತ್ಯಾಗರಾಜ್ ಭಗವದ್ಗೀತೆ, ಮೌಲ್ವಿ ಮಹಮ್ಮದ್ ಇಬ್ರಾಹಿಂ ಖಾನ್ ಕುರಾನ್ ಹಾಗೂ ಫಾದರ್ ಡೇವಿಡ್ ಪ್ರಕಾಶ್ ಬೈಬಲ್ ಪಠಣ ಮಾಡಿದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಂಜೇಗೌಡ, ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ, ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ.ಜಯಕುಮಾರ್, ಚಿಕ್ಕಮಗಳೂರು ಉಪ ವಿಭಾಗದ ಉಪವಿಭಾಗಾಧಿಕಾರಿ ಪುರುರಾಜ್ ಸಿಂಗ್ ಸೋಲಂಕಿ, ನಗರಸಭೆ ಅಧ್ಯಕ್ಷೆ ಭವ್ಯಾ ಮಂಜುನಾಥ್, ನಗರಸಭೆ ಆಯುಕ್ತ ಬಿ. ಬಸವರಾಜು, ಕೃಷಿ ಇಲಾಖೆ ಜಂಟಿ ನಿರ್ದೇಶಕ ತಿರುಮಲೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಂಜುನಾಥ್ ಜಿ.ಪಂ. ನ ಕಾರ್ಯದರ್ಶಿ ಪೂರ್ಣಿಮ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಗಳು ಮತ್ತು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮುಂತಾದವರಿದ್ದರು.
The Mahatma Gandhi-Lal Bahadur Shastriji guidance is still relevant today
Leave a comment