ಚಿಕ್ಕಮಗಳೂರು: ಮಳಲೂರು ಏತ ನೀರಾವರಿ ಅನುಷ್ಠಾನ ಮತ್ತು ಅರಸನ ನಾಲೆ ಪುನಶ್ಚೇತನ ಯೋಜನೆಗಳ ಕಾಮಗಾರಿಗಳಿಗೆ ಉಂಟಾಗಿರುವ ತಾಂತ್ರಿಕ ಅಡಚಣೆಗಳನ್ನು ಪರಿಶೀಲಿಸಿ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಮಳಲೂರು ಏತ ನೀರಾವರಿ ಅನುಷ್ಠಾನ ಹಾಗೂ ಅರಸನ ನಾಲೆ ಪುನಶ್ಚೇತನದ ಕುರಿತು ರೈತ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿ ಪ್ರಸ್ತುತ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕುಂಠಿತವಾಗಿದ್ದು, ರೈತರು ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಳಲೂರು ಏತ ನೀರಾವರಿ ಯೋಜನೆಯು ಮಳಲೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರ ಕನಸಿನ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಆಗಿರುವ ಸಮಸ್ಯೆಗಳ ಕುರಿತು ಪರಿಶೀಲಿಸಿ ಅನುಷ್ಠಾನಕ್ಕೆ ಸೂಕ್ತ ಕ್ರಮ ವಹಿಸಬೇಕು ಎಂದ ಅವರು, ಅರಸನ ನಾಲೆಯಲ್ಲಿ ಉಂಟಾಗಿರುವ ವೈಜ್ಞಾನಿಕ ಹಾಗೂ ತಾಂತ್ರಿಕ ದೋಷಗಳ ಕುರಿತು ಸ್ವತಃ ನೀರಾವರಿ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಪುನಶ್ಚೇತನಕ್ಕೆ ಅಗತ್ಯ ಕ್ರಮ ವಹಿಸುವಂತೆ ತಿಳಿಸಿದರು.
ರೈತ ಮುಖಂಡ ವೈ.ಸಿ.ಸುನೀಲ್ ಕುಮಾರ್ ಮಾತನಾಡಿ, ಸುಮಾರು ೨೫ ವರ್ಷಗಳ ಹಿಂದೆ ಮಳಲೂರು ಏತ ನೀರಾವರಿ ಯೋಜನೆಗೆ ಅನುಮೋದನೆ ದೊರೆತಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಭರವಸೆಯಿಂದ ಯೋಜನೆಗಾಗಿ ರೈತರು ತಮ್ಮ ಭೂಮಿಯನ್ನು ಸ್ವಯಂಪ್ರೇರಿತವಾಗಿ ಬಿಟ್ಟುಕೊಟ್ಟಿದ್ದಾರೆ. ಆದರೆ ಇಷ್ಟು ವರ್ಷಗಳಾದರೂ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಸಫಲವಾಗಿಲ್ಲ. ಇದರ ಪರಿಣಾಮವನ್ನು ಮಳಲೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಅನುಭವಿಸುತ್ತಿದ್ದಾರೆ ಎಂದರು.
ಮೊದಲ ಹಂತದ ಬಹುತೇಕ ಕಾಮಗಾರಿ ಪೂರ್ಣಗೊಂಡರೂ ನೀರು ಹರಿಯುತ್ತಿಲ್ಲ. ಬಿರಂಜಿ ಹೊಳೆಯಲ್ಲಿ ನೀರು ಹರಿಯುವ ಸ್ಥಳದಲ್ಲಿ ಯೋಜನೆಯ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಯೋಜನೆಗೆ ಭೂಸ್ವಾಧೀನಪಡಿಸಿಕೊಂಡು ಪರಿಹಾರ ಪಾವತಿಸಿರುವ ಕೆಲವು ರೈತರ ಜಮೀನುಗಳು ಯೋಜನೆಗೆ ಅವಶ್ಯವಿಲ್ಲದೆ ತಪ್ಪಾದ ಸರ್ವೇ ಕಾರ್ಯದಿಂದ ಭೂಸ್ವಾಧೀನಗೊಂಡಿದ್ದು, ಈ ಜಮೀನುಗಳನ್ನು ಭೂಸ್ವಾಧೀನದಿಂದ ಕೈಬಿಡಬೇಕು. ತಪ್ಪಾದ ಸರ್ವೇ ಕಾರ್ಯದಿಂದ ಭೂಸ್ವಾಧೀನ ಮಾಡಿರುವುದೇ ಒಂದು ಕಡೆ, ಪೈಪ್‌ಲೈನ್ ಕಾಮಗಾರಿ ಮಾಡಿರುವುದೇ ಒಂದು ಕಡೆಯಾಗಿದೆ. ಈ ಕುರಿತು ಉಂಟಾಗಿರುವ ತಾಂತ್ರಿಕ ದೋಷಗಳನ್ನು ಕೂಡಲೇ ಸರಿಪಡಿಸಬೇಕು ಎಂದರು.
ಮತ್ತೆ ಮಾತನಾಡಿದ ಜಿಲ್ಲಾಧಿಕಾರಿಗಳು, ಅರಸನ ನಾಲೆ ಪುನಶ್ಚೇತನ ಕಾಮಗಾರಿಗೆ ಸಂಬಂಧಿಸಿದಂತೆ ಇಲಾಖೆಯ ಅಧಿಕಾರಿಗಳು ಯೋಜನೆಯ ಸ್ಥಿತಿಗತಿಗಳ ಬಗ್ಗೆ ತಮ್ಮ ಮೇಲಾಧಿಕಾರಿಗಳ ಗಮನಕ್ಕೆ ತಂದು ಕಾಮಗಾರಿಯ ಪುನಶ್ಚೇತನಕ್ಕೆ ಕೂಡಲೇ ಅಗತ್ಯ ಕ್ರಮ ವಹಿಸಬೇಕು ಎಂದರು. ಕಾಮಗಾರಿ ಸಂಬಂಧ ಕೈಗೊಳ್ಳುವ ಸರ್ವೇ ಕಾರ್ಯಗಳಿಗೆ ರೈತ ಮುಖಂಡರುಗಳನ್ನು ಒಳಗೊಂಡ ಸಮಿತಿ ರಚಿಸಿ ಯಾವುದೇ ಸಮಸ್ಯೆ ಉಂಟಾಗದಂತೆ ಯೋಜನೆಯ ಕಾಮಗಾರಿಯನ್ನು ವ್ಯವಸ್ಥಿತವಾಗಿ ನಿರ್ವಹಿಸುವಂತೆ ಸೂಚಿಸಿದರು.
ಸಭೆಯಲ್ಲಿ ಗೊರೂರು ಕೆ.ಎನ್.ಎಲ್.ಎಲ್.ಅಧೀಕ್ಷಕ ಅಭಿಯಂತರ ಪ್ರಶಾಂತ್, ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ದೊಡ್ಡಯ್ಯ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ದಕ್ಷಿಣಾಮೂರ್ತಿ ಹಾಗೂ ರೈತ ಮುಖಂಡರುಗಳು ಹಾಜರಿದ್ದರು.
Deputy Commissioner directs officials to resolve issues regarding the Malaluru Lift Irrigation Project.
Leave a comment