ಚಿಕ್ಕಮಗಳೂರು: ಗ್ರಾಮ ಪಂಚಾಯಿತಿ ನೌಕರರಿಗೆ ಪರಿಷ್ಕೃತ ಕನಿಷ್ಠ ವೇತನವನ್ನು ಕೂಡಲೇ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಫೆಡರೇಶನ್ ಕಾರ್ಯಕರ್ತರು ಮಂಗಳವಾರ ಜಿಪಂ ಕಚೇರಿ ಎದರು ಧರಣಿ ನಡೆಸಿದರು.
ಗ್ರಾಪಂಗಳಲ್ಲಿ ಅಟೆಂಡರ್, ಬಿಲ್ ಕಲೆಕ್ಟರ್, ಕ್ಲರ್ಕ್, ಡಿಇಒ, ವಾಟರ್ಮ್ಯಾನ್, ಪಂಪ್ ಆಪರೇಟರ್ ಹಾಗೂ ಸ್ವಚ್ಛತಾ ಕಾರ್ಮಿಕರು ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಹಲವು ವರ್ಷಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ನ್ಯಾಯಯುತ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಎಐಟಿಯುಸಿ ಮುಖಂಡ ಎಸ್.ವಿಜಯಕುಮಾರ್, ೨೦೧೭ಕ್ಕೂ ಮೊದಲು ಗ್ರಾಮ ಪಂಚಾಯಿತಿಗಳ ಆದಾಯದಿಂದ ಕೇವಲ ೫೦೦ರಿಂದ ೨ ಸಾವಿರ ರೂ.ವರೆಗೆ ವೇತನ ಪಡೆಯುತ್ತಿದ್ದ ನೌಕರರಿಗೆ ಸರ್ಕಾರದಿಂದ ನೇರವಾಗಿ ವೇತನ ದೊರೆಯುವಂತೆ ಮಾಡಲು ಸಂಘಟನೆ ಹೋರಾಟ ನಡೆಸಿತ್ತು. ಅಂದಿನ ಸಚಿವ ಎಚ್.ಕೆ. ಪಾಟೀಲ್ ಅವರೊಂದಿಗೆ ಸಭೆ ನಡೆಸಿ ಮನವಿ ಸಲ್ಲಿಸುವ ಮೂಲಕ ಈ ನಿಟ್ಟಿನಲ್ಲಿ ಯಶಸ್ವಿಯಾಗಿz್ದೆÃವೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ಜಾರಿಗೊಳಿಸುವಂತೆ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು. ನ್ಯಾಯಾಲಯದ ಪ್ರಕ್ರಿಯೆಯ ಬಳಿಕ ಕನಿಷ್ಠ ವೇತನ ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದ್ದರೂ, ರಾಜ್ಯ ಸರ್ಕಾರ ಕನಿಷ್ಠ ವೇತನ ಪರಿಷ್ಕರಣೆಗಾಗಿ ಉಪಸಮಿತಿ ರಚಿಸಿ ಪರಿಷ್ಕೃತ ವೇತನ ಜಾರಿಗೆ ವಿಳಂಬ ಮಾಡುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೌಕರರಿಗೆ ಪರಿಷ್ಕೃತ ಕನಿಷ್ಠ ವೇತನವನ್ನು ತಕ್ಷಣ ಜಾರಿಗೊಳಿಸುವುದು, ನಿವೃತ್ತ ನೌಕರರಿಗೆ ನಿಯಮಾನುಸಾರ ನೀಡಬೇಕಾದ ಉಪದಾನ ಬಿಡುಗಡೆ ಮಾಡುವುದು, ಉಳಿಕೆ ರಜೆ ಮತ್ತು ಗಳಿಕೆ ರಜೆ ಸೌಲಭ್ಯ ಕಲ್ಪಿಸುವುದು ಹಾಗೂ ನೀರುಗಂಟಿ ಮತ್ತು ವಾಟರ್ಮ್ಯಾನ್ಗಳಿಗೆ ಕಾರ್ಯಸ್ಥಳದ ಅಂತರಕ್ಕೆ ಅನುಗುಣವಾಗಿ ಪೆಟ್ರೋಲ್ ವೆಚ್ಚ ನೀಡಬೇಕು ಎಂದು ಆಗ್ರಹಿಸಿದರು.
ಅದೇ ರೀತಿ ನೌಕರರಿಗೆ ಜಾರಿಯಲ್ಲಿರುವ ಭವಿಷ್ಯ ನಿಧಿ ಸೌಲಭ್ಯವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ೨೦೧೭ಕ್ಕೂ ಹಿಂದಿನ ಬಾಕಿ ವೇತನವನ್ನು ಪಾವತಿಸಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಅರ್ಹತೆ ಹೊಂದಿರುವ ಹಾಲಿ ಸಿಬ್ಬಂದಿಯಿAದ ಭರ್ತಿ ಮಾಡಬೇಕು. ಹೆಚ್ಚುವರಿ ಡಿಇಒಗಳ ಸೇವೆಯನ್ನು ಅನುಮೋದಿಸಿ ಖಾಯಂ ನೌಕರರನ್ನಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ನೌಕರರ ಸೇವಾ ಪುಸ್ತಕ, ಈಎಸ್ಐ ಹಾಗೂ ಪಿಂಚಣಿ ಸೌಲಭ್ಯಗಳಿಗೆ ಆದ್ಯತೆ ನೀಡಬೇಕು. ಬಿಲ್ ಕಲೆಕ್ಟರ್ಗಳ ಮೇಲೆ ಮುಂಗಡ ತೆರಿಗೆ ವಸೂಲಿ ರಸೀದಿಗಳ ಹೊರೆ ಹಾಕಲಾಗುತ್ತಿದ್ದು, ಗ್ರಾಮಸ್ಥರು ತೆರಿಗೆ ಪಾವತಿಸದ ಸಂದರ್ಭದಲ್ಲೂ ಬಿಲ್ ಕಲೆಕ್ಟರ್ಗಳೇ ರಸೀದಿ ಬರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಅವರು ಮಾನಸಿಕ ಹಾಗೂ ಆರ್ಥಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಈ ಬಗ್ಗೆ ಸೂಕ್ತ ನಿರ್ದೇಶನ ನೀಡಬೇಕು ಎಂದರು.
ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರಾದ ಬಿ.ಮಂಜಪ್ಪ, ಕೆ.ಉಮೇಶ್, ವಿ.ಮೋಹನ್, ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.
Protest demanding fulfillment of Gram Panchayat employees’ demands
Leave a comment