ಕೊಪ್ಪ: ಲಾರಿಯೊಂದನ್ನು ಖರೀದಿಸುವುದಾಗಿ ನಂಬಿಸಿ ಕರಾರು ಮಾಡಿಕೊಂಡು, ವಾಹನದ ಮೇಲಿದ್ದ ಲಕ್ಷಾಂತರ ರೂಪಾಯಿ ಸಾಲವನ್ನೂ ತೀರಿಸದೆ ಮುಂಗಡ ಹಣ ಹಾಗೂ ಭದ್ರತಾ ಚೆಕ್ಗಳನ್ನು ಕಸಿದು ವಂಚಿಸಿರುವ ಆರೋಪ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಬೆಳಕಿಗೆ ಬಂದಿದೆ.
ವಾಹನ ಮಾಲೀಕರಿಗೆ ನಂಬಿಕೆದ್ರೋಹವೆಸಗಿ ಕೋಟ್ಯಂತರ ರೂಪಾಯಿ ತಲೆನೋವು ತಂದಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯನ್ ಎಂಬುವರ ವಿರುದ್ಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ನ್ಯಾಯಾಲಯದ ಆದೇಶದಂತೆ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ನುಗ್ಗಿ ಗ್ರಾಮದ ನಿವಾಸಿ ಚಂದಿಲ್ ಕುಮಾರ್ ಎಂಬುವರು ಈ ಸಂಬಂಧ ನ್ಯಾಯಾಲಯದಲ್ಲಿ ಖಾಸಗಿ ದೂರು (ಪಿಸಿಆರ್) ದಾಖಲಿಸಿದ್ದರು. ದೂರಿನ ವಿವರಗಳ ಪ್ರಕಾರ, ಚಂದಿಲ್ ಕುಮಾರ್ ತಮ್ಮ ಒಡೆತನದ ಲಾರಿಯನ್ನು ಸತ್ಯನ್ ಅವರಿಗೆ 8 ಲಕ್ಷ ರೂಪಾಯಿಗೆ ಮಾರಾಟ ಮಾಡಲು 2024ರ ಫೆಬ್ರವರಿಯಲ್ಲಿ ವಾಹನ ಕರಾರು ಪತ್ರ ಮಾಡಿಕೊಂಡಿದ್ದರು.
ವಾಹನದ ಮೇಲಿದ್ದ ಶ್ರೀರಾಮ್ ಫೈನಾನ್ಸ್ ಸಾಲವನ್ನು ಸಂಪೂರ್ಣವಾಗಿ ತಾವೇ ಭರಿಸಿ, ಸಾಲವನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳುವುದಾಗಿ ಒಪ್ಪಿಕೊಂಡಿದ್ದ ಆರೋಪಿ, ನಮೂನೆ 29 ಮತ್ತು 30ಕ್ಕೆ ಸಹಿ ಪಡೆದು ಲಾರಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದ್ದ ಎನ್ನಲಾಗಿದೆ.
ಅಲ್ಲದೆ, ಮತ್ತೊಂದು ಪ್ರತ್ಯೇಕ ಒಪ್ಪಂದದಡಿ ನೀಡಬೇಕಿದ್ದ ಹಣದ ಪೈಕಿ ಒಂದು ಲಕ್ಷ ರೂಪಾಯಿಯನ್ನು ಮುಂಗಡವಾಗಿ ನೀಡಿ, ಭದ್ರತೆಗಾಗಿ ಚಂದಿಲ್ ಕುಮಾರ್ ಅವರಿಂದ ಬ್ಯಾಂಕಿನ ಮೂರು ಖಾಲಿ ಚೆಕ್ಗಳನ್ನು ಪಡೆದುಕೊಂಡಿದ್ದ. ಆದರೆ, ನಂತರದಲ್ಲಿ ‘ಫೈನಾನ್ಸ್ಗೆ ಸಾಲ ಕಟ್ಟುತ್ತೇನೆ’ ಎಂದು ನಂಬಿಸಿ ಆ ಒಂದು ಲಕ್ಷ ರೂಪಾಯಿಯನ್ನೂ ವಾಪಸ್ ಪಡೆದಿದ್ದಲ್ಲದೆ, ಕೊಟ್ಟಿದ್ದ ಚೆಕ್ಗಳನ್ನೂ ಹಿಂತಿರುಗಿಸದೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಲಾರಿಯನ್ನು ತನ್ನ ವಶದಲ್ಲೇ ಇಟ್ಟುಕೊಂಡು ಫೈನಾನ್ಸ್ಗೆ ಕಂತುಗಳನ್ನು ಪಾವತಿಸದ ಕಾರಣ, ಸಾಲ ಮರುಪಾವತಿಸುವಂತೆ ಸಂಸ್ಥೆಯಿಂದ ಮೂಲ ಮಾಲೀಕರಿಗೆ ನೋಟಿಸ್ ಬಂದಾಗಲೇ ಆರೋಪಿ ಎಸಗಿರುವ ವಂಚನೆ ಬಯಲಿಗೆ ಬಂದಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಈ ಗಂಭೀರ ಪ್ರಕರಣವನ್ನು ಪರಿಶೀಲಿಸಿದ ಘನ ನ್ಯಾಯಾಲಯದ ನಿರ್ದೇಶನದ ಮೇರೆಗೆ ಕೊಪ್ಪ ಪೊಲೀಸರು ಆರೋಪಿ ಸತ್ಯನ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
Fraud under the pretext of purchasing a lorry – criminal case registered.
Leave a comment