ಚಿಕ್ಕಮಗಳೂರು: ರಾಷ್ಟ್ರದ ಸುರಕ್ಷತೆ ಹಾಗೂ ದೇಶದ ಹಿತಾಸಕ್ತಿಗಾಗಿ ವೈಯಕ್ತಿಕ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲರೂ ಒಂದಾಗಬೇಕು ಎಂದು ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಕರೆ ನೀಡಿದರು.
ನಗರದಲ್ಲಿ ಸೋಮವಾರ ಟಿಪ್ಪು ಸುಲ್ತಾನ್ ಅವರ ಕಟೌಟ್ಗೆ ಪಾಕಿಸ್ತಾನದ ಹಾಡು ಜೋಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಪ್ರಕರಣದ ಹಿನ್ನೆಲೆಯಲ್ಲಿ ರಾಷ್ಟ್ರ ಸುರಕ್ಷಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಕ್ಷಿಣ ಭಾರತದಿಂದ ಹೊರಹೊಮ್ಮುವ ರಾಷ್ಟ್ರೀಯ ಏಕತೆಯ ಸಂದೇಶ ಇಡೀ ದೇಶವನ್ನು ತಲುಪಬೇಕು. ಉತ್ತರ ಮತ್ತು ದಕ್ಷಿಣ ಭಾರತ ಸೇರಿದಂತೆ ದೇಶದ ಎಲ್ಲ ಭಾಗಗಳ ಜನರಲ್ಲಿ ರಾಷ್ಟ್ರದ ಸುರಕ್ಷತೆ ಹಾಗೂ ರಾಷ್ಟ್ರೀಯ ಏಕತೆಯ ಭಾವನೆ ಬಲಪಡಿಸಬೇಕಿದೆ ಎಂದರು.
ಹಿಂದೂ ಸಮಾಜದ ಸಾಮಾಜಿಕ ಸಮಸ್ಯೆಗಳ ಕುರಿತು ಮಾತನಾಡಿದ ಅವರು, ಡಾ. ಬಿ.ಆರ್. ಅಂಬೇಡ್ಕರ್ ಅವರು ಹಿಂದೂ ಸಮಾಜದಲ್ಲಿದ್ದ ಅಸಮಾನತೆ ಹಾಗೂ ಸಾಮಾಜಿಕ ಅನ್ಯಾಯಗಳನ್ನು ಎತ್ತಿ ತೋರಿಸಿದ ಸಂದರ್ಭದಲ್ಲಿ, ಅವುಗಳನ್ನು ಆತ್ಮಾವಲೋಕನದಿಂದ ಸ್ವೀಕರಿಸಿ ಸುಧಾರಣೆ ಮಾಡಿಕೊಳ್ಳಬೇಕು ಎಂದು ಹೇಳಿದರು. ಅಂಬೇಡ್ಕರ್ ಅವರನ್ನು ಅವಮಾನಿಸುವ ಪ್ರಶ್ನೆಯೇ ಇಲ್ಲ; ಅವರು ತೋರಿಸಿಕೊಟ್ಟ ತಪ್ಪುಗಳನ್ನು ಸರಿಪಡಿಸುವುದು ಸಮಾಜದ ಜವಾಬ್ದಾರಿ ಎಂದರು.
ಎಲ್ಲ ವರ್ಗದ ಜನರನ್ನು ಒಗ್ಗೂಡಿಸುವ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಸಮಾನ ಅವಕಾಶ ಕಲ್ಪಿಸುವ ಪ್ರಯತ್ನ ನಡೆಯಬೇಕು ಎಂದು ಅವರು ಪ್ರತಿಪಾದಿಸಿದರು. ಕಾರ್ಯಕ್ರಮದಲ್ಲಿ ದಲಿತ ಸಂಘಟನೆಗಳು ಭಾಗವಹಿಸಿರುವುದನ್ನು ಸ್ವಾಗತಿಸಿದ ಅವರು, ಅಂಬೇಡ್ಕರ್ ಅವರ ವಿಚಾರಗಳನ್ನು ಸಮಗ್ರವಾಗಿ ಅರ್ಥೈಸಿಕೊಳ್ಳಬೇಕು ಎಂದರು.
ಮುಸ್ಲಿಂ ಸಮುದಾಯದ ಕುರಿತು ಮಾತನಾಡಿದ ಸೂಲಿಬೆಲೆ, ಡಾ. ಅಂಬೇಡ್ಕರ್ ಅವರ ಕೆಲವು ಬರಹಗಳಲ್ಲಿ ಮುಸ್ಲಿಂ ಸಮಾಜದ ಸಾಮಾಜಿಕ ಆಚರಣೆಗಳ ಕುರಿತು ವ್ಯಕ್ತವಾಗಿದ್ದ ಟೀಕೆಗಳನ್ನು ಉಲ್ಲೇಖಿಸಿದರು. ಇಂತಹ ವಿಚಾರಗಳ ಕುರಿತು ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರವಿಲ್ಲದೆ ಮುಕ್ತ ಚರ್ಚೆ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಮುಸ್ಲಿಂ ಸಮುದಾಯವನ್ನು ‘ಮತಬ್ಯಾಂಕ್’ ಆಗಿ ನೋಡುವ ರಾಜಕೀಯ ಮನೋಭಾವದ ವಿರುದ್ಧವೂ ಅವರು ಟೀಕಾ ಪ್ರಹಾರ ನಡೆಸಿದರು. ಯಾವುದೇ ಸಮುದಾಯದ ಸಾಮಾಜಿಕ ಸಮಸ್ಯೆಗಳನ್ನು ರಾಜಕೀಯ ಕಾರಣಗಳಿಂದ ಕಡೆಗಣಿಸಬಾರದು; ಬದಲಾಗಿ ಕಾನೂನುಬದ್ಧ ಮತ್ತು ಪ್ರಜಾಸತ್ತಾತ್ಮಕ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಬೇಕು ಎಂದರು.
ಟಿಪ್ಪು ಸುಲ್ತಾನ್ ಅವರ ಬೃಹತ್ ಕಟೌಟ್ಗೆ ಸಂಬಂಧಿಸಿದ ವಿಚಾರವನ್ನೂ ಪ್ರಸ್ತಾಪಿಸಿದ ಅವರು, ಇತಿಹಾಸದ ವ್ಯಕ್ತಿಗಳು ಹಾಗೂ ಘಟನೆಗಳ ಕುರಿತು ಸಮಾಜದಲ್ಲಿ ಭಿನ್ನಾಭಿಪ್ರಾಯಗಳಿರುವುದು ಸಹಜ. ಆದರೆ ಇಂತಹ ವಿಚಾರಗಳು ಹಿಂಸೆ ಅಥವಾ ದ್ವೇಷಕ್ಕೆ ಕಾರಣವಾಗದಂತೆ ಚರ್ಚೆಯಾಗಬೇಕು ಎಂದು ಹೇಳಿದರು.
ದತ್ತಪೀಠದ ಹೋರಾಟ ಮತ್ತು ರಾಮಮಂದಿರದ ವಿಚಾರಗಳನ್ನು ಪ್ರಸ್ತಾಪಿಸಿದ ಅವರು, ಮುಂದಿನ ದಿನಗಳಲ್ಲಿ ಮಥುರಾ ಮಂದಿರದ ವಿಚಾರವೂ ಪ್ರಮುಖವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಾಕಿಸ್ತಾನ ಪರ ಘೋಷಣೆಗಳು ಅಥವಾ ಹಾಡುಗಳ ಮೂಲಕ ಸಂಭ್ರಮಿಸುವವರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ ಅವರು, ದೇಶದ ಸಾರ್ವಭೌಮತೆ ಮತ್ತು ಭದ್ರತೆಯ ವಿಚಾರದಲ್ಲಿ ಭಾರತೀಯರು ಒಗ್ಗಟ್ಟಿನಿಂದ ನಿಲ್ಲಬೇಕು ಎಂದರು. ಪಾಕ್ ಆಕ್ರಮಿತ ಕಾಶ್ಮೀರ (PoK) ಹಾಗೂ ಬಲೂಚಿಸ್ತಾನದ ಪರಿಸ್ಥಿತಿಯನ್ನೂ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.
ಮಹಿಳೆಯರ ಸುರಕ್ಷತೆ ಕುರಿತು ಮಾತನಾಡಿದ ಅವರು, ಜಿಮ್ ಸೇರಿದಂತೆ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿರುವ ಘಟನೆಗಳು ನಡೆದಿದ್ದರೆ, ಅವುಗಳ ಕುರಿತು ಕಾನೂನುಬದ್ಧ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ನಿರ್ದಿಷ್ಟ ವ್ಯಕ್ತಿಯ ತಪ್ಪನ್ನು ಆಧರಿಸಿ ಇಡೀ ಸಮುದಾಯವನ್ನು ದೂಷಿಸುವುದು ಸರಿಯಲ್ಲ ಎಂದರು.
ಧರ್ಮ, ಜಾತಿ ಅಥವಾ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ರಾಷ್ಟ್ರದ ಹಿತಾಸಕ್ತಿ ಮತ್ತು ಸುರಕ್ಷತೆಯ ವಿಚಾರದಲ್ಲಿ ಎಲ್ಲರೂ ಒಂದಾಗಬೇಕು. ಚಿಕ್ಕಮಗಳೂರಿನಿಂದ ಹೊರಹೊಮ್ಮುವ ಈ ಸಂದೇಶ ಇಡೀ ನಾಡಿಗೆ ಮತ್ತು ದೇಶಕ್ಕೆ ತಲುಪಬೇಕು ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.
ನಗರದ ಬಸನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಓಂಕಾರೇಶ್ವರ ದೇವಸ್ಥಾನದ ಬಳಿ ನಡೆದ ಬಹಿರಂಗ ಸಭೆಯ ಬಳಿಕ ಪ್ರತಿಭಟನಾಕಾರರು ಹನುಮಂತಪ್ಪ ವೃತ್ತದ ಮೂಲಕ ಎಐಜಿ ರಸ್ತೆಯಲ್ಲಿ ಮೆರವಣಿಗೆ ನಡೆಸಿ ತೆರಳಿದರು. ಬಳಿಕ ಮೆರವಣಿಗೆ ಶಾಂತಿಯುತವಾಗಿ ಅಂತ್ಯಗೊಂಡಿತು.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ತಾಲ್ಲೂಕು ಕಚೇರಿ ಸುತ್ತಮುತ್ತ ಕಳೆದ ರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಸಂತೋಷ್ ಕೋಟ್ಯಾನ್, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಪುಷ್ಪ, ರಾಜು, ನರೇಂದ್ರ, ಕೋಟೆ ಶ್ಯಾಮ್, ಶ್ರೀರಾಮ ಸೇನೆಯ ರಾಜ್ಯ ಕಾರ್ಯದರ್ಶಿ ರಂಜಿತ್ ಶೆಟ್ಟಿ, ರವೀಂದ್ರ ಬೆಳವಾಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
‘Everyone must unite for the security of the nation’
Leave a comment