ಎನ್.ಆರ್. ಪುರ: ಮನೆಯ ಹಂಚು ತೆಗೆದು ಒಳನುಗ್ಗಿ, ಮಲಗಿದ್ದ ಮಹಿಳೆಯ ಕೊರಳಿನಿಂದ ಮಾಂಗಲ್ಯ ಸರ ಎಗರಿಸಿದ್ದ ಆರೋಪಿಯನ್ನು ಎನ್.ಆರ್.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ₹11.30 ಲಕ್ಷ ಮೌಲ್ಯದ 71 ಗ್ರಾಂ ಚಿನ್ನಾಭರಣ, ಚಿನ್ನದ ಗಟ್ಟಿ ಹಾಗೂ ಕೃತ್ಯಕ್ಕೆ ಬಳಸಿದ್ದ ಸ್ಕೂಟರ್ ಅನ್ನು ವಶಪಡಿಸಿಕೊಂಡಿದ್ದಾರೆ.
ಸುಗ್ಗಪ್ಪನಮಠ, ನಾಗ್ಲಾಪುರ ಗ್ರಾಮದ ರಮೇಶ್ (55) ಬಂಧಿತ ಆರೋಪಿಯಾಗಿದ್ದಾನೆ. ಆಗಸ್ಟ್ 13ರಂದು ಮಧ್ಯರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ಮೇಲ್ಮಾವಣಿಯ ಹಂಚು ತೆಗೆದು ಒಳನುಗ್ಗಿದ್ದ ಈತ, ಮಹಿಳೆಯ ಕೊರಳಿನಲ್ಲಿದ್ದ ಸುಮಾರು ₹1.70 ಲಕ್ಷ ಮೌಲ್ಯದ 17 ಗ್ರಾಂ ತೂಕದ ಚಿನ್ನದ ತಾಳಿ ಸರವನ್ನು ಕಿತ್ತುಕೊಂಡು ಮನೆಯ ಹಿಂಬಾಗಿಲಿನಿಂದ ಪರಾರಿಯಾಗಿದ್ದನು. ಈ ಸಂಬಂಧ ಎನ್.ಆರ್. ಪುರ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಬೆನ್ನತ್ತಿದ ಪೊಲೀಸರು ತಾಂತ್ರಿಕ ವಿಭಾಗದ ನೆರವಿನೊಂದಿಗೆ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಈತ ಈ ಹಿಂದೆ ಇದೇ ಫಿರ್ಯಾದುದಾರರ ಮನೆಯಲ್ಲಿ ಚಿನ್ನ ಕಳ್ಳತನ ಮಾಡಿದ್ದಲ್ಲದೆ, ಸಿಗುವಾನಿಯ ಜಾನಕಿ ಎಂಬುವವರ ಮನೆಯಲ್ಲೂ ಕಳವು ಮಾಡಿರುವುದು ಬಯಲಾಗಿದೆ. ಈ ಮೂಲಕ 2025ರ ಹಳೆಯ ಕಳ್ಳತನ ಪ್ರಕರಣವೂ ಸೇರಿದಂತೆ ಎರಡು ಪ್ರಮುಖ ಪ್ರಕರಣಗಳು ಪತ್ತೆಯಾಗಿವೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಎಸ್ಪಿ, ಕೊಪ್ಪ ಡಿವೈಎಸ್‌ಪಿ ಎಂ.ಜೆ. ಬಾಲಾಜಿ ಸಿಂಗ್ ಹಾಗೂ ಸಿಪಿಐ ಗುರುದತ್ ಕಾಮತ್ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ನೂತನ್ ಡಿ.ಇ., ಜ್ಯೋತಿ ಎನ್.ಎ. ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕಳ್ಳತನ ಪ್ರಕರಣವನ್ನು ಭೇದಿಸಿದ ಪೊಲೀಸ್ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೂಕ್ತ ಬಹುಮಾನ ಘೋಷಿಸಿ ಶ್ಲಾಘಿಸಿದ್ದಾರೆ.
71 grams of gold ornaments worth ₹11.30 lakh seized from the accused
Leave a comment