ಚಿಕ್ಕಮಗಳೂರು: ನಿವೇಶನ ರಹಿತ ಬಡ ಕೂಲಿ ಕಾರ್ಮಿಕರಿಗೆ ನಿವೇಶನ ಒದಗಿಸುವುದು, ಎಸ್ಐಆರ್ ಪರಿಷ್ಕರಣೆಯಲ್ಲಿನ ಲೋಪ ಸರಿಪಡಿಸುವುದು ಹಾಗೂ ಪರಿಸರ ಸೂಕ್ಷ್ಮ ವಲಯದ (ಇಎಸ್ಎ) ವ್ಯಾಪ್ತಿಯಿಂದ ಜನವಸತಿ ಪ್ರದೇಶ ಮತ್ತು ರೈತರ ಭೂಮಿಗಳನ್ನು ಹೊರಗಿಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ಚಿಕ್ಕಮಗಳೂರು ತಾಲ್ಲೂಕು ಮಂಡಳಿ ವತಿಯಿಂದ ಆ.24ರಿಂದ 31ರವರೆಗೆ ವಿವಿಧ ಹೋರಾಟಗಳನ್ನು ಹಮ್ಮಿಕೊಳ್ಳಲಾಗಿದೆ.
ಆ.12ರಂದು ನಡೆದ ಸಿಪಿಐ ತಾಲ್ಲೂಕು ಸಮಿತಿ ಸಭೆಯಲ್ಲಿ ತಾಲ್ಲೂಕಿನ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಿ ಈ ಹೋರಾಟದ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ತಾಲ್ಲೂಕು ಕಾರ್ಯದರ್ಶಿ ಕೆರೆಮಕ್ಕಿ ರಮೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಸುಮಾರು 20 ವರ್ಷಗಳಿಂದ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿರುವ ಬಡ ಕೂಲಿ ಕಾರ್ಮಿಕರು ಹಾಗೂ ನಿವೇಶನ ರಹಿತರಿಗೆ ಅರಣ್ಯ ಮತ್ತು ಕಂದಾಯ ಇಲಾಖೆಯ ಸಮಸ್ಯೆಗಳಿಂದಾಗಿ ನಿವೇಶನ ನೀಡಲು ಸಾಧ್ಯವಾಗಿಲ್ಲ. ಗ್ರಾಮ ಪಂಚಾಯಿತಿಗಳಲ್ಲಿ ಆಶ್ರಯ ನಿವೇಶನಕ್ಕಾಗಿ ಕಾಯ್ದಿರಿಸಿರುವ ಜಾಗವನ್ನು ಅರಣ್ಯ ಇಲಾಖೆ ಹಾಗೂ ಖಾಸಗಿ ಮಾಲೀಕರು ಅತಿಕ್ರಮಿಸಿಕೊಂಡಿರುವುದರಿಂದ ನಿವೇಶನ ನೀಡಲು ಜಾಗದ ಕೊರತೆ ಉಂಟಾಗಿದೆ. ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು ಎಂದು ಅವರು ಒತ್ತಾಯಿಸಿದರು.
ಎಸ್ಐಆರ್ ಪರಿಷ್ಕರಣೆ ಪ್ರಕ್ರಿಯೆಯಲ್ಲೂ ಹಲವು ಲೋಪಗಳಾಗಿದ್ದು, ನೈಜ ಮತದಾರರ ಹೆಸರುಗಳು ಮತದಾರರ ಪಟ್ಟಿಯಿಂದ ತಿರಸ್ಕೃತಗೊಂಡಿವೆ ಎಂದು ಆರೋಪಿಸಿದ ಅವರು, ತಿರಸ್ಕೃತ ಮತದಾರರ ಮನೆಗಳಿಗೆ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿ ಅರ್ಹರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿದರು.
ಅರಣ್ಯ ಮತ್ತು ಕಂದಾಯ ಇಲಾಖೆ ನಡೆಸುತ್ತಿರುವ ಜಂಟಿ ಸರ್ವೆಯನ್ನು ಕೂಡಲೇ ಅಂತಿಮಗೊಳಿಸಬೇಕು. ಪರಿಸರ ಸೂಕ್ಷ್ಮ ವಲಯದ ಪ್ರಸ್ತಾವಿತ ವ್ಯಾಪ್ತಿಯಿಂದ ಜನವಸತಿ ಪ್ರದೇಶಗಳು ಹಾಗೂ ರೈತರ ಕೃಷಿ ಭೂಮಿಗಳನ್ನು ಹೊರಗಿಡಬೇಕು ಎಂದು ಸಿಪಿಐ ಒತ್ತಾಯಿಸಿದೆ.
ಈ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆ.24ರಿಂದ 31ರವರೆಗೆ ಸ್ಥಳೀಯ ಮಟ್ಟದಲ್ಲಿ ಕಾಲ್ನಡಿಗೆ ಜಾಥಾ, ಪ್ರತಿಭಟನೆ ಹಾಗೂ ಗ್ರಾಮ ಪಂಚಾಯಿತಿ ಮುತ್ತಿಗೆ ಸೇರಿದಂತೆ ವಿವಿಧ ಹೋರಾಟಗಳನ್ನು ನಡೆಸಲಾಗುವುದು. ಆ.27ರಂದು ಗುರುವಾರ ಸಂಜೆ ಚಿಕ್ಕಮಗಳೂರು ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಲು ಉದ್ದೇಶಿಸಲಾಗಿದೆ ಎಂದು ರಮೇಶ್ ತಿಳಿಸಿದರು.
ಇದೇ ವೇಳೆ, ವಿದ್ಯಾರ್ಥಿಗಳು ಹಾಗೂ ಯುವಜನರ ಮೇಲಿನ ಹಲ್ಲೆ, ಮಹಿಳೆಯರ ರಕ್ಷಣೆಯಲ್ಲಿ ಕೇಂದ್ರ ಸರ್ಕಾರದ ವೈಫಲ್ಯ, ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಒದಗಿಸುವಲ್ಲಿ ವಿಫಲತೆ ಹಾಗೂ ರಸಗೊಬ್ಬರಗಳ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿರುವುದು ಸೇರಿದಂತೆ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಸೆ.1ರಂದು ದೆಹಲಿಯ ಜಂತರ್ ಮಂತರ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ದೇಶದ ವಿವಿಧೆಡೆಯಿಂದ ಪಕ್ಷದ ಕಾರ್ಯಕರ್ತರು ಹಾಗೂ ಹಿತೈಷಿಗಳು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದು, ರಾಜ್ಯ, ಜಿಲ್ಲೆ ಮತ್ತು ತಾಲ್ಲೂಕಿನಿಂದಲೂ ಹಲವಾರು ಕಾರ್ಯಕರ್ತರು ತೆರಳಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಿಪಿಐ ಜಿಲ್ಲಾ ಮಂಡಳಿ ಸದಸ್ಯರಾದ ವಸಂತ್ ಕುಮಾರ್ ಸಿ., ಜಯಕುಮಾರ ಎ. ಹಾಗೂ ತಾಲ್ಲೂಕು ಸಹ ಕಾರ್ಯದರ್ಶಿ ಮಂಜೇಗೌಡ ಸಿ.ಸಿ. ಉಪಸ್ಥಿತರಿದ್ದರು.
CPI protests demanding fulfillment of various demands
Leave a comment