ಚಿಕ್ಕಮಗಳೂರು: ಜಿಲ್ಲೆಯ ಕಡೂರು ಸಮೀಪ ಯುವಕ-ಯುವತಿ ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ. ಮೃತರನ್ನು ಕುಣಿಗಲ್ ಮೂಲದ ರೋಹಿಣಿ ಹಾಗೂ ಬೆಂಗಳೂರು ಮೂಲದ ನವೀನ್ ಎಂದು ಗುರುತಿಸಲಾಗಿದ್ದು, ಆತ್ಮಹತ್ಯೆಗೂ ಮುನ್ನ ಇಬ್ಬರೂ ಡೆತ್ನೋಟ್ ಬರೆದಿಟ್ಟು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಇಬ್ಬರೂ ರಕ್ತಸಂಬಂಧ ಹೊಂದಿಲ್ಲದಿದ್ದರೂ ಅಕ್ಕ-ತಮ್ಮನ ರೀತಿಯಲ್ಲಿ ಅನ್ಯೋನ್ಯವಾಗಿದ್ದರು ಎನ್ನಲಾಗಿದ್ದು, ಅವರ ಒಡನಾಟಕ್ಕೆ ಸಂಬಂಧಿಕರು ಹಾಗೂ ಸ್ನೇಹಿತರು ಪ್ರೀತಿಯ ಸಂಬಂಧದ ಬಣ್ಣ ನೀಡಿದ್ದರಿಂದ ಮನನೊಂದು ಈ ನಿರ್ಧಾರ ಕೈಗೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಮೃತರು ಬರೆದಿಟ್ಟಿದ್ದಾರೆ ಎನ್ನಲಾದ ಡೆತ್ನೋಟ್ನಲ್ಲಿ ತಮ್ಮ ಸಂಬಂಧಕ್ಕೆ ಕಳಂಕ ಹಚ್ಚದಂತೆ ಮನವಿ ಮಾಡಿದ್ದಾರೆ. ತಾವು ರಕ್ತಸಂಬಂಧಿಗಳಲ್ಲದಿದ್ದರೂ ಯಾವುದೇ ಭೇದಭಾವವಿಲ್ಲದೆ ಸಹೋದರ-ಸಹೋದರಿಯಂತೆ ಇದ್ದೆವು. ಆದರೆ ತಮ್ಮ ಸಂಬಂಧವನ್ನು ತಪ್ಪಾಗಿ ಅರ್ಥೈಸಿಕೊಂಡು ಕೆಲವರು ಮಾತನಾಡುತ್ತಿದ್ದರಿಂದ ಮಾನಸಿಕವಾಗಿ ನೊಂದಿದ್ದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಮನೆಯಲ್ಲಿಯೂ ತಮ್ಮ ಸಂಬಂಧಕ್ಕೆ ಬೆಂಬಲ ಸಿಗಲಿಲ್ಲ. ತಮ್ಮ ಅನ್ಯೋನ್ಯತೆಯನ್ನು ಕೆಲವರು ಸಹಿಸದೆ ತಪ್ಪಾಗಿ ಅರ್ಥೈಸಿಕೊಂಡಿದ್ದರಿಂದ ಒಟ್ಟಿಗೆ ಬದುಕಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಒಟ್ಟಿಗೆ ಸಾಯಲು ನಿರ್ಧರಿಸಿರುವುದಾಗಿ ಡೆತ್ನೋಟ್ನಲ್ಲಿ ಬರೆದಿದ್ದಾರೆ ಎನ್ನಲಾಗಿದೆ.
ಇಬ್ಬರೂ ಮೃತಪಟ್ಟ ಬಳಿಕ ತಮ್ಮ ಅಂತ್ಯಕ್ರಿಯೆಯನ್ನು ಒಂದೇ ಸ್ಥಳದಲ್ಲಿ ಪಕ್ಕಪಕ್ಕದಲ್ಲೇ ನಡೆಸಬೇಕು. ಇದರಿಂದ ತಮಗೆ ನೆಮ್ಮದಿ ಸಿಗುತ್ತದೆ ಎಂಬ ಕೊನೆಯ ಮನವಿಯನ್ನೂ ಡೆತ್ನೋಟ್ನಲ್ಲಿ ದಾಖಲಿಸಿರುವುದಾಗಿ ತಿಳಿದುಬಂದಿದೆ.
ಬೆಳೆದು ನಿಂತಿದ್ದ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಘಟನೆ ಸಂಬಂಧ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡೆತ್ನೋಟ್ ಸೇರಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
A young man and woman hurt by slander commit suicide by getting hit by a train
Leave a comment