ಚಿಕ್ಕಮಗಳೂರು: ₹500 ಮುಖಬೆಲೆಯ ನೋಟುಗಳಿಗೆ ಬದಲಾಗಿ ₹100 ಮುಖಬೆಲೆಯ ನೋಟುಗಳಲ್ಲಿ ಹೆಚ್ಚಿನ ಹಣ ನೀಡುವುದಾಗಿ ನಂಬಿಸಿ ₹12 ಲಕ್ಷ ನಗದು ಪಡೆದು ಪರಾರಿಯಾದ ಆರೋಪದಡಿ ಬೀರೂರು ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದ ಸಿವಿಲ್ ಕಂಟ್ರಾಕ್ಟರ್ ಸಂತೋಷ್ ಚಬನೂರು ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಐದು ದಿನಗಳ ಹಿಂದೆ ತಮ್ಮ ಸಂಬಂಧಿಕ ನೀಲಕಂಠ ಚಬನೂರು ಅವರ ಮೂಲಕ ಸಂತೋಷ್ ಎಂಬಾತನ ಪರಿಚಯವಾಗಿದ್ದು, ₹500 ಮುಖಬೆಲೆಯ ನೋಟುಗಳನ್ನು ನೀಡಿದರೆ ₹100 ಮುಖಬೆಲೆಯ ನೋಟುಗಳಲ್ಲಿ ಹೆಚ್ಚಿನ ಹಣ ನೀಡುವುದಾಗಿ ಆಮಿಷವೊಡ್ಡಿದ್ದಾನೆ. ತಮ್ಮ ಬಳಿ ಇದ್ದ ₹12 ಲಕ್ಷಕ್ಕೆ ₹20 ಲಕ್ಷ ನೀಡುವುದಾಗಿ ಭರವಸೆ ನೀಡಿದ್ದಾನೆ ಎನ್ನಲಾಗಿದೆ.
ಇದನ್ನು ನಂಬಿದ ಸಂತೋಷ್ ಚಬನೂರು ಅವರು ಸ್ನೇಹಿತ ಸುರೇಶ್ ಪಾಟೀಲ ಅವರೊಂದಿಗೆ ₹12 ಲಕ್ಷ ನಗದು ತೆಗೆದುಕೊಂಡು ಆಗಸ್ಟ್ 1ರಂದು ಬೀರೂರಿಗೆ ಬಂದಿದ್ದಾರೆ. ಬೀರೂರು ಬಸ್ ನಿಲ್ದಾಣದ ಬಳಿ ಸಂತೋಷ್ ಎಂಬಾತ ಕಾರಿಗೆ ಹತ್ತಿಕೊಂಡು, ತರೀಕೆರೆ ಕಡೆ ಹೊಸ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋರಿತಿಮ್ಮನಹಳ್ಳಿ ಗ್ರಾಮದ ಎರಡನೇ ಸೇತುವೆ ಬಳಿ ಕರೆದುಕೊಂಡು ಹೋಗಿದ್ದಾನೆ.
ಈ ವೇಳೆ ಹಿಂಬದಿಯಿಂದ ಬಂದ ಬಿಳಿ ಬಣ್ಣದ ಬೊಲೆರೊ ಜೀಪಿನಲ್ಲಿದ್ದ ಐವರು ವ್ಯಕ್ತಿಗಳನ್ನು ತನ್ನ ಸ್ನೇಹಿತರು ಎಂದು ಪರಿಚಯಿಸಿದ ಸಂತೋಷ್, ಅವರೊಂದಿಗೆ ಸೇರಿ ₹12 ಲಕ್ಷ ನಗದನ್ನು ಪಡೆದುಕೊಂಡಿದ್ದಾರೆ. ಬಳಿಕ ₹20 ಲಕ್ಷ ಮೌಲ್ಯದ ₹100 ಮುಖಬೆಲೆಯ ನೋಟುಗಳನ್ನು ತಂದುಕೊಡುವುದಾಗಿ ಹೇಳಿ ಅಲ್ಲಿಂದ ತೆರಳಿದ್ದಾರೆ.
ಸಂಜೆಯಾದರೂ ಅವರು ಮರಳಿ ಬಾರದೇ ಇದ್ದಾಗ ಸಂತೋಷ್‌ಗೆ ಕರೆ ಮಾಡಿದರೂ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ತಾವು ಮೋಸ ಹೋಗಿರುವುದು ತಿಳಿದು 112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಸಂಬಂಧಿಕರು ಹಾಗೂ ಸ್ನೇಹಿತರೊಂದಿಗೆ ಚರ್ಚಿಸಿ ಆಗಸ್ಟ್ 4ರಂದು ಬೀರೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಸಂತೋಷ್ ಹಾಗೂ ಆತನ ಐವರು ಸಹಚರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 318(4) ಅಡಿ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
₹12 lakh fraud on the pretext of exchanging currency in Birur
Leave a comment