ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ವರುಣನ ಆರ್ಭಟ ಮುಂದುವರಿದಿದೆ. ಭಾರಿ ಮಳೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹಾಗೂ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದೆ.
ನಾಳೆ ಅಂದರೆ ಜುಲೈ 8, 2026ರ ಬುಧವಾರದಂದು ಜಿಲ್ಲೆಯ ಪ್ರಮುಖ 5 ತಾಲೂಕುಗಳಲ್ಲಿ ಶಾಲೆ ಮತ್ತು ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ.
ಜಿಲ್ಲಾಧಿಕಾರಿಗಳ ಅಧಿಕೃತ ಆದೇಶದಂತೆ, ಕೊಪ್ಪ, ಕಳಸ, ಮೂಡಿಗೆರೆ, ಶೃಂಗೇರಿ ಮತ್ತು ನರಸಿಂಹರಾಜಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ನೀಡಲಾಗಿದೆ.
ಇದರೊಂದಿಗೆ, ಚಿಕ್ಕಮಗಳೂರು ತಾಲೂಕಿನ ಆವತಿ, ಖಾಂಡ್ಯ, ಜಾಗರ, ಆಲ್ಲೂರು ಮತ್ತು ವಸ್ತಾರೆ ಹೋಬಳಿಗಳ ಅಂಗನವಾಡಿ ಕೇಂದ್ರಗಳಿಗೂ ರಜೆ ಅನ್ವಯಿಸಲಿದೆ ಎಂದು ತಿಳಿಸಲಾಗಿದೆ.
ವಿಪತ್ತು ನಿರ್ವಹಣಾ ಕಾಯ್ದೆಯಡಿ ಈ ಆದೇಶ ಹೊರಡಿಸಲಾಗಿದ್ದು, ಮಳೆಯ ಕಾರಣದಿಂದ ಪಠ್ಯಕ್ರಮದಲ್ಲಿ ಉಂಟಾಗುವ ಹಿನ್ನಡೆಯನ್ನು ಮುಂದಿನ ಸಾರ್ವಜನಿಕ ರಜಾ ದಿನಗಳಲ್ಲಿ ಸರಿದೂಗಿಸಲು ಶಾಲೆಗಳಿಗೆ ಸೂಚನೆ ನೀಡಲಾಗಿದೆ.
ಮಳೆಯ ತೀವ್ರತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಪೋಷಕರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
Holiday for schools and anganwadis in 5 taluks of the district
Leave a comment