ಮೂಡಿಗೆರೆ: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಕೊನೆಗೂ ಮಳೆಗಾಲದ ದರ್ಶನವಾಗಿದ್ದು, ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಒಂದೆಡೆ ಆತಂಕ, ಮತ್ತೊಂದೆಡೆ ಹರ್ಷದ ವಾತಾವರಣ ನಿರ್ಮಾಣವಾಗಿದೆ. ಮಳೆಗಾಲ ಆರಂಭವಾಗಿ ತಿಂಗಳು ಕಳೆದರೂ ನಿರೀಕ್ಷಿತ ಪ್ರಮಾಣದಲ್ಲಿ ಬಾರದ ವರುಣ, ಈಗ ತಡವಾಗಿ ಅಬ್ಬರಿಸಲು ಶುರು ಮಾಡಿದ್ದಾನೆ.
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಾಳೂರು, ಬಣಕಲ್ ಹಾಗೂ ಚಾರ್ಮಾಡಿ ಘಾಟ್ ತಪ್ಪಲು ಪ್ರದೇಶಗಳಲ್ಲಿ ನಿನ್ನೆ ಮಧ್ಯಾಹ್ನದಿಂದ ಬೆಳಗ್ಗಿನವರೆಗೂ ಎಡೆಬಿಡದೆ ಸುರಿಯುತ್ತಿರುವ ಭಾರೀ ಗಾಳಿ-ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ.
ವಿಶೇಷವಾಗಿ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ದಟ್ಟ ಮಂಜು ಕವಿದಿದ್ದು, ವಾಹನ ಸವಾರರಿಗೆ ರಸ್ತೆ ಗೋಚರತೆ ಕಡಿಮೆಯಾಗಿದೆ. ಇನ್ನು ಜೋರಾದ ಗಾಳಿಯೊಂದಿಗೆ ಸುರಿಯುತ್ತಿರುವ ಮಳೆಯಿಂದಾಗಿ ಮಲೆನಾಡಿನ ಹಲವಾರು ಕುಗ್ರಾಮಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಕತ್ತಲಲ್ಲಿ ಮುಳುಗಿವೆ. ತಡವಾಗಿ ಆರಂಭವಾಗಿರುವ ಈ ಮಳೆಯ ಅಬ್ಬರ ಇನ್ಯಾವ ರೀತಿಯ ಅನಾಹುತಗಳನ್ನು ಸೃಷ್ಟಿಸುತ್ತದೋ ಎಂಬ ಆತಂಕ ಈಗ ಮಲೆನಾಡಿಗರನ್ನು ಕಾಡಲಾರಂಭಿಸಿದೆ.
ಈ ನಡುವೆಯೂ, ಮಲೆನಾಡಿನ ಪ್ರಕೃತಿ ಸೌಂದರ್ಯಕ್ಕೆ ಈ ಮಳೆ ಹೊಸ ಕಳೆ ತಂದಿದೆ. ಭಾರೀ ಮಳೆಗೆ ಮಲೆನಾಡಿನ ಹಳ್ಳ-ಕೊಳ್ಳಗಳು ಮೈದುಂಬಿ ಉಕ್ಕಿ ಹರಿಯುತ್ತಿದ್ದು, ಮೂಡಿಗೆರೆ ತಾಲೂಕಿನ ಕೋಗಿಲೆ ಗ್ರಾಮದ ‘ಹಬ್ಬಿ ಹಳ್ಳ’ ಭೋರ್ಗರೆಯುತ್ತಾ ಹರಿಯುತ್ತಿರುವ ದೃಶ್ಯ ನಯನ ಮನೋಹರವಾಗಿದೆ.
Heavy rain in the Malnad region of the coffee country
Leave a comment