ಚಿಕ್ಕಮಗಳೂರು: ಇಂದಿನ ಸಮಾಜದಲ್ಲಿ ಮಾದಕ ದ್ರವ್ಯಗಳ ಹಾವಳಿ ಹೆಚ್ಚಾಗುತ್ತಿದ್ದು, ಇದು ಯುವ ಪೀಳಿಗೆಯ ಭವಿಷ್ಯ ಹಾಗೂ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತಿದೆ. ಯುವಕರು ಇಂತಹ ದುಶ್ಚಟಗಳಿಂದ ದೂರವಿದ್ದು, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅವರು ಹೇಳಿದರು.
ನಗರದ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ‘ಅಂತಾರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನ’ದ ಅಂಗವಾಗಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾದಕ ದ್ರವ್ಯ ಎಂದರೆ ಕೇವಲ ತಂಬಾಕು ಅಥವಾ ಸಾಂಪ್ರದಾಯಿಕ ವಸ್ತುಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಇಂದು ಮಾರುಕಟ್ಟೆಗೆ ಅಪಾಯಕಾರಿ ಸಿಂಥೆಟಿಕ್ ಮಾದಕ ದ್ರವ್ಯಗಳು ಲಗ್ಗೆ ಇಡುತ್ತಿವೆ. ಇದು ಅತ್ಯಂತ ಸವಾಲಿನ ವಿಷಯವಾಗಿದ್ದು, ಸಮಾಜಕ್ಕೆ ಮತ್ತು ವಿಶೇಷವಾಗಿ ಯುವ ಜನತೆಗೆ ಭಾರಿ ಕಂಟಕವಾಗಿ ಪರಿಣಮಿಸಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಡಿಮೆ ವಯಸ್ಸಿನ ಮಕ್ಕಳಲ್ಲಿ ಯೋಚನಾ ಶಕ್ತಿ ಮತ್ತು ಸೂಕ್ಷ್ಮತೆ ಹೆಚ್ಚಿರುವುದರಿಂದ, ಅವರು ಇಂತಹ ಜಾಲಗಳಿಗೆ ಸುಲಭವಾಗಿ ಸಿಲುಕುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಪೋಷಕರು, ಶಾಲಾ-ಕಾಲೇಜುಗಳು ಹಾಗೂ ಸುತ್ತಮುತ್ತಲಿನ ನೆರೆಹೊರೆಯವರು ಎಚ್ಚರಿಕೆಯಿಂದ ಇರಬೇಕು. ಈ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.
ಮಾದಕ ದ್ರವ್ಯ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಪೊಲೀಸ್ ಇಲಾಖೆಯು ಶಾಲಾ-ಕಾಲೇಜುಗಳು ಮತ್ತು ಬಡಾವಣೆಗಳಲ್ಲಿ ನಿರಂತರವಾಗಿ ಹತ್ತು ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಸಾರ್ವಜನಿಕರು ಇದಕ್ಕೆ ಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ ಮಾತನಾಡಿ, ಒಂದು ದೇಶವನ್ನು ಹಾಳು ಮಾಡಲು ಅಥವಾ ಸಂಪೂರ್ಣವಾಗಿ ನಾಶ ಮಾಡಲು ಯುದ್ಧ ಸಾರಿ, ಬಾಂಬ್ ದಾಳಿ ನಡೆಸುವ ಅವಶ್ಯಕತೆಯೇ ಇಲ್ಲ. ಯುವ ಪೀಳಿಗೆಗೆ ಮಾದಕ ವಸ್ತುಗಳನ್ನು ತಲುಪಿಸಿದರೆ ಸಾಕು, ಇಡೀ ದೇಶವೇ ನಾಶವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಯುವಜನತೆ ಒಮ್ಮೆ ಮಾದಕ ದ್ರವ್ಯಗಳ ದಾಸರಾದರೆ, ಅವರಲ್ಲಿ ಪ್ರಶ್ನಿಸುವ ಮನೋಭಾವ ಮತ್ತು ಆಲೋಚನಾ ಶಕ್ತಿ ಸಂಪೂರ್ಣವಾಗಿ ನಶಿಸಿ ಹೋಗುತ್ತದೆ. ದೇಶವನ್ನು ಇಂತಹ ದುಸ್ಥಿತಿಗೆ ತಳ್ಳಲು ದೇಶ ವಿರೋಧಿ ಶಕ್ತಿಗಳು ನಿರಂತರವಾಗಿ ಸಂಚು ರೂಪಿಸುತ್ತಿದ್ದು, ಯುವ ಜನರನ್ನು ಗುರಿಯಾಗಿಸಿಕೊಂಡು ಮಾದಕ ಜಾಲವನ್ನು ಹರಡುತ್ತಿವೆ ಎಂದು ಅವರು ಎಚ್ಚರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಮಾತನಾಡಿ, ದೇಶದಲ್ಲಿ ಮಾದಕ ದ್ರವ್ಯಗಳ ಬಳಕೆ ಮತ್ತು ಜಾಲ ಅತ್ಯಂತ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಯಾರು ಈ ಮಾದಕ ದ್ರವ್ಯಗಳನ್ನು ಬಳಸುತ್ತಾರೋ, ಅವರೆಲ್ಲರೂ ನಮ್ಮ ಪೊಲೀಸ್ ಇಲಾಖೆಯ ‘ಕ್ಲೈಂಟ್’ಗಳಾಗುತ್ತಾರೆ’ ಎಂದು ಎಚ್ಚರಿಕೆ ನೀಡಿದರು.
Let the youth take the lead in building a drug-free society.
Leave a comment