Home namma chikmagalur chikamagalur ಕುಡಿಯುವ ನೀರು-ಜಾನುವಾರು ಮೇವಿಗೆ ಕೊರತೆಯಾಗದಂತೆ ಕ್ರಮಕ್ಕೆ ಸೂಚನೆ
chikamagalurHomeLatest Newsnamma chikmagalur

ಕುಡಿಯುವ ನೀರು-ಜಾನುವಾರು ಮೇವಿಗೆ ಕೊರತೆಯಾಗದಂತೆ ಕ್ರಮಕ್ಕೆ ಸೂಚನೆ

Share
Share

ಚಿಕ್ಕಮಗಳೂರು: ಕುಡಿಯುವ ನೀರು, ಜಾನುವಾರುಗಳ ಮೇವಿಗೆ ಕೊರತೆಯಾಗದಂತೆ ಕ್ರಮ ಕೈಗೊಳ್ಳುವಂತೆ ಇಂಧನ, ಪ್ರವಾಸೋದ್ಯಮ ಹಾಗೂ ಚಿಕ್ಕಮಗಳೂರು ಜಿಲ್ಲೆ ಪ್ರಕೃತಿ ವಿಕೋಪ ಮೇಲುಸ್ತುವಾರಿ ಸಚಿವರಾದ ಕೆ.ಜೆ.ಜಾರ್ಜ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ೨೦೨೬-೨೭ನೇ ಸಾಲಿನ ಪ್ರಕೃತಿ ವಿಕೋಪ ನಿರ್ವಹಣೆಯ ತಯಾರಿ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಅಧಿಕಾರಿಗಳು ಮೊದಲೇ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿಗೆ ಕೊರತೆಯಾಗದಂತೆ ನೋಡಿಕೊಳ್ಳಬೇಕು.

ಜುಲೈ, ಆಗಸ್ಟ್ ಮಾಹೆಯಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರಕ್ಕೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಪಹಣಿ ಹೊಂದಿರುವ ರೈತರಿಗೆ ರಸಗೊಬ್ಬರ, ಬಿತ್ತನೆ ಬೀಜವನ್ನು ಬೇಡಿಕೆಗೆ ಅನುಗುಣವಾಗಿ ವಿತರಿಸುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಸಭೆಗೆ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಾರ್ಚ್ ೧ ರಿಂದ ಮೇ ೩೧ರವರೆಗೆ ೧೫೯.೫ ಮಿ.ಮೀ. ಮಳೆಯಾಗಬೇಕಾಗಿತ್ತು. ಆದರೆ ೧೫೩.೨ ಮಿ.ಮೀ. ಮಳೆಯಾಗಿದೆ. ಜೂನ್ ೧ ರಿಂದ ಜುಲೈ ೩೦ರವರೆಗೆ ೩೨೭.೭ ಮಿ.ಮೀ. ಮಳೆಯಾಗಬೇಕಾಗಿತ್ತು. ಆದರೆ ೧೩೨.೬ ಮಿ.ಮೀ. ಮಳೆಯಾಗಿದೆ.

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಹೆಸರು, ಉದ್ದು, ಅಲಸಂದೆ, ನೆಲಗಡಲೆ, ಹತ್ತಿ, ಸೂರ್ಯಕಾಂತಿ, ಎಳ್ಳು, ಮುಸುಕಿನ ಜೋಳವನ್ನು ೯೭,೦೪೫ ಹೆಕ್ಟೇರ್ ಕೃಷಿಭೂಮಿಯಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತು. ಆದರೆ ೨,೯೫೪ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ.

ಮಳೆ ಬಾರದಿರುವ ಕಾರಣ ಬಿತ್ತನೆ ಕಾರ್ಯ ವಿಳಂಬವಾಗಿದೆ. ಮುಂದೆ ರಾಗಿ, ಮುಸುಕಿನ ಜೋಳ, ಭತ್ತ, ತೊಗರಿ, ಅವರೆ, ಹುರುಳಿ, ಸಿರಿಧಾನ್ಯಗಳನ್ನು ಬಿತ್ತನೆ ಮಾಡುವ ರೈತರು ಭೂಮಿಯನ್ನು ಹದ ಮಾಡಿಕೊಂಡಿದ್ದಾರೆ. ೧೩,೮೭೩ ಹೆಕ್ಟೇರ್ ಭೂ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನು ಬಿತ್ತನೆ ಮಾಡುವ ಗುರಿ ಹೊಂದಲಾಗಿದ್ದು,

೩,೮೩೮ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಈರುಳ್ಳಿ, ಮೆಣಸಿನಕಾಯಿ, ಟೊಮ್ಯಾಟೋವನ್ನು ಬಿತ್ತನೆ ಮಾಡಲಾಗಿದ್ದು, ಮಳೆ ಕಡಿಮೆಯಾದ ಕಾರಣ ಆಲೂಗಡ್ಡೆ ಬಿತ್ತನೆ ಕಡಿಮೆಯಾಗಿದೆ. ಶೇ.೨೭.೬೬ ಮಾತ್ರ ಬಿತ್ತನೆಯಾಗಿದೆ ಎಂದರು.

ಈಗಾಗಲೇ ಸರಬರಾಜು ೫೪,೮೮೧ ಮೆಟ್ರಿಕ್ ಟನ್ ರಸಗೊಬ್ಬರ ಮಾರಾಟವಾಗಿದ್ದು, ೫೧,೪೮೬ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದೆ. ಇನ್ನೂ ೫೦ ಸಾವಿರ ಮೆಟ್ರಿಕ್ ಟನ್ ರಸಗೊಬ್ಬರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ರಸಗೊಬ್ಬರ ಮತ್ತು ಬಿತ್ತನೆ ಬೀಜಕ್ಕೆ ಕೊರತೆಯಾಗದಂತೆ ಕ್ರಮ ವಹಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಮೇ ಹಾಗೂ ಜೂನ್‌ನಲ್ಲಿ ಮಳೆ ಹಾಗೂ ಗಾಳಿಯಿಂದಾಗಿ ೧೫ ಶಾಲಾ ಕಟ್ಟಡಗಳಿಗೆ ಹಾನಿಯಾಗಿದ್ದು, ಅಂದಾಜು ೩೦ ಲಕ್ಷ ರೂ. ನಷ್ಟ ಸಂಭವಿಸಿದೆ. ೩ ಅಂಗನವಾಡಿ ಕಟ್ಟಡಗಳಿಗೆ ಹಾನಿಯಾಗಿದ್ದು, ೭.೫೦ ಲಕ್ಷ ಅಂದಾಜು ನಷ್ಟವಾಗಿದೆ. ಹಾನಿಗೆ ಒಳಗಾಗಿದ್ದ ೧೮೭೦ ವಿದ್ಯುತ್ ಕಂಬಗಳನ್ನು ಬದಲಾಯಿಸಲಾಗಿದ್ದು, ಕಂಬದ ಅಂದಾಜು ವೆಚ್ಚ ೨೯೫ ಲಕ್ಷ ರೂ.ಗಳಾಗಿವೆ. ಅಲ್ಲದೆ, ಹಾನಿಗೆ ಒಳಗಾಗಿದ್ದ ೩೮ ಕಿ.ಮೀ.ನಷ್ಟು ವಿದ್ಯುತ್ ಸಂಪರ್ಕ ತಂತಿಯನ್ನು ಅಳವಡಿಸಲಾಗಿದೆ. ಇದಕ್ಕೆ ೨೭.೯೫ ಲಕ್ಷ ರೂ. ವೆಚ್ಚವಾಗಿದೆ.

೩೭.೮೩ ಹೆಕ್ಟೇರ್‌ನಲ್ಲಿ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದ್ದು, ೨೧.೫೫ ಲಕ್ಷ ರೂ. ನಷ್ಟವುಂಟಾಗಿದೆ. ೮೮ ರೈತರಿಗೆ ಪರಿಹಾರ ವಿತರಿಸಬೇಕಾಗಿದೆ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕಿ ಮಂಗಳ ಸಭೆಗೆ ಮಾಹಿತಿ ನೀಡಿದರು.

ತರೀಕೆರೆ ತಾಲ್ಲೂಕು ಲಕ್ಕವಳ್ಳಿ ವ್ಯಾಪ್ತಿಯ ಅಡಿಕೆ ತೋಟಗಳಲ್ಲ್ಲಿ ೮೦೦ಕ್ಕೂ ಹೆಚ್ಚು ಮರಗಳು ಗಾಳಿಯಿಂದ ನೆಲಕ್ಕುರುಳಿದ್ದು, ಈ ಬಗ್ಗೆ ನಷ್ಟದ ಅಂದಾಜು ಮಾಡಿ ಪರಿಹಾರ ವಿತರಿಸುವಂತೆ ತರೀಕೆರೆ ಕ್ಷೇತ್ರದ ಶಾಸಕ ಜಿ.ಹೆಚ್.ಶ್ರೀನಿವಾಸ್ ಸಬೆಯ ಗಮನ ಸೆಳೆದಾಗ, ಸಚಿವರು ಈ ಬಗ್ಗೆ ಪ್ರತಿಕ್ರಿಯಿಸಿ, ಅಗತ್ಯ ಕ್ರಮ ವಹಿಸುವಂತೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ ಮಾಹಿತಿ ನೀಡಿ, ೨೦ ಗ್ರಾಮ ಪಂಚಾಯಿತಿ ವ್ಯಾಪ್ರಿಯ ೨೭ ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ೮ ಹಳ್ಳಿಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಇವುಗಳಲ್ಲಿ ಮೂರು ಇಲಾಖಾ ಟ್ಯಾಂಕರ್‌ಗಳು, ಐದು ಖಾಸಗಿ ಟ್ಯಾಂಕರ್‌ಗಳಾಗಿವೆ. ಉಳಿದಂತೆ ೧೯ ಖಾಸಗಿ ಬೋರ್‌ವೆಲ್‌ಗಳನ್ನು ಪಡೆದು ನೀರು ಸರಬರಾಜು ನೀಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ೮ ತಿಂಗಳಿಗಾಗುವಷ್ಟು ಮೇವು ದಾಸ್ತಾನಿದ್ದು, ಮೇವಿಗೆ ಯಾವುದೇ ಕೊರತೆ ಇಲ್ಲ ಎಂದು ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕರು ಮಾಹಿತಿ ನೀಡಿದರು. ಶಾಸಕರಾದ ಟಿ.ಡಿ.ರಾಜೇಗೌಡ, ಕೆ.ಎಸ್.ಆನಂದ್, ಹೆಚ್.ಡಿ.ತಮ್ಮಯ್ಯ, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ ಅವರು ಮಳೆಯಿಂದ ಹಾನಿಗೆ ಒಳಗಾದ ರಸ್ತೆ ದುರಸ್ತಿ ಬಗ್ಗೆ, ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಮತ್ತು ಪೂರೈಕೆ ಬಗ್ಗೆ ಸಭೆಯ ಗಮನ ಸೆಳೆದರು.

ಮತ್ತೆ ಸಚಿವರು ಮಾತನಾಡಿ, ರಸಗೊಬ್ಬರ ಹಾಗೂ ಬಿತ್ತನೆ ಬೀಜವನ್ನು ರೈತರಿಗೆ ಬೇಡಿಕೆಗೆ ಅನುಗುಣವಾಗಿ ವಿತರಿಸಲು ಕ್ರಮ ವಹಿಸಬೇಕೆಂದು ಸೂಚಿಸಿದರು. ಸಭೆಯಲ್ಲಿ ರಾಜ್ಯ ಪರಿಸರ ಮೌಲ್ಯ ಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫು ನಿಗಮದ ಅಧ್ಯಕ್ಷ ಬಿ.ಹೆಚ್.ಹರೀಶ್, ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಕೆಪಿಟಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ರಾಮ್ ಪ್ರಸಾದ್, ಸಚಿವರ ಆಪ್ತ ಕಾರ್ಯದರ್ಶಿ ಡಿ.ಎಂ.ಸತೀಶ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Instructions to take action to prevent shortage of drinking water and livestock fodder

Share

Leave a comment

Leave a Reply

Your email address will not be published. Required fields are marked *

Don't Miss

30 ಲಕ್ಷ ರೂಪಾಯಿ ಹಣ ನೀಡುವಂತೆ ಬ್ಲಾಕ್‌ ಮೆಲ್

ಚಿಕ್ಕಮಗಳೂರು: ಎಡಿಟ್ ಮಾಡಿದ ಗೃಹಿಣಿಯೊಬ್ಬರ ಫೋಟೋಗಳನ್ನು ಅವರ ಮೊಬೈಲ್‌ಗೇ ಕಳುಹಿಸಿ, ಬರೋಬ್ಬರಿ 30 ಲಕ್ಷ ರೂಪಾಯಿ ಹಣ ನೀಡುವಂತೆ ಕಿಡಿಗೇಡಿಗಳು ಬೇಡಿಕೆಯಿಟ್ಟಿದ್ದ ಘಟನೆ ಬೆಳಕಿಗೆ ಬಂದಿದೆ. ಒಂದು ವೇಳೆ ಹಣ ನೀಡದಿದ್ದರೆ...

ವಿವಾಹಿತ ಮಹಿಳೆಗಾಗಿ ನಡೆದ ಜಗಳದಲ್ಲಿ ಕೈ ಕಟ್

ಎನ್.ಆ‌ರ್.ಪುರ: ವಿವಾಹಿತ ಮಹಿಳೆಯೊಬ್ಬರಿಗಾಗಿ ಇಬ್ಬರು ವ್ಯಕ್ತಿಗಳು ಲಾಂಗು ಮಚ್ಚಿನಿಂದ ಬಡಿದಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆ‌ರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಅಡಿಗೆಬೈಲು ಗ್ರಾಮದಲ್ಲಿ ನಡೆದಿದೆ. ಗಂಡನಿಂದ ದೂರವಿದ್ದ ಮಹಿಳೆಯೊಬ್ಬರ ವಿಚಾರವಾಗಿ ಶೇಷಗಿರಿ...

Related Articles

5 ದಶಕದ ಬಳಿಕ ನಿಡಘಟ್ಟ ಆಂಜನೇಯಸ್ವಾಮಿ ದೇವಾಲಯಕ್ಕೆ ದಲಿತರ ಪ್ರವೇಶ

ಚಿಕ್ಕಮಗಳೂರು: ಇತಿಹಾಸ ಪ್ರಸಿದ್ಧ ಗಟಾಗಟಿ ದೇವರು ಎಂದು ಕರೆಯಲ್ಪಡುವ ಕಡೂರು ತಾಲೂಕಿನ ನಿಡಘಟ್ಟದ ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ...

ದೇಶ ವ್ಯಾಪ್ತಿ ಛಾತ್ರೋನ್ ಕಿ ಗೂಂಚ್ ವಿದ್ಯಾರ್ಥಿ ಆಂದೋಲನ

ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರ ನೇತೃತ್ವದಲ್ಲಿ ಛಾತ್ರೋನ್ ಕಿ ಗೂಂಚ್ ಎಂಬ ದೇಶ ವ್ಯಾಪಿ...

ಗೃಹಜ್ಯೋತಿ ಯೋಜನೆ ಅರ್ಹ ಗುರುತಿಸುವ ಉದ್ದೇಶದಿಂದ ಪರಿಷ್ಕರಣೆ

ಚಿಕ್ಕಮಗಳೂರು: ಸರ್ಕಾರ ಗೃಹಜ್ಯೋತಿ ಯೋಜನೆಯನ್ನು ಸಾರಾಸಗಟಾಗಿ ಪರಿಷ್ಕರಿಸುವ ಅಥವಾ ಕಡಿತಗೊಳಿಸುವ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು...

ಅತ್ತಿಗೆಯನ್ನೇ ಹತ್ಯೆಗೈದ ಆರೋಪಿಗೆ 7 ವರ್ಷಗಳ ಕಠಿಣ ಜೈಲು ಶಿಕ್ಷೆ

ಚಿಕ್ಕಮಗಳೂರು:  ಜಿಲ್ಲೆಯ ತರೀಕೆರೆ ತಾಲ್ಲೂಕಿನ ಬಾವಿಕೆರೆ ಗ್ರಾಮದಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ಅತ್ತಿಗೆಯನ್ನೇ...