ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಮಾದಕ ದ್ರವ್ಯ ಸೇವನೆ ವಿರುದ್ಧ ಪೊಲೀಸರು ವಿಶೇಷ ಕಾರ್ಯಾಚರಣೆ ಚುರುಕುಗೊಳಿಸಿದ್ದು ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ ಸೇವಿಸಿ ರಂಪಾಟ ಮಾಡುತ್ತಿದ್ದ ಹಾಗೂ ಸಾರ್ವಜನಿಕರ ನೆಮ್ಮದಿಗೆ ಭಂಗ ತರುತ್ತಿದ್ದ ಒಟ್ಟು ಏಳು ಮಂದಿ ಅಸಾಮಿಗಳನ್ನು ಬೇರೆ ಬೇರೆ ಠಾಣಾ ವ್ಯಾಪ್ತಿಯಲ್ಲಿ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ನಡೆಸಿದಾಗ ಗಾಂಜಾ ಸೇವನೆ ದೃಢಪಟ್ಟಿದೆ.
ಚಿಕ್ಕಮಗಳೂರಿನ ರಾಮನಹಳ್ಳಿಯ ಎಂ.ಜಿ. ಪಾರ್ಕ್ ರಸ್ತೆಯಲ್ಲಿ ಗಾಂಜಾ ಸೇವಿಸಿ ತೂರಾಡುತ್ತಿದ್ದ ತಮಿಳು ಕಾಲೋನಿ ನಿವಾಸಿ ಅಬ್ದುಲ್ ಅಮನ್ ಎಂಬಾತನನ್ನು ಬಸವನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದು, ಇದೇ ಠಾಣಾ ವ್ಯಾಪ್ತಿಯ ಹಾಲೇನಹಳ್ಳಿಯ ಮೌಂಟೈನ್ ವ್ಯೂ ಶಾಲೆಯ ಬಳಿ ಸಾರ್ವಜನಿಕ ರಸ್ತೆಯಲ್ಲಿ ನಶೆಯಲ್ಲಿ ತೂರಾಡುತ್ತಿದ್ದ ಬಲ್ಟ್ ಫ್ಯಾಕ್ಟರಿ ನಿವಾಸಿ ಸೈಯದ್ ಇರ್ಫಾನ್ ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.
ಮತ್ತೊಂದು ಕಾರ್ಯಾಚರಣೆಯಲ್ಲಿ, ಚಿಕ್ಕಮಗಳೂರು ಟೌನ್ ಸಂತೆ ಮೈದಾನದ ಕಟ್ಟೆಯ ಹತ್ತಿರ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾ ಗಾಂಜಾ ಸೇವನೆ ಮಾಡುತ್ತಿದ್ದ ಮೂವರನ್ನು ನಗರ ಠಾಣೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಬಂಧಿತರನ್ನು ಹಣ್ಣಿನ ವ್ಯಾಪಾರಿ ಸೈಯದ್ ಮುಬಾರಕ್, ಮೊಹಮದ್ ಅಪ್ತಾಬ್ ಮತ್ತು ವೆಲ್ಲಿಂಗ್ ಕೆಲಸ ಮಾಡುವ ಸೈಯದ್ ಅಬ್ದುಲ್ ಸಾಹಿಲ್ ಎಂದು ಗುರುತಿಸಲಾಗಿದ್ದು, ಮೂವರ ಮೇಲೂ ಕಾನೂನು ಕ್ರಮ ಜರುಗಿಸಲಾಗಿದೆ. ಕೊಪ್ಪ ಪಟ್ಟಣದ ಗುಣವಂತೆ ರಸ್ತೆಯ ಕುವೆಂಪು ನಗರದ 1ನೇ ಕ್ರಾಸ್ ಬಳಿ ಅಡ್ಡಾದಿಡ್ಡಿಯಾಗಿ ನಡೆದುಕೊಂಡು ಹೋಗುತ್ತಾ ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟುಮಾಡುತ್ತಿದ್ದ ಗಾಂಜಾ ಗಿರಾಕಿಯೊಬ್ಬನನ್ನು ಕೊಪ್ಪ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇತ್ತ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಹುಲಿಕೆರೆ ಗ್ರಾಮದ ಬಸ್ ನಿಲ್ದಾಣದ ಬಳಿ ಜೋರು ಧ್ವನಿಯಲ್ಲಿ ಕೂಗಾಡುತ್ತಾ ಮತ್ತು ನಶೆಯಲ್ಲಿ ತೂರಾಡುತ್ತಾ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದ ಸಂತೋಷ್ ಎಂಬಾತನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದು, ಜಿಲ್ಲೆಯಲ್ಲಿ ಡ್ರಗ್ಸ್ ವ್ಯಸನಿಗಳ ವಿರುದ್ಧ ಪೊಲೀಸರು ತಮ್ಮ ಪೆಡ್ಡಿಂಗ್ ವಿರೋಧಿ ನಿಲುವನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ.
Seven arrested for rampage after consuming marijuana
Leave a comment