ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಡಿ.ಎನ್.ಜೀವರಾಜ್ ಆಯ್ಕೆಯಾದರು. ಚುನಾವಣಾಧಿಕಾರಿ ಗೌತಮ್ ಕುಮಾರ್ ಶೆಟ್ಟಿ ಅಧಿಕೃತವಾಗಿ ಶಾಸಕ ಸ್ಥಾನದ ಪ್ರಮಾಣಪತ್ರವನ್ನು ಸೋಮವಾರ ಡಿ.ಎನ್.ಜೀವರಾಜ್ ಅವರಿಗೆ ಹಸ್ತಾಂತರಿಸಿದರು.
ಶನಿವಾರ ನಡೆದಿದ್ದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆಯಲ್ಲಿ ಅಂತಿಮವಾಗಿ ಡಿ.ಎನ್.ಜೀವರಾಜ್ ಅವರು ಟಿ.ಡಿ.ರಾಜೇಗೌಡಗಿಂತ 52 ಮತಗಳ ಅಂತರದಿಂದ ಬಹುಮತ ಪಡೆದಿದ್ದರು. ಆದರೆ, ಅಂದು ಅಧಿಕೃತ ಘೋಷಣೆ ಮಾಡಿರಲಿಲ್ಲ. ಹೈಕೋರ್ಟ್ ಗೆ ಮರು ಎಣಿಕೆಯ ವರದಿ ಸಲ್ಲಿಸುವುದಾಗಿ ಚುನಾವಣಾ ಅಧಿಕಾರಿಗಳು ಹೇಳಿಕೆ ನೀಡಿದ್ದರು.
ಭಾನುವಾರ ತಡರಾತ್ರಿ ಚುನಾವಣಾ ಅಧಿಕಾರಿಗಳು ಡಿ.ಎನ್.ಜೀವರಾಜ್ ಅವರಿಗೆ ಅಧಿಕೃತ ಘೋಷಣಾ ಪತ್ರವನ್ನು ಇಮೇಲ್ ಮೂಲಕ ಕಳಿಸಿದ್ದರು. ಸೋಮವಾರ ಬೆಳಿಗ್ಗೆ ಡಿ.ಎನ್.ಜೀವರಾಜ್ ಅವರಿಗೆ ಚುನಾವಣಾಧಿಕಾರಿಗಳು ಶಾಸಕರಾಗಿ ಆಯ್ಕೆಯಾಗಿರುವ ಪ್ರಮಾಣಪತ್ರವನ್ನು ನೀಡಿದರು. ಶೃಂಗೇರಿ ಕ್ಷೇತ್ರದ ನೂತನ ಶಾಸಕರಾಗಿ ಡಿ.ಎನ್.ಜೀವರಾಜ್ ಆಯ್ಕೆಯಾಗಿದ್ದಾರೆ.
2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ಬಿಜೆಪಿಯನ್ನು ಕ್ಲೀನ್ಸ್ವಿಪ್ ಮಾಡಿ ಐದು ಸ್ಥಾನಗಳಲ್ಲಿ ಐದು ಸ್ಥಾನಗಳನ್ನು ಕಾಂಗ್ರೆಸ್ ಪಡೆದುಕೊಂಡಿತ್ತು. ಚಿಕ್ಕಮಗಳೂರು ಕ್ಷೇತ್ರದಿಂದ ಎಚ್.ಡಿ.ತಮ್ಮಯ್ಯ, ಮೂಡಿಗೆರೆ ಕ್ಷೇತ್ರದಿಂದ ನಯನ ಮೋಟಮ್ಮ, ಶೃಂಗೇರಿ ಕ್ಷೇತ್ರದಿಂದ ಟಿ.ಡಿ.ರಾಜೇಗೌಡ, ಕಡೂರು ಕ್ಷೇತ್ರದಿಂದ ಕೆ.ಎಸ್.ಆನಂದ್ ಹಾಗೂ ತರೀಕೆರೆ ಕ್ಷೇತ್ರದಿಂದ ಜಿ.ಎಚ್.ಶ್ರೀನಿವಾಸ್ ಅವರು ಆಯ್ಕೆಯಾಗಿದ್ದರು.
ಐದು ಕ್ಷೇತ್ರಗಳಲ್ಲಿ ಸಂಪೂರ್ಣ ಸೋಲು ಅನುಭವಿಸಿದ್ದ ಬಿಜೆಪಿ ಮುಖಭಂಗಕ್ಕೆ ಒಳಗಾಗಿತ್ತು. ಆದರೆ, ಡಿ.ಎನ್.ಜೀವರಾಜ್ ಅವರ ಮೂರು ವರ್ಷಗಳ ಕಾನೂನು ಹೋರಾಟದಲ್ಲಿ ಶೃಂಗೇರಿ ಕ್ಷೇತ್ರದ ಶಾಸಕ ಸ್ಥಾನವನ್ನು ಕಾಂಗ್ರೆಸ್ ಪಕ್ಷ ಕಳೆದು ಕೊಂಡಿದ್ದು, ಐದು ಕ್ಷೇತ್ರಗಳಲ್ಲಿ ನಾಲ್ಕು ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷ ಕುಸಿದಿದೆ.
Acceptance of certificate of MLA seat from D.N. Jeevaraj
Leave a comment