ಮೂಡಿಗೆರೆ : ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಹಲ್ಲೆ ಮತ್ತು ಕೊಲೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಜನ ಆರೋಪಿಗಳಿಗೆ ನ್ಯಾಯಾಲಯವು ದಂಡ ವಿಧಿಸಿ ತೀರ್ಪು ನೀಡಿದೆ. 2019ರ ಮೇ 29ರಂದು ಸಲ್ಲಿ ಗ್ರಾಮದ ನಿವಾಸಿ ಅಣ್ಣಪ್ಪ ಎಂಬುವವರ ಶೌಚಾಲಯದ ಗುಂಡಿಯ ಮೇಲೆ ಮರದ ಕಂಬ ನೆಡುವ ವಿಚಾರವಾಗಿ ಗಲಾಟೆ ನಡೆದಿತ್ತು.
ಈ ವೇಳೆ ಚಂದ್ರಪ್ಪ ಬಿ ಎಂ ಸೇರಿದಂತೆ ಒಟ್ಟು ಒಂಬತ್ತು ಜನರು ಗುಂಪು ಕಟ್ಟಿಕೊಂಡು ಅಣ್ಣಪ್ಪ ಹಾಗೂ ಅವರ ಕುಟುಂಬದವರ ಮೇಲೆ ಕಲ್ಲು ಮತ್ತು ಕುಡುಗೋಲಿನಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಬಣಕಲ್ ಪೊಲೀಸ್ ಠಾಣೆಯಲ್ಲಿ ಐಪಿಸಿ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ಮೂಡಿಗೆರೆಯ ಘನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯವು ಆರೋಪಿಗಳಾದ ಚಂದ್ರಪ್ಪ ಬಿ ಎಂ, ರಮೇಶ್ ಬಿ ಎಂ. ಸೀತಮ್ಮ, ಸುರೇಂದ್ರ ಎಸ್ ಆರ್. ಚಂದ್ರಮ್ಮ, ಲಲಿತಾ, ಸುಚಿತ್ರಾ, ಪದ್ಮಮ್ಮ ಮತ್ತು ವಸಂತ ಅವರ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಒಟ್ಟು 54,000 ರೂಪಾಯಿಗಳ ದಂಡ ವಿಧಿಸಿ ಆದೇಶಿಸಿದೆ.
ದಂಡದ ಒಟ್ಟು ಮೊತ್ತದಲ್ಲಿ 45,000 ರೂಪಾಯಿಗಳನ್ನು ಸಂತ್ರಸ್ತ ಗಾಯಾಳುಗಳಿಗೆ ಪರಿಹಾರವಾಗಿ ನೀಡಬೇಕು ಎಂದು ಸೂಚಿಸಿರುವ ನ್ಯಾಯಾಲಯವು. ದಂಡ ಪಾವತಿಸಲು ತಪ್ಪಿದಲ್ಲಿ ಎರಡು ತಿಂಗಳ ಕಾರಾಗೃಹ ಶಿಕ್ಷೆಯನ್ನು ಅನುಭವಿಸಬೇಕು ಎಂದು ತನ್ನ ತೀರ್ಪಿನಲ್ಲಿ ತಿಳಿಸಿದೆ.
ಈ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸುವಲ್ಲಿ ಸಿ.ಹೆಚ್.ಸಿ. ಬಾಬು ಎಸ್. ಅವರು ಪ್ರಮುಖ ಪಾತ್ರ ವಹಿಸಿದ್ದರು. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಶ್ರೀಮತಿ ರೂಪ ಟಿ. ಅವರು ಸಮರ್ಥವಾಗಿ ವಾದ ಮಂಡಿಸಿದ್ದರು ಹಾಗೂ ಮ.ಪಿ.ಸಿ. ಶ್ರೀಮತಿ ವರ್ಷಿಣಿ ಬಿ ಕೆ ಅವರು ನ್ಯಾಯಾಲಯದ ಕರ್ತವ್ಯದಲ್ಲಿ ಸಹಕರಿಸಿದ್ದರು. ನ್ಯಾಯಾಲಯದ ಈ ತೀರ್ಪು ಕಾನೂನು ಉಲ್ಲಂಘಿಸುವವರಿಗೆ ಎಚ್ಚರಿಕೆಯ ಸಂದೇಶ ನೀಡಿದೆ.
Fines for those accused in murder threat case
Leave a comment