ಚಿಕ್ಕಮಗಳೂರು: ಜಿಲ್ಲೆಯ ಗರ್ಭಿಣಿ ಮತ್ತು ಬಾಣಂತಿಯರಿಗೆ ಇನ್ಮುಂದೆ ವಾರಕ್ಕೆ ಆರು ಮೊಟ್ಟೆಯಂತೆ ತಿಂಗಳಿಗೆ 25 ಮೊಟ್ಟೆ ವಿತರಣೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಚಿಕ್ಕಮಗಳೂರಿನ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಸೂಚನೆ ನೀಡಿದ್ದಾರೆ.
ವಿಧಾನಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಅವರು, ಜಿಲ್ಲೆಯ ಗರ್ಭಿಣಿ ಮತ್ತು ಬಾಣಂತಿಯರಿಗೆ ಎಷ್ಟು ದಿನಗಳಿಗೆ ಅಂಗನವಾಡಿ ಮೂಲಕ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರು. ಈ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಸಂತೋಷ್ ನಾಯ್ಕ್, ತಿಂಗಳಿಗೆ 25 ರಂತೆ ಎರಡು ಬಾರಿ 15 ಮತ್ತು 10 ರಂತೆ ವಿತರಣೆ ಮಾಡಲಾಗುವುದು ಎಂದು ಉತ್ತರಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಧನಂಜಯ ಸರ್ಜಿ, ಇಲಾಖೆಯಿಂದ ಮೊಟ್ಟೆ ವಿತರಣೆ ಮಾಡುವ ಎಲ್ಲ ಗರ್ಭಿಣಿ ಹಾಗೂ ಬಾಣಂತಿಯರ ಮನೆಯಲ್ಲಿಒ ಪ್ರೀಡ್ಜ್ ಇದೆಯಾ?, ಒಂದು ಮೊಟ್ಟೆಯಲ್ಲಿ ಸಾಮಾನ್ಯ ವಾತಾವರಣದಲ್ಲಿ ಎರಡ್ಮೂರು ದಿನ ಮಾತ್ರ ಸಂಗ್ರಹಿಸಬಹುದು. ಇಲ್ಲವಾದರೆ ಕೆಟ್ಟು ಹೋಗಲಿದೆ. ಇಲಾಖೆಯಿಂದ ನೀಡುವ ಮೊಟ್ಟೆಯಲ್ಲಿ ಇಲ್ಲವೇ ದಿನ ಸಂಗ್ರಹಿಸಿಟ್ಟು ಗರ್ಭಿಣಿ, ಬಾಣಂತಿಯರು ಸೇವೆಸಿದರೆ ಏನು ಗತಿ ಎಂದು ಆತಂಕ ವ್ಯಕ್ತಪಡಿಸಿದರು. ಆಗ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ವಾರಕ್ಕೆ ಒಂದು ಬಾರಿ ಮೊಟ್ಟೆ ವಿತರಣೆ ಮಾಡುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ 5,156 ಗರ್ಭಿಣಿಯರಿಗೆ ಹಾಗೂ 5,690 ಬಾಣಂತಿಯರಿಗೆ ವಾರಕ್ಕೆ ಒಂದು ಬಾರಿ ತಲಾ ಆರು ಮೊಟ್ಟೆಯಂತೆ ಹಾಗೂ ತಿಂಗಳಲ್ಲಿ ಒಂದು ವಾರ ಏಳು ಮೊಟ್ಟೆಯಂತೆ ವಿತರಣೆ ಮಾಡುವುದಕ್ಕೆ ಕ್ರಮ ವಹಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಸಂತೋಷ್ ನಾಯ್ಕ್ ವಿವರಿಸಿದರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಕ್ಷಾತೀತವಾಗಿ ಎಲ್ಲ ಸದಸ್ಯರು ಕಾಡಾನೆ, ಕಾಡು ಕೋಣ, ಕರಡಿ ದಾಳಿ ಮತ್ತು ಓಡಾಟಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳ ಕ್ರಮ ಏನು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಾತ್ರ ಪಶ್ಚಿಮ ಘಟ್ಟ ಪ್ರದೇಶ ಇಲ್ಲ, ಬೇರೆ ಬೇರೆ ರಾಜ್ಯಕ್ಕೂ ವ್ಯಾಪಿಸಿದೆ. ಆ ರಾಜ್ಯದಲ್ಲಿ ಏನು ಕ್ರಮ ಕೈಗೊಳ್ಳಲಾಗಿದೆ. ಹೇಗೆ ನಿಯಂತ್ರಣ ಮಾಡಲಾಗುತ್ತಿದೆ ಎಂಬುದರ ಬಗ್ಗೆ ಅಧ್ಯಯನ ನಡೆಸಿ ಎಂದು ಸಲಹೆ ನೀಡಿದರು.
ಜತೆಗೆ, ಇತ್ತೀಚಿಗೆ ಚಿಕ್ಕಮಗಳೂರು ನಗರದ ಒಳಗೆ ಕರಡಿ ಓಡಾಟ ಹಾಗೂ ನಗರದ ಹೊರ ವಲಯದಲ್ಲಿ ಹುಲಿ ಕಾಣಿಸಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಆತಂಕ ವ್ಯಕ್ತಪಡಿಸಿದರು.
ಕಳೆದ ಒಂದು ವಾರದಲ್ಲಿ ಮೂರು ಮಂದಿಯ ಮೇಲೆ ಕಾಡಾನೆ ದಾಳಿ ಆಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಏನು ಕ್ರಮ ಕೈಗೊಂಡಿದೀರಿ?, ಕಾಡಾನೆ ಸೆರೆ ಹಿಡಿಯುವುದಕ್ಕೆ ಸಾವು ಆಗಬೇಕಾ, ಅಥವಾ ಬೀದಿಯಲ್ಲಿ ಪ್ರತಿಭಟನೆ ಆಗಬೇಕಾ ಎಂದು ಶೃಂಗೇರಿ ಶಾಸಕ ರಾಜೇಗೌಡ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು.
ಸಭೆಯಲ್ಲಿ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಶಾಸಕರಾದ ಟಿ.ಡಿ.ರಾಜೇಗೌಡ, ಎಚ್.ಡಿ.ತಮ್ಮಯ್ಯ,ಆನಂದ್, ವಿಧಾನಪರಿಷತ್ ಸದಸ್ಯರಾದ ಸಿ.ಟಿ.ರವಿ. ಧನಂಜಯ ಸರ್ಜಿ, ಭೋಜೇಗೌಡ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಹಾಜರಿದ್ದರು.
25 eggs distributed per month to pregnant and lactating women in the district
Leave a comment