ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕಾಡಾನೆ ಹಾವಳಿಯಿಂದ ಕಂಗೆಟ್ಟಿರುವ ರೈತರಿಗೆ ಸಾಂತ್ವನ ಹೇಳಬೇಕಾದ ಅರಣ್ಯ ಇಲಾಖೆಯ ಅಧಿಕಾರಿಯೇ ಈಗ ಲಂಚಕ್ಕಾಗಿ ಪೀಡಿಸಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.
ತಾಲೂಕಿನ ಕಣತಿ ಗ್ರಾಮದ ರೈತರೊಬ್ಬರು ಕಾಡಾನೆ ದಾಳಿಯಿಂದಾಗಿ ಸುಮಾರು 65 ಅಡಿಕೆ ಮರಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದರು. ಈ ನಷ್ಟದ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ಕೊಡಿಸಬೇಕಾದ ಕಣತಿ ಬೀಟ್ನ ಡಿ.ಆರ್.ಎಫ್.ಓ ವೀರಭದ್ರ ನಾಯಕ್ ಎಂಬ ಅಧಿಕಾರಿ, ನೇರವಾಗಿಯೇ ರೈತನ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.
“ಖರ್ಚಿಗೆ ಏನಾದ್ರೂ ಕೊಡ್ತೀನಿ ಅಂದ್ರೆ ಜಾಸ್ತಿ ಬರೀತೀನಿ, ಇಲ್ಲಾಂದ್ರೆ 65 ಅಡಿಕೆ ಅಂತಲೇ ಬರೀತೀನಿ” ಎಂದು ರೈತನಿಗೆ ಅಧಿಕಾರಿ ಆಮಿಷವೊಡ್ಡಿದ್ದಾರೆ. ಅಂದರೆ ಹಣ ನೀಡಿದರೆ ನಷ್ಟದ ಪ್ರಮಾಣವನ್ನು ಹೆಚ್ಚಿಸಿ ಬರೆದು ಹೆಚ್ಚಿನ ಪರಿಹಾರ ಕೊಡಿಸುವುದಾಗಿ, ಇಲ್ಲವಾದಲ್ಲಿ ಕೇವಲ ನೈಜ ನಷ್ಟವನ್ನಷ್ಟೇ ದಾಖಲಿಸುವುದಾಗಿ ಹೇಳಿದ್ದಾರೆ.
ರೈತರಿಂದ ಹಣ ಸಿಗಬಹುದು ಎಂದು ಸುಮಾರು ಹತ್ತು ಸೆಕೆಂಡುಗಳ ಕಾಲ ಕಾದು ನೋಡಿದ ಅಧಿಕಾರಿ, ಲಂಚ ನೀಡಲು ರೈತ ಒಪ್ಪದಿದ್ದಾಗ ಕೊನೆಗೆ 65 ಮರಗಳ ನಷ್ಟವೆಂದೇ ದಾಖಲಿಸಿದ್ದಾರೆ. ಕಾಡಾನೆ ದಾಳಿಯಿಂದ ಬದುಕು ಕಳೆದುಕೊಳ್ಳುತ್ತಿರುವ ಮಲೆನಾಡಿನ ರೈತರ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಳ್ಳಲು ಯತ್ನಿಸಿದ ಅಧಿಕಾರಿಯ ನಡೆ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ.
Forest Department official demands bribe to provide compensation
Leave a comment