ಚಿಕ್ಕಮಗಳೂರು: ಪ್ರಸಕ್ತ ರಾಜ್ಯ ಬಜೆಟ್ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಯಾವುದೇ ರೀತಿಯ ಅನುದಾನ ಬಿಡುಗಡೆ ಮಾಡದಿರುವುದನ್ನು ಖಂಡಿಸಿ ನಾವು ಬದುಕಿದ್ದೇವೆ, ಅನ್ಯಾಯದ ವಿರುದ್ಧ ಪ್ರತಿರೋಧಿಸುತ್ತೇವೆ, ಅದಕ್ಕೆ ಹೆಮ್ಮೆಯಿಂದ ನಡೆಯುತ್ತಿದ್ದೇವೆ ಎಂಬ ಸ್ವಾಭಿಮಾನಿ ನಡಿಗೆ-೨೦೨೬ ನ್ನು ಮಾ.೧೧ ರಂದು ಬೆಳಗ್ಗೆ ೧೧ ಗಂಟೆಗೆ ಅಜಾದ್ ಪಾರ್ಕ್ ವೃತ್ತದಿಂದ ಸರ್ಕಾರಿ ನೌಕರರ ಭವನದವರೆಗೆ ನಡೆಯಲಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಲಿಂಗತ್ವ ಅಲ್ಪಸಂಖ್ಯಾತರ ಮುಖಂಡ ಮೇಘ ಮಲ್ನಾಡ್, ೨೦೨೬-೨೭ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಯಾವುದೇ ಹೊಸ ಅನುದಾನ ಅಥವಾ ಸಮಗ್ರ ಕಾರ್ಯಕ್ರಮಗಳನ್ನು ಘೋಷಿಸದೇ ಸಂಪೂರ್ಣ ನಿರ್ಲಕ್ಷ್ಯ ವಹಿಸಿರುವುದನ್ನು ತೀವ್ರವಾಗಿ ಖಂಡಿಸಿದರು.
ತಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಈಗಾಗಲೇ ಚಿಕ್ಕಮಗಳೂರಿನಲ್ಲಿ ಸ್ವಾಭಿಮಾನಿ ನಡಿಗೆಯನ್ನು ನಡೆಸಲಾಗುತ್ತಿದ್ದು, ಸತತ ಹೋರಾಟದ ಫಲವಾಗಿ ಕಳೆದ ದಶಕದಲ್ಲಿ ಒಂದೇ ಲಿಂಗದ ವ್ಯಕ್ತಿಗಳ ನಡುವಿನ ಸಮ್ಮತಿಯ ಲೈಂಗಿಕ ವರ್ತನೆಯ ನಿರಪರಾಧಿಕರಣ, ಲಿಂಗತ್ವ ಅಲ್ಪಸಂಖ್ಯಾತರಿಗೆ ಹಕ್ಕುಗಳ ಮಾನ್ಯತೆ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಶೇ.೧ ರಷ್ಟು ಮೀಸಲಾತಿ ಸೇರಿದಂತೆ ಪ್ರಮುಖ ಕಾನೂನು ನೀತಿಗಳು ಬದಲಾವಣೆಗಳಾಗಿವೆ ಎಂದರು.
ರಾಜ್ಯಸರ್ಕಾರ ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತ ಬಸ್ ಪ್ರಯಾಣ, ಗೃಹಲಕ್ಷ್ಮಿ ಯೋಜನೆಯಲ್ಲಿ ಸೇರಿಸಿ ಸಮುದಾಯದ ಸರ್ವೆ ನಡೆಸಿ, ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ ಎಂದ ಅವರು, ಕೂಡಲೇ ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು, ಸರ್ವತೋಮುಖ ಅಭಿವೃದ್ಧಿಗಾಗಿ ಕನಿಷ್ಠ ೨೫೦ ಕೋಟಿ ರೂಗಳನ್ನು ಮೀಸಲಿಡಬೇಕೆಂದು ಒತ್ತಾಯಿಸಿದರು.
ಸಮುದಾಯದವರಿಗಾಗಿ ವಸತಿ, ಹಾಸ್ಟೆಲ್, ಶಾರ್ಟ್ ಸ್ಟೇ ಹೋಂಗಳನ್ನು ತಕ್ಷಣ ಒದಗಿಸಬೇಕು, ಪ್ರತಿ ವರ್ಷ ಕನಿಷ್ಠ ೫೦೦ ಮನೆಗಳನ್ನು ಹಂಚಿಕೆ ಮಾಡಬೇಕು, ಜೀವನೋಪಾಯ, ಆಹಾರ ಮತ್ತು ಸಾಮಾಜಿಕ ಭದ್ರತೆಗಾಗಿ ಕನಿಷ್ಠ ಪ್ರತಿ ವ್ಯಕ್ತಿಗೆ ೨ ಎಕರೆ ಕೃಷಿ ಯೋಗ್ಯ ಭೂಮಿಯನ್ನು ನೀಡಬೇಕು ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಮುದಾಯದ ಫಾತಿಮಾನಾಜಿಯಾ, ಆದಿಲ್. ಪ್ರೀತಮ್, ಮೋಹನ್ಕುಮಾರ್ ಉಪಸ್ಥಿತರಿದ್ದರು.
Pride walk for gender minorities on March 11th
Leave a comment