Home namma chikmagalur chikamagalur ತೇಗೂರು ಸರ್ಕಾರಿ ಶಾಲೆಯ ಶತಮಾನೋತ್ಸವ
chikamagalurHomeLatest Newsnamma chikmagalur

ತೇಗೂರು ಸರ್ಕಾರಿ ಶಾಲೆಯ ಶತಮಾನೋತ್ಸವ

Share
Share

ಚಿಕ್ಕಮಗಳೂರು:  ನಮ್ಮ ಜೀವನದಲ್ಲಿ ನಾವು ಗಳಿಸುವ ಸಂಪತ್ತು ಶಾಶ್ವತವಲ್ಲ, ಆದರೆ ನಾವು ಪಡೆಯುವ ಶಿಕ್ಷಣ ಮತ್ತು ಜ್ಞಾನ ಮಾತ್ರ ನಮ್ಮೊಂದಿಗೆ ಕೊನೆಯವರೆಗೂ ಇರುವ ಶಾಶ್ವತ ಆಸ್ತಿಯಾಗಿದೆ ಎಂದು ಇಂಧನ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ತೇಗೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ’ಶತಮಾನೋತ್ಸವ ಸಂಭ್ರಮ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ ನಾನು ಕೂಡ ಕೊಡಗಿನ ಇಂತಹದೇ ಒಂದು ಸರ್ಕಾರಿ ಶಾಲೆಯಲ್ಲಿ ಓದಿ ಬಂದವನು. ಇಂದು ನಾನು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಲು ಅಂದು ಆ ಶಾಲೆ ನೀಡಿದ ಶಿಕ್ಷಣ ಮತ್ತು ಶಿಸ್ತಿನ ತರಬೇತಿಯೇ ಕಾರಣ ಎಂದು ಹೇಳಿದರು.

ಹಳೆಯ ಕಾಲದ ಶಾಲಾ ವ್ಯವಸ್ಥೆಯನ್ನು ನೆನಪಿಸಿಕೊಂಡ ಸಚಿವರು, ನಮ್ಮ ಶಾಲೆಯಲ್ಲಿ ಕಾಫಿ ತೋಟ ಮತ್ತು ಗದ್ದೆಗಳಿದ್ದವು. ನಾವು ವಿದ್ಯಾರ್ಥಿಗಳೇ ಅಲ್ಲಿ ಕೆಲಸ ಮಾಡುತ್ತಿದ್ದೆವು. ಇದರಿಂದ ನಮಗೆ ಯಾವುದೇ ಕೆಲಸ ಮಾಡಿದರೂ ಅದಕ್ಕೊಂದು ಗೌರವವಿದೆ ಎಂಬ ’ಕಾಯಕದ ಗೌರವ’ ಬಾಲ್ಯದಲ್ಲಿಯೇ ಮೈಗೂಡಿತು. ಅಂದಿನ ಶಿಕ್ಷಕರು ನಮಗೆ ಕೇವಲ ಪಾಠವನ್ನಷ್ಟೇ ಅಲ್ಲದೆ, ಜೀವನದ ಮೌಲ್ಯಗಳನ್ನು ಕಲಿಸಿಕೊಟ್ಟಿದ್ದಾರೆ ಎಂದು ಸ್ಮರಿಸಿದರು.

ತೇಗೂರು ಶಾಲೆಯ ಹಳೆಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಒಗ್ಗೂಡಿ ಶಾಲೆಯನ್ನು ಅಭಿವೃದ್ಧಿಪಡಿಸಿರುವುದನ್ನು ಶ್ಲಾಘಿಸಿದ ಸಚಿವರು, ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ದಾನಿಗಳ ಪಾತ್ರ ಬಹಳ ದೊಡ್ಡದು. ಅಭಿವೃದ್ಧಿ ಸಮಿತಿಗಳು ಮತ್ತು ದಾನಿಗಳು ಮುಂದೆ ಬಂದು ಸರ್ಕಾರಿ ಶಾಲೆಗಳನ್ನು ನಮ್ಮ ಶಾಲೆ ಎಂದು ಭಾವಿಸಿ ಕೆಲಸ ಮಾಡಿದರೆ, ನಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲು ಸಾಧ್ಯ ಎಂದು ಕರೆ ನೀಡಿದರು.

ಸರಸ್ವತಿಯನ್ನು ಬಂಡೆಯ ಮೇಲೆ ಮತ್ತು ಲಕ್ಷ್ಮಿಯನ್ನು ಕಮಲದ ಮೇಲೆ ಕೂರಿಸಿರುವ ಪುರಾಣದ ಉದಾಹರಣೆ ನೀಡಿದ ಅವರು, ಸಂಪತ್ತು ಒಬ್ಬರ ಕೈಯಲ್ಲಿ ಶಾಶ್ವತವಾಗಿ ಇರುವುದಿಲ್ಲ, ಅದು ಚಂಚಲ. ಆದರೆ ವಿದ್ಯೆ ಹಂಚಿದಷ್ಟು ಬೆಳೆಯುತ್ತದೆ ಮತ್ತು ಅದು ನಮ್ಮನ್ನು ಸದಾ ರಕ್ಷಿಸುತ್ತದೆ. ದೇಶದ ಪ್ರಗತಿಯಲ್ಲಿ ಯುವಜನತೆ ಮತ್ತು ಶಿಕ್ಷಕರ ಪಾತ್ರ ಬಹಳ ದೊಡ್ಡದಿದೆ ಎಂದರು.

ಇಂದಿನ ತಲೆಮಾರಿನ ಮಕ್ಕಳು ಸಾಮಾಜಿಕ ಜಾಲತಾಣಗಳ ಪ್ರಭಾವಕ್ಕೆ ಒಳಗಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಇವೆ. ವಿದ್ಯಾರ್ಥಿಗಳು ಅದರಲ್ಲಿರುವ ಒಳ್ಳೆಯ ಅಂಶಗಳನ್ನು ಮಾತ್ರ ಸ್ವೀಕರಿಸಬೇಕು. ಈ ನಿಟ್ಟಿನಲ್ಲಿ ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು ಎಂದು ಕಿವಿಮಾತು ಹೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಶಿಕ್ಷಣ ಮತ್ತು ಜನಸಾಮಾನ್ಯರ ಏಳಿಗೆಗಾಗಿ ಉತ್ತಮ ಬಜೆಟ್ ನೀಡಿದ್ದು, ಶಾಲಾ-ಕಾಲೇಜುಗಳ ಮೂಲ ಸೌಕರ್ಯಕ್ಕೆ ಆದ್ಯತೆ ನೀಡುತ್ತಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಯೊಂದು ನೂರು ವರ್ಷಗಳನ್ನು ಪೂರೈಸಿರುವುದು ಆ ಭಾಗದ ಶೈಕ್ಷಣಿಕ ಪ್ರಗತಿ ಮತ್ತು ಸಾಮಾಜಿಕ ಸುಧಾರಣೆಯ ಪ್ರತೀಕವಾಗಿದೆ ಎಂದು ಬಣ್ಣಿಸಿದರು.

ಇಂದಿನ ಆಧುನಿಕ ಯುಗದಲ್ಲಿ ಗ್ರಾಮೀಣ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್, ಶುದ್ಧ ಕುಡಿಯುವ ನೀರು ಹಾಗೂ ಸುಸಜ್ಜಿತ ಕಟ್ಟಡದಂತಹ ಮೂಲಭೂತ ಸೌಕರ್ಯಗಳನ್ನು ಸರ್ಕಾರ ಒದಗಿಸುತ್ತಿದೆ. ಶಿಕ್ಷಣವು ಕೇವಲ ಅಕ್ಷರ ಜ್ಞಾನಕ್ಕೆ ಸೀಮಿತವಾಗದೆ, ಜಾತಿ ಮತ್ತು ಲಿಂಗ ಆಧಾರಿತ ಅಸಮಾನತೆಯನ್ನು ಹೋಗಲಾಡಿಸಿ ಬಡತನ ನಿರ್ಮೂಲನೆಗೆ ದಾರಿಯಾಗಬೇಕು ಎಂಬ ಮಹಾತ್ಮಾ ಗಾಂಧೀಜಿಯವರ ಕನಸನ್ನು ಈ ಶಾಲೆಗಳು ನನಸು ಮಾಡುತ್ತಿವೆ ಎಂದು ತಿಳಿಸಿದರು.

ನೆಲ್ಸನ್ ಮಂಡೇಲಾರಂತಹ ಮಹಾನ್ ನಾಯಕರ ಹೋರಾಟದ ಹಾದಿಯನ್ನು ಸ್ಮರಿಸಿದ ಶಾಸಕರು, ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಛಲ ವಿದ್ಯಾರ್ಥಿಗಳಲ್ಲಿ ಇರಬೇಕು. ಶಾಲೆಯ ಅಭಿವೃದ್ಧಿಯಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘ, ಗ್ರಾಮ ಪಂಚಾಯಿತಿ ಮತ್ತು ಎನ್‌ಜಿಒಗಳ ಪಾತ್ರವನ್ನು ಶ್ಲಾಘಿಸಿದ ಅವರು, ಹಳೆಯ ವಿದ್ಯಾರ್ಥಿಗಳು ತಾವು ಕಲಿತ ಶಾಲೆಗೆ ಮತ್ತು ಬೆಳೆಸಿದ ಪೋಷಕರಿಗೆ ಕೃತಜ್ಞತೆ ಸಲ್ಲಿಸುವುದು ಅವರ ಕರ್ತವ್ಯವಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ಮೈಸೂರು ಸಂಸ್ಥಾನವನ್ನು ಆಳಿದ ಜಯಚಾಮರಾಜೇಂದ್ರ ಒಡೆಯರ್ ಅವರು ಶಿಕ್ಷಣಕ್ಕೆ ನೀಡಿದ ಆದ್ಯತೆಯಿಂದಾಗಿ ಇಂದು ಈ ಶಾಲೆ ನೂರು ವರ್ಷಗಳನ್ನು ಪೂರೈಸಿದೆ ಎಂದು ಶ್ಲಾಘಿಸಿದರು. ಒಡೆಯರ್ ಅವರು ನಾಡಿನಾದ್ಯಂತ ಕಾರ್ಖಾನೆಗಳನ್ನು ಸ್ಥಾಪಿಸುವುದರ ಜೊತೆಗೆ ಜನಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು ಎಂಬುದನ್ನು ಹೆಮ್ಮೆಯಿಂದ ನೆನಪಿಸಿಕೊಂಡರು. ಶಿಕ್ಷಣ ಮತ್ತು ಆರೋಗ್ಯ ಪ್ರತಿಯೊಬ್ಬ ನಾಗರಿಕನ ಸಂವಿಧಾನಬದ್ಧ ಹಕ್ಕಾಗಿದ್ದು, ಅಂಬೇಡ್ಕರ್ ಅವರ ಆಶಯದಂತೆ ಈ ರಂಗಗಳಲ್ಲಿ ಕ್ರಾಂತಿಯಾಗಬೇಕಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಇಂಗ್ಲಿಷ್ ಭಾಷೆಯ ಕಲಿಕೆಯನ್ನು ನಾವು ವಿರೋಧಿಸುವುದಿಲ್ಲ, ಆದರೆ ಅತಿಯಾದ ಮೋಹದಿಂದಾಗಿ ನಮ್ಮ ಭಾಷೆ, ಸಂಸ್ಕೃತಿ ಮತ್ತು ಮೂಲ ಗುರುತನ್ನು ಕಳೆದುಕೊಳ್ಳಬಾರದು. ವ್ಯಾವಹಾರಿಕವಾಗಿ ಇಂಗ್ಲಿಷ್ ಕಲಿಕೆ ಅನಿವಾರ್ಯವಾಗಿದ್ದರೂ, ಅದು ನಮ್ಮ ಮಾತೃಭಾಷೆಯ ಸ್ಥಾನವನ್ನು ಪಡೆಯಬಾರದು. ನಾವು ಯಾರೆಂಬುದನ್ನು ತಿಳಿಸುವ ಅಸ್ಮಿತೆಯು ನಮ್ಮ ಭಾಷೆ ಮತ್ತು ಸಂಸ್ಕೃತಿಯಲ್ಲಿ ಅಡಗಿದೆ. ಕನ್ನಡವನ್ನು ಮರೆತು ಕೇವಲ ಇಂಗ್ಲಿಷ್ ಅನ್ನು ಅಪ್ಪಿಕೊಳ್ಳುವುದು ನಮ್ಮ ಸಾಂಸ್ಕೃತಿಕ ಅವನತಿಗೆ ಕಾರಣವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು. ಶಾಲೆಯು ಕೇವಲ ಅಕ್ಷರ ಕಲಿಸುವ ತಾಣವಲ್ಲ, ಅದು ನಮ್ಮ ಪರಂಪರೆಯನ್ನು ರಕ್ಷಿಸುವ ಕೇಂದ್ರವಾಗಬೇಕು. ಈ ಶಾಲೆಯನ್ನು ಶಾಶ್ವತವಾಗಿ ಅಭಿವೃದ್ಧಿಪಡಿಸಲು ನಾನು ಸದಾ ಬೆಂಬಲ ನೀಡುತ್ತೇನೆ ಎಂದು ಭರವಸೆ ನೀಡಿದರು. ಶಾಲೆಯ ಹಿತಾಸಕ್ತಿಗಾಗಿ ನಡೆಯುವ ಯಾವುದೇ ಒಳ್ಳೆಯ ಕಾರ್ಯಗಳಿಗೆ ತನು, ಮನ, ಧನದಿಂದ ಸಹಕಾರ ನೀಡಲಾಗುವುದು ಎಂದರು.

ಶ್ರೀ ಬಸವತತ್ವ ಪೀಠದ ಡಾ.ಬಸವ ಮರುಳಸಿದ್ದ ಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಡಿ.ಎಚ್. ಹರೀಶ್, ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ರುದ್ರಪ್ಪ ಮತ್ತು ಎಸ್‌ಡಿಎಂಸಿ ಅಧ್ಯಕ್ಷೆ ಭವ್ಯ ಜಗದೀಶ್ ಭಾಗವಹಿಸಿದ್ದರು. ದಲಿತ್ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕೆ.ಟಿ.ರಾಧಾಕೃಷ್ಣ, ನಿವೃತ್ತ ಉಪನ್ಯಾಸಕ ಬಿ.ತಿಪ್ಪೇರುದ್ರಪ್ಪ ಹಾಗೂ ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಸೇರಿದಂತೆ ಹಲವು ಮುಖಂಡರು ಇದ್ದರು.

Centenary of Tegur Government School

Share

Leave a comment

Leave a Reply

Your email address will not be published. Required fields are marked *

Don't Miss

ಕಳಸದಲ್ಲಿ ಬೃಹತ್ ಮರ ಬಿದ್ದು ಆಟೋರಿಕ್ಷಾ ಜಖಂ

ಕಳಸ: ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಗುಡ್ಡೆಮಕ್ಕಿ ಗ್ರಾಮದಲ್ಲಿ ಭಾರಿ ಗಾಳಿ-ಮಳೆಯ ಆರ್ಭಟಕ್ಕೆ ಸುಧೀರ್ ಆಚಾರ್ ಎಂಬುವವರ ಮನೆ ಮುಂದೆ ನಿಲ್ಲಿಸಲಾಗಿದ್ದ ಆಟೋರಿಕ್ಷಾ ಹಾಗೂ ಅವರ ಮನೆಯ ಮೇಲೆ ಬೃಹತ್ ಮರವೊಂದು...

ಜಿಲ್ಲೆಯ 5 ತಾಲೂಕುಗಳಲ್ಲಿ ಶಾಲೆ – ಅಂಗನವಾಡಿಗಳಿಗೆ ರಜೆ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ವರುಣನ ಆರ್ಭಟ ಮುಂದುವರಿದಿದೆ. ಭಾರಿ ಮಳೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹಾಗೂ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದೆ. ನಾಳೆ...

Related Articles

ಕಡೂರು ತಾಲ್ಲೂಕಿನಲ್ಲಿ ಬರದ ಆತಂಕ

ಕಡೂರು: ಮುಂಗಾರು ಮಳೆಯ ಕೊರತೆಯಿಂದ ಕಡೂರು ತಾಲ್ಲೂಕಿನಲ್ಲಿ ಬರದ ಆತಂಕ ಎದುರಾಗಿದ್ದು, ಕುಡಿಯುವ ನೀರು, ಜಾನುವಾರುಗಳ...

ಜು.21ಕ್ಕೆ ಕೊಪ್ಪಳದಲ್ಲಿ ಬೃಹತ್ ರೈತ ಸಮಾವೇಶ

ಚಿಕ್ಕಮಗಳೂರು : ೪೬ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಕೊಪ್ಪಳದಲ್ಲಿ ಬೃಹತ್ ರೈತ ಸಮಾವೇಶವನ್ನು ಜು.೨೧...

ಅಕ್ರಮವಾಗಿ ಸಾಗಿಸುತ್ತಿ ಕಾಡುಜಾತಿಯ ಮರಗಳ ದಿಮ್ಮಿಗಳ ವಶ

ಮೂಡಿಗೆರೆ: ಕಾಡುಜಾತಿಯ ಮರಗಳ ದಿಮ್ಮಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದುದನ್ನು ತಾಲ್ಲೂಕಿನ ಹಂಡುಗುಳಿ ಗ್ರಾಮದ ಸಮೀಪ ಅರಣ್ಯ ಇಲಾಖೆ...

ಜವಾಹರ್ ನವೋದಯ ವಿದ್ಯಾಲಯದಲ್ಲಿ ಪ್ರವೇಶಕ್ಕೆ ಆಹ್ವಾನ

ಚಿಕ್ಕಮಗಳೂರು:  ಸೀಗೋಡುವಿನ ಪಿ.ಎಂ.ಶ್ರೀ ಜವಾಹರ ನವೋದಯ ವಿದ್ಯಾಲಯವು  ವಸತಿಯುತ ಸಹಶಿಕ್ಷಣ ವಿದ್ಯಾಲಯವಾಗಿದ್ದು, ಗ್ರಾಮೀಣ ಪ್ರದೇಶದ ಪ್ರತಿಭಾವಂತ...