ಶೃಂಗೇರಿ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದ ಈಡಿಗ ಸಮುದಾಯದ ಭವನದಲ್ಲಿ ನಡೆಯಬೇಕಿದ್ದ ವಿವಾಹವೊಂದು ಮದುವೆ ಮಂಟಪದಲ್ಲೇ ಮುರಿದುಬಿದ್ದಿದೆ.
41 ವರ್ಷದ ದೀಕ್ಷಿತ್ ಹೆಗ್ಡೆ ಎಂಬುವವರ ಜೊತೆ 29 ವರ್ಷದ ಯುವತಿಯ ಮದುವೆ ನಿಶ್ಚಯವಾಗಿತ್ತು. ಆದರೆ, ವರನು ತನ್ನ ವಯಸ್ಸಿನ ಬಗ್ಗೆ ಸುಳ್ಳು ಹೇಳಿದ್ದಾನೆಂದು ಆರೋಪಿಸಿ ವಧು ಮದುವೆಯನ್ನೇ ನಿರಾಕರಿಸಿದ್ದಾಳೆ.
ವರನ ಮೇಲೆ ಈ ಹಿಂದೆ ಇದ್ದ ಪೊಲೀಸ್ ಪ್ರಕರಣಗಳನ್ನು ಮುಚ್ಚಿಡಲಾಗಿದೆ ಮತ್ತು ಆತನ ತಾಯಿಯ ಅನಾರೋಗ್ಯದ ವಿಷಯವನ್ನೂ ಮರೆಮಾಚಲಾಗಿದೆ ಎಂಬುದು ಯುವತಿಯ ಪ್ರಬಲ ಆರೋಪವಾಗಿದೆ.
ಮದುವೆಗೆ ಮೊದಲು ಯಾವುದೇ ಪ್ರಶ್ನೆ ಕೇಳಿದರೂ ಮದುವೆಯಾದ ನಂತರ ಉತ್ತರಿಸುವುದಾಗಿ ವರ ಹೇಳುತ್ತಿದ್ದನೆನ್ನಲಾಗಿದ್ದು, ಇದೀಗ ಅನಾಮಧೇಯ ವ್ಯಕ್ತಿಗಳು ವರನ ಬಗ್ಗೆ ಐದು ಪುಟಗಳ ದೂರು ಪತ್ರವನ್ನು ಯುವತಿಗೆ ತಲುಪಿಸಿದ್ದಾರೆ.
ಈ ಬೆಳವಣಿಗೆಯಿಂದ ಆಘಾತಕ್ಕೊಳಗಾದ ಯುವತಿ ಮಂಟಪದಿಂದ ಹೊರ ನಡೆದಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಸಿಡಿಪಿಒ ಅಧಿಕಾರಿಗಳು ಮನವೊಲಿಸಲು ಪ್ರಯತ್ನಿಸಿದರೂ ಆಕೆ ಮದುವೆಗೆ ಸಮ್ಮತಿಸಿಲ್ಲ.
ವಧುವಿಗೆ ಇದು ಎರಡನೇ ಮದುವೆಯಾಗಿದ್ದು, ಆಕೆಗೆ ಒಂಬತ್ತು ವರ್ಷದ ಮಗನಿದ್ದಾನೆ. ಆದರೆ, ವರನಿಗೆ ಇದು ಮೊದಲ ವಿವಾಹವಾಗಿತ್ತು. ಸದ್ಯ ಈ ವಿಚಿತ್ರ ಪ್ರಕರಣವು ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
A marriage broke up in the wedding hall in Sringeri.
Leave a comment